ಡೆಂಘೀ, ಬಾಲ್ಯ ವಿವಾಹ ತಡೆಗೆ ಕ್ರಮವಹಿಸಿ: ತಹಶೀಲ್ದಾರ್ ಗಿರೀಶ್

| Published : Jul 17 2024, 12:50 AM IST

ಸಾರಾಂಶ

ಶಿವಮೊಗ್ಗ ನಗರದ ತಹಶೀಲ್ದಾರ್‌ ಕಚೇರಿಯಲ್ಲಿ ವಿವಿಧ ಯೋಜನೆಗಳ ಸಮನ್ವಯ ಸಮಿತಿ ಹಾಗೂ ತಾಲೂಕು ಮಟ್ಟದ ಟಾಸ್ಕ್‌ ಫೋರ್ಸ್ ಸಮಿತಿ ಸಭೆ ನೆರವೇರಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮನೆಯಲ್ಲಿರುವ ಫ್ರಿಡ್ಜ್‌ನಲ್ಲೂ ಸಹ ಲಾರ್ವಾ ಉತ್ಪತ್ತಿಯಾಗುವ ಸಂಭವವಿದ್ದು, ಆರೋಗ್ಯ ಕಾರ್ಯಕರ್ತರು ಮನೆ ಮನೆ ಲಾರ್ವಾ ಸಮೀಕ್ಷೆ ವೇಳೆ ಫ್ರಿಡ್ಜ್‌ ಅನ್ನೂ ಪರಿಶೀಲಿಸಬೇಕು ಎಂದು ತಹಶೀಲ್ದಾರ್ ಗಿರೀಶ್ ಸೂಚನೆ ನೀಡಿದರು.

ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ವಿವಿಧ ಯೋಜನೆಗಳ ಸಮನ್ವಯ ಸಮಿತಿ ಹಾಗೂ ತಾಲೂಕು ಮಟ್ಟದ ಟಾಸ್ಕ್‌ ಫೋರ್ಸ್ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಡೆಂಘೀ ನಿಯಂತ್ರಣದ ಸಲುವಾಗಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಆಶಾ, ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತರು ಮನೆ ಮನೆ ಲಾರ್ವಾ ಸಮೀಕ್ಷೆಗೆ ಬಂದಾಗ ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು.

ಪ್ರತಿ ಶುಕ್ರವಾರ ನೀರು ಶೇಖರಿಸುವ ಬಕೆಟ್, ಬ್ಯಾರೆಲ್ ಇತರೆ ವಸ್ತುಗಳನ್ನು ಖಾಲಿ ಮಾಡಿ ಸ್ವಚ್ಛಗೊಳಿಸಿ ಒಣಗಿಸಿ ಮತ್ತೆ ತುಂಬೇಕು. ಹಾಗೂ ನೀರಿನ ಅವಶ್ಯಕ ಶೇಖರಣೆಗೆ ಮೀನುಗಾರಿಕೆ ಇಲಾಖೆಯಿಂದ ಲಾರ್ವಾ ತಿನ್ನುವ ಗಪ್ಪಿ ಮೀನುಗಳನ್ನು ತಂದು ಬಿಡಬಹುದು ಎಂದು ತಿಳಿಸಿದರು.

ಶಿವಮೊಗ್ಗ ಸಿಡಿಪಿಒ ಸಿ.ಗಂಗಾಬಾಯಿ ಮಾತನಾಡಿ, 2024-25 ನೇ ಸಾಲಿನ ಜೂನ್‌ವರೆಗೆ ತಾಲೂಕಿನಲ್ಲಿ ಒಟ್ಟು 22 ಬಾಲ್ಯ ವಿವಾಹ ಪ್ರಕರಣ ವರದಿಯಾಗಿದ್ದು, 6 ವಿವಾಹಗಳನ್ನು ತಡೆಯಲಾಗಿದೆ. ಮಹಿಳೆಯರ ಮತ್ತು ಮಕ್ಕಳ ಸಾಗಾಟ ನಿರ್ಮೂಲನೆ ಮತ್ತು ಮಕ್ಕಳ ರಕ್ಷಣೆಗಾಗಿ ಎಲ್ಲ ಗ್ರಾ.ಪಂ ಗಳಲ್ಲಿ ಮಕ್ಕಳ ಸರ್ವೇ ಮಾಡಲಾಗಿದ್ದು, ಕಾವಲು ಸಮಿತಿ ಸಭೆಗಳನ್ನು ನಡೆಸಲಾಗಿದೆ. ಜೂನ್‌ವರೆಗೆ 194 ಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್ ನೀಡಲಾಗಿದೆ. ಭೇಟಿ ಬಚಾವೋ ಭೇಟಿ ಪಡಾವೋ ಕಾರ್ಯ ಕ್ರಮದಡಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಅಧಿನಿಯಮದಡಿ ಜೂನ್‍ವರೆಗೆ 35 ಪ್ರಕರಣ ದಾಖಲಾಗಿದ್ದು 20 ಪ್ರಕರಣ ಗಳನ್ನು ಮುಕ್ತಾಯಗೊಳಿಸಲಾಗಿದೆ. ಆಪ್ತ ಸಮಾಲೋಚನೆ ಹಂತದಲ್ಲಿ ಉಳಿದ ಪ್ರಕರಣಗಳು ಇವೆ ಎಂದು ಮಾಹಿತಿ ನೀಡಿದರು.

ನಗರದ ಆಲ್ಕೋಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ಕಚೇರಿ ಆವರಣದಲ್ಲಿ ದತ್ತು ಸ್ವೀಕಾರ ಕೇಂದ್ರದಲ್ಲಿ ಒಟ್ಟು 10 ಮಕ್ಕಳು ನೋಂದಣಿಯಾಗಿದ್ದಾರೆ. ಇಲ್ಲಿವರೆಗೆ 06 ಮಕ್ಕಳನ್ನು ದತ್ತು ನಿಡಲಾಗಿದೆ. ದತ್ತು ಪಡೆಯಲು ಇಚ್ಚೆಯುಳ್ಳವರು ಈ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, ತಾಲೂಕಿನಲ್ಲಿ ಜನವರಿಯಿಂದ ಜೂನ್‌ ಅಂತ್ಯದವರೆಗೆ ಒಟ್ಟು 94 ಡೆಂಘೀ ಮತ್ತು 24 ಚಿಕುನ್‍ ಗುನ್ಯ ಪ್ರಕರಣ ದಾಖಲಾಗಿವೆ. ಡೆಂಘೀ ನಿಯಂತ್ರಣಕ್ಕೆ ಎಲ್ಲ ರೀತಿಯ ಕ್ರಮಗಳನ್ನು ಜರುಗಿಸ ಲಾಗುತ್ತಿದ್ದು ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಲಾರ್ವಾ ಉತ್ಪತ್ತಿ ತಾಣಗಳ ಸರ್ವೇ ಮಾಡಿ, ಅರಿವು ಮೂಡಿಸುತ್ತಿದ್ದಾರೆ. ನಿಂತ ನೀರಿಗೆ ರಾಸಾಯನಿಕ ಹಾಗೂ ಫಾಗಿಂಗ್ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಬಾಲ್ಯ ವಿವಾಹ ತಡೆಗೆ ಸಹಕಾರ ಅಗತ್ಯ:

ಬಾಲ್ಯ ವಿವಾಹ ತಡೆಯುವುದು ಎಲ್ಲ ಅಧಿಕಾರಿ, ಸಿಬ್ಬಂದಿಗಳ ಕರ್ತವ್ಯವಾಗಿದೆ. ಜೊತೆಗೆ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಾರ್ವಜನಿಕರು ಬಾಲ್ಯ ವಿವಾಹ ಕಂಡುಬಂದರೆ ತಡೆಯುವಲ್ಲಿ ಸಹಕರಿಸಬೇಕು. ಎಲ್ಲರೂ ಜಾಗೃತರಾಗಿ ಸಹಕರಿಸಿದಲ್ಲಿ ಮಾತ್ರ ಬಾಲ್ಯ ವಿಹಾಹ ತಡೆ ಸಾಧ್ಯವಾಗುತ್ತದೆ ಎಂದು ತಹಶೀಲ್ದಾರ್‌ ಗಿರೀಶ್‌ ಹೇಳಿದರು.ಸಭೆಯಲ್ಲಿ ಬಿಇಓ ರಮೇಶ್, ಆರ್‌ಬಿಎಸ್‍ಕೆ ವೈದ್ಯರು, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರ ಹೇಮಂತ್ ರಾಜ್ ಅರಸ್, ಸಾಮಾಜಿಕ ಕಾರ್ಯಕರ್ತ ರವಿರಾಜ್, ವಕೀಲರು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.