ದಂತ ರಕ್ಷಣೆ, ಸ್ವಚ್ಛತೆ ಅತಿ ಮುಖ್ಯ: ಡಾ. ನವೀನ ಹಿರೇಗೌಡ್ರ

| Published : Jul 01 2024, 01:50 AM IST

ಸಾರಾಂಶ

ಮನುಷ್ಯನಿಗೆ ಆಹಾರ ಪದಾರ್ಥಗಳ ಸೇವನೆಗೆ ದಂತಗಳ ಪಾತ್ರ ಪ್ರಮುಖವಾಗಿದ್ದು, ಆದ್ದರಿಂದ ದಂತ (ಹಲ್ಲು) ರಕ್ಷಣೆ ಮತ್ತು ಸ್ವಚ್ಛತೆ‌ ಅತಿ ಮುಖ್ಯವಾಗಿದೆ.

ಉಚಿತ ದಂತ ತಪಾಸಣೆ, ಚಿಕಿತ್ಸೆ ಶಿಬಿರದಲ್ಲಿ ಡಾ. ಹಿರೇಗೌಡ್ರ

ಕನ್ನಡಪ್ರಭ ವಾರ್ತೆ ರೋಣ

ಮನುಷ್ಯನಿಗೆ ಆಹಾರ ಪದಾರ್ಥಗಳ ಸೇವನೆಗೆ ದಂತಗಳ ಪಾತ್ರ ಪ್ರಮುಖವಾಗಿದ್ದು, ಆದ್ದರಿಂದ ದಂತ (ಹಲ್ಲು) ರಕ್ಷಣೆ ಮತ್ತು ಸ್ವಚ್ಛತೆ‌ ಅತಿ ಮುಖ್ಯವಾಗಿದೆ ಎಂದು ಗದಗಿನ ದಂತ ತಜ್ಞ ಡಾ. ನವೀನ ಹಿರೇಗೌಡ್ರ ಹೇಳಿದರು.

ಭಾನುವಾರ ಪಟ್ಟಣದ ಕೃಪಾ ದಂತ ಕ್ಲಿನಿಕ್ (ಡಾ. ಲಕ್ಕೋಳ ಆಸ್ಪತ್ರೆ) ವತಿಯಿಂದ ಜರುಗಿದ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಲ್ಲುಗಳು ಮನುಷ್ಯನಿಗೆ ಬೇಕಾದ ಬಹುಮುಖ್ಯ ಅಂಗವಾಗಿದೆ. ಪ್ರತಿಯೊಬ್ಬರೂ ನಿತ್ಯ ಹಲ್ಲುಗಳ ಸ್ವಚ್ಛತೆ ಆದ್ಯತೆ ನೀಡಬೇಕು. ಹಲ್ಲು ಸ್ವಚ್ಛವಿದ್ದಲ್ಲಿ ದುರ್ವಾಸನೆ ನಿರ್ಮೂಲನೆಯಾಗಿ ಆರೋಗ್ಯಯುತ ಜೀವನ ನಡೆಸಬಹುದು. ನಿತ್ಯ ಬ್ರಷ್‌ನಲ್ಲಿ ಹಲ್ಲು ಉಜ್ಜುವ ಅಭ್ಯಾಸ ಇಟ್ಟಿಕೊಳ್ಳಬೇಕು. ಯಾವುದೇ ಆಹಾರ ಪದಾರ್ಥ ಸೇವಿಸಿದ ಮೇಲೆ ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು. ಹಲ್ಲು ಉಜ್ಜುವಾಗ ವಸಡಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಬೆಳಗ್ಗೆ ಮತ್ತು ರಾತ್ರಿ ತಪ್ಪದೆ ಬ್ರಷ್ ಮಾಡಬೇಕು. ಗ್ರಾಮೀಣ ಪ್ರದೇಶ ಜನತೆಗೆ ಅನುಕೂಲವಾಗುವಲ್ಲಿ ಡಾ. ಟಿ.ಎಸ್. ಲಕ್ಕೋಳ ಅತ್ಯಾಧುನಿಕ ಉಪಕರಣ ಒಳಗೊಂಡ ದಂತ ಚಿಕಿತ್ಸಾಲಯ ತೆರೆದಿದ್ದು, ಜನರು ಇದರ ಸದುಪಯೋಗ ಪಡೆಯಬೇಕು ಎಂದರು.

ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ. ಎಸ್.ಬಿ. ಲಕ್ಕೋಳ ಮಾತನಾಡಿ, ಕಣ್ಣು, ನಾಲಿಗೆ, ಮೂಗು, ಕಿವಿ, ಕೈ, ಕಾಲುಗಳು ಮನುಷ್ಯಗೆ ಎಷ್ಡು ಮುಖ್ಯವೋ, ಅದೇ ರೀತಿ ಹಲ್ಲುಗಳ ಪ್ರಾಮುಖ್ಯತೆಯೂ ಅಷ್ಟೇ ಮುಖ್ಯವಾಗಿರುತ್ತದೆ. ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳುವ ಜತೆಗೆ ಸೊಪ್ಪು, ತರಕಾರಿ, ಹಣ್ಣು, ರಾಗಿ ಮುದ್ದೆಯಂತಹ ಖನಿಜಯುಕ್ತ ಆಹಾರ ಸೇವಿಸುವುದರಿಂದ ಹಲ್ಲುಗಳ ರಕ್ಷಣೆ ಆಗುತ್ತದೆ ಎಂದರು.

ಕೃಪಾ ಕ್ಲಿನಿಕ್ ದಂತ ವೈದ್ಯ ಡಾ. ಟಿ.ಎಸ್. ಲಕ್ಕೋಳ ಮಾತನಾಡಿ, ಶಿಬಿರದ ಮೂಲಕ ತಪಸಾಣೆ ಮತ್ತು ಚಿಕಿತ್ಸೆ ಪಡೆದ ಶಿಬಿರಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚುವರಿ ಚಿಕಿತ್ಸೆ ಅವಶ್ಯವಿದ್ದಲ್ಲಿ ನೆರವಾಗಲೆಂದು ಗುರುತಿನ ಚೀಟಿ ನೀಡಲಾಗುವುದು. ಈ ಗುರುತಿನ ಚೀಟಿ ತಂದಲ್ಲಿ ಅಂಥವರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು ಎಂದರು.

ಶಿಬಿರದ ಮೂಲಕ 124 ಜನರ ದಂತ ತಪಾಸಣೆ ಮಾಡಲಾಯಿತು. ಇದರಲ್ಲಿ 75ಕ್ಕೂ ಹೆಚ್ವು ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಯಿತು. ಶಿಬಿರದಲ್ಲಿ ಪಾಲ್ಗೊಂಡು ಪ್ರತಿಯೊಬ್ಬರಿಗೂ ಉಚಿತವಾಗಿ ಬಿಪಿ ಮತ್ತು ಸುಗರ್ ತಪಾಸಣೆ ಹಾಗೂ ಹಲ್ಲುಗಳ ಎಕ್ಸರೇ ತೆಗೆಯಲಾಯಿತು. ಪ್ರತಿಯೊಬ್ಬರಿಗೂ ಪ್ರಮಾಣಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ. ಅವಿನಾಶ, ಡಾ. ದೀಪ್ತಿ ಯಳವತ್ತಿ, ಬಿ.ಎನ್. ಬಳಗಾನೂರ, ಪುರಸಭೆ ಮಾಜಿ ಉಪಾಧ್ಯಕ್ಷ ಮುತ್ತಣ್ಣ ಸಂಗಳದ, ತೋಟಪ್ಪ ನವಲಗುಂದ, ಪ್ರೊ. ಜೆ.ಬಿ. ಕಲ್ಲನಗೌಡ್ರ ಮುಂತಾದವರಿದ್ದರು.