ಜಾತ್ರಾ ಮೆರವಣಿಗೆಗೆ ಡಿಜೆ ಪರವಾನಗಿ ನಿರಾಕರಣೆ, ಲೋಕಾ ಚುನಾವಣೆ ಬಹಿಷ್ಕಾರ

| Published : Apr 23 2024, 12:53 AM IST

ಜಾತ್ರಾ ಮೆರವಣಿಗೆಗೆ ಡಿಜೆ ಪರವಾನಗಿ ನಿರಾಕರಣೆ, ಲೋಕಾ ಚುನಾವಣೆ ಬಹಿಷ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

9 ವರ್ಷಗಳ ನಂತರ ಪಟ್ಟಣದ ಆರಾಧ್ಯದೈವ ದುರ್ಗಾದೇವಿ ಹಾಗೂ ಮಾರಿಕಾಂಬಾ ದೇವರ ಜಾತ್ರೆ ನಡೆಯುತ್ತಿದ್ದು, 23ರಂದು ನಡೆಯುವ ದೇವಿಯ ಮೆರವಣಿಗೆಗೆ ಡಿ.ಜೆ. ಪರವಾನಗಿ ನೀಡದ ತಾಲೂಕಾಡಳಿತ, ಪೊಲೀಸ್ ಇಲಾಖೆ ಕ್ರಮ ಖಂಡಿಸಿ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಹಾಕಲು ನಿರ್ಧರಿಸಿದ್ದಾರೆ.

ರಟ್ಟಿಹಳ್ಳಿ: 9 ವರ್ಷಗಳ ನಂತರ ಪಟ್ಟಣದ ಆರಾಧ್ಯದೈವ ದುರ್ಗಾದೇವಿ ಹಾಗೂ ಮಾರಿಕಾಂಬಾ ದೇವರ ಜಾತ್ರೆ ನಡೆಯುತ್ತಿದ್ದು, 23ರಂದು ನಡೆಯುವ ದೇವಿಯ ಮೆರವಣಿಗೆಗೆ ಡಿ.ಜೆ. ಪರವಾನಗಿ ನೀಡದ ತಾಲೂಕಾಡಳಿತ, ಪೊಲೀಸ್ ಇಲಾಖೆ ಕ್ರಮ ಖಂಡಿಸಿ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಹಾಕಲು ನಿರ್ಧರಿಸಿದ್ದಾರೆ. ಅಲ್ಲದೆ ಯಾವುದೇ ರಾಜಕೀಯ ವ್ಯಕ್ತಿ ಪಟ್ಟಣದಲ್ಲಿ ಚುನಾವಣಾ ಪ್ರಚಾರ ಮಾಡುವಂತಿಲ್ಲ ಎಂದು ಜಾತ್ರಾ ಕಮಿಟಿ ಅಧ್ಯಕ್ಷರು, ಎಲ್ಲ ಸದಸ್ಯರು ಹಾಗೂ ಗ್ರಾಮಸ್ಥರು ತೀರ್ಮಾನವನ್ನು ಕೈಗೊಂಡಿದ್ದಾರೆ.

ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ದುರ್ಗಾದೇವಿ ಹಾಗೂ ಮಾರಿಕಾಂಬಾ ಜಾತ್ರೆಯ ಪ್ರಯುಕ್ತ ನಡೆದ ಶಾಂತಿಸಭೆಯಲ್ಲಿ ಗ್ರಾಮಸ್ಥರು ಹಾಗೂ ಕಮಿಟಿ ಸದಸ್ಯರು ತೀರ್ಮಾನ ಪ್ರಕಟಿಸಿದರು.

ಜಾತ್ರಾ ಕಮಿಟಿ ಅಧ್ಯಕ್ಷ ಶ್ರೀನಿವಾಸ ಬೈರೋಜಿಯವರ ಮಾತನಾಡಿ, ದೇವಿಯ ಜಾತ್ರೆ ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುತ್ತಿದ್ದು, ಕಳೆದ ಬಾರಿ ಕೊರೋನಾ ಮಹಾಮಾರಿ ಕಾರಣ ರಾಜ್ಯ ಸರ್ಕಾರದ ನಿಯಮದಂತೆ ಜಾತ್ರೆ ರದ್ದುಪಡಿಸಲಾಗಿತ್ತು. ಈ ಬಾರಿ 9 ವರ್ಷಗಳ ನಂತರ 22ರಿಂದ 26ರ ವರೆಗೆ ಜಾತ್ರೆ ನಡೆಸಲು ಗ್ರಾಮಸ್ಥರೆಲ್ಲರೂ ಅದ್ಧೂರಿಯಾಗಿ ನಡೆಸಲು ತೀರ್ಮಾನ ಕೈಗೊಂಡಿದ್ದು, ಕಳೆದ 3 ತಿಂಗಳಿನಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಾಳೆ ನಡೆಯುವ ದೇವಿಯ ಮೆರವಣಿಗೆಗೆ ಡಿ.ಜೆ. ಪರವಾನಗಿಯನ್ನು ಆಂತರಿಕ ಭದ್ರತೆ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಸೂಕ್ಷ್ಮ ವಾತಾವರಣದ ನೆಪವೊಡ್ಡಿ ಜಿಲ್ಲಾಡಳಿತ, ತಾಲೂಕಾಡಳಿತ ಹಾಗೂ ಪೊಲೀಸ್ ಇಲಾಖೆ ನಿರಾಕರಿಸಿದ ಕಾರಣ ಗ್ರಾಮಸ್ಥರೆಲ್ಲರೂ ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಿದರು ಹಾಗೂ ತಾಲೂಕಿನಾದ್ಯಂತ ಚುನಾವಣೆ ಪ್ರಚಾರ ನಡೆಯದಂತೆ ನೋಡಿಕೊಳ್ಳಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಸಿ., ತಹಸೀಲ್ದಾರ್ ಬಸವರಾಜ, ಡಿವೈಎಸ್‌ಪಿ ಗಿರೀಶ ಬೋಜಣ್ಣನವರ, ಸಿಪಿಐ ಲಕ್ಷ್ಮೀಪತಿ, ಪಿಎಸ್‌ಐ ಜಗದೀಶ ಜೆ., ಮಂಜುಳಾ, ಮಾರಿಕಾಂಬಾ ಹಾಗೂ ದುರ್ಗಾದೇವಿಯ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಪಿ.ಡಿ. ಬಸನಗೌಡ್ರ, ವಸಂತ ದ್ಯಾವಕ್ಕಳವರ, ರಾಜು ಪಾಟೀಲ್, ವೀರನಗೌಡ ಪ್ಯಾಟಿಗೌಡ್ರ, ಗಿರೀಶ ಅಂಗರಗಟ್ಟಿ, ಶಂಬಣ್ಣ ಗೂಳಪ್ಪನವರ, ರವಿ ಮುದಿಯಪ್ಪನವರ, ಬಸಣ್ಣ ಬಾಗೋಡಿ, ರವಿ ಹದಡೇರ, ರವಿ ಮುದ್ದಣ್ಣನವರ, ಬಸವರಾಜ ಆಡಿನವರ, ನವೀನ ಪಾಟೀಲ್, ನವೀನ ಮಾದರ, ಮುತ್ತು ಬೆಣ್ಣಿ, ಸಿದ್ದು ಹಲಗೇರಿ ಹಾಗೂ ನೂರಾರು ಗ್ರಾಮಸ್ಥರು ಇದ್ದರು.

ಪೊಲೀಸ್ ಇಲಾಖೆಯಿಂದ ಡಿಜೆ ಅನುಮತಿ ನೀಡಲು ಯಾವುದೇ ಪ್ರಾವಿಷನ್‌ ಇರುವುದಿಲ್ಲ. ಕಾರಣ ಕಮಿಟಿಯವರು ಡಿಜೆ ಹಚ್ಚಿದಲ್ಲಿ ಅವರು ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗೋಪಾಲ ಸಿ. ಹೇಳಿದ್ದಾರೆ.