ತನ್ನೂರಿನ ಶಾಲೆಗೆ ಹಣಕಾಸಿನ ನೆರವು ನೀಡಿದ ದಂತ ವೈದ್ಯ

| Published : Mar 18 2025, 12:32 AM IST

ಸಾರಾಂಶ

ಬೆಂಗಳೂರಿನಲ್ಲಿ ನೆಲೆಸಿದ್ದರೂ ತಮ್ಮ ಹುಟ್ಟೂರು ಮರೆಯದ ಡಾ. ಜಗದೀಶ್ ಹಾಗೂ ಡಾ. ಸುಧಾ ದಂಪತಿ ತಾಲೂಕಿನ ಅಜ್ಜೂರು ಗ್ರಾಮದ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಗುಣಮಟ್ಟದ ಶಿಕ್ಷಣ ದೊರಕಿಸಬೇಕು ಎಂಬ ಉದ್ದೇಶದಿಂದ 22 ಲಕ್ಷ ರು. ವೆಚ್ಚದಲ್ಲಿ ಹೊಸದಾಗಿ ಕೊಠಡಿ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೆ ಕಂಪ್ಯೂಟರ್ ಹಾಗೂ ಇಂಗ್ಲೀಷ್ ವಿಷಯದಲ್ಲಿ ಮಕ್ಕಳು ಪರಿಣಿತಿ ಸಾಧಿಸಲು ಆನ್‌ಲೈನ್ ತರಗತಿ ನಡೆಸುತ್ತಿದ್ದು ಅದಕ್ಕೆ ಅಗತ್ಯವಾದ ಪರಿಕರಗಳನ್ನು ಒದಗಿಸಿದ್ದಾರೆ. ಡೆಂಟಲ್ ಕೇರ್ ಯಂತ್ರ ಅಳವಡಿಸಿ ವಿದ್ಯಾರ್ಥಿಗಳ ಹಲ್ಲಿನ ಆರೋಗ್ಯದ ಕಾಳಜಿ ವಹಿಸಲಾಗಿದೆ.

ಕನ್ನಡಪ್ರಭ ವಾರ್ತೆ ಅರಕಲಗೂಡು

ಬೆಂಗಳೂರಿನಲ್ಲಿ ನೆಲೆಸಿದ್ದರೂ ತಮ್ಮ ಹುಟ್ಟೂರು ಮರೆಯದ ಡಾ. ಜಗದೀಶ್ ಹಾಗೂ ಡಾ. ಸುಧಾ ದಂಪತಿ ತಾಲೂಕಿನ ಅಜ್ಜೂರು ಗ್ರಾಮದ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಗುಣಮಟ್ಟದ ಶಿಕ್ಷಣ ದೊರಕಿಸಬೇಕು ಎಂಬ ಉದ್ದೇಶದಿಂದ 22 ಲಕ್ಷ ರು. ವೆಚ್ಚದಲ್ಲಿ ಹೊಸದಾಗಿ ಕೊಠಡಿ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೆ ಕಂಪ್ಯೂಟರ್ ಹಾಗೂ ಇಂಗ್ಲೀಷ್ ವಿಷಯದಲ್ಲಿ ಮಕ್ಕಳು ಪರಿಣಿತಿ ಸಾಧಿಸಲು ಆನ್‌ಲೈನ್ ತರಗತಿ ನಡೆಸುತ್ತಿದ್ದು ಅದಕ್ಕೆ ಅಗತ್ಯವಾದ ಪರಿಕರಗಳನ್ನು ಒದಗಿಸಿದ್ದಾರೆ. ದಂತವೈದ್ಯರಾದ ಈ ದಂಪತಿ ಶಾಲೆಯಲ್ಲಿ ಡೆಂಟಲ್ ಕೇರ್ ಯಂತ್ರವನ್ನು ಅಳವಡಿಸಿದ್ದು ಶಾಲೆ ಹಾಗೂ ಗ್ರಾಮದ 13 ವರ್ಷ ವಯೋಮಿತಿಯ ಮಕ್ಕಳ ಹಲ್ಲಿನ ಆರೋಗ್ಯದ ಕುರಿತು ಕಾಳಜಿ ವಹಿಸಿದ್ದಾರೆ.

ತಾಲೂಕಿನ ದೊಡ್ಡಮಗ್ಗೆ ಹೋಬಳಿ ಅಜ್ಜೂರು ಗ್ರಾಮದ ಸರ್ಕಾರಿ ಶಾಲೆಗೆ ಈ ವೈದ್ಯ ದಂಪತಿ ನಿರ್ಮಿಸಿ ಕೊಟ್ಟಿರುವ ನೂತನ ಕೊಠಡಿಯನ್ನು ಉದ್ಘಾಟಿಸಿದ ಶಾಸಕ ಎ.ಮಂಜು, ಸರ್ಕಾರಿ ಶಾಲೆಗಳಲ್ಲಿ ಕಲಿತು ಉನ್ನತ ಸ್ಥಾನಕ್ಕೇರಿರುವವರು ತಾವು ಕಲಿತ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿದಾಗ ಸರ್ಕಾರಿ ಶಾಲೆಗಳ ಸುಧಾರಣೆ ಸಾಧ್ಯವಾಗಲಿದೆ. ಡಾ. ಜಗದೀಶ್ ದಂಪತಿಯ ಕಾರ್ಯ ಶ್ಲಾಘನೀಯ, ಇವರು ನಡೆಸಿರುವ ಕಾರ್ಯ ಮಾದರಿಯಾಗಿದ್ದು ಇತರರಿಗೆ ಅನುಕರಣೀಯವಾಗಿದೆ. ಇವರಂತೆ ಸಮಾಜದ ಇತರರೂ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.

ಡಾ. ಜಗದೀಶ್ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಕಂಪ್ಯೂಟರ್‌ ಮತ್ತು ಇಂಗ್ಲೀಷ್‌ ಜ್ಞಾನ ಇಲ್ಲದಿದ್ದರೆ ಬದುಕು ಕಟ್ಟಿಕೊಳ್ಳಲು ದುಸ್ತರವಾಗುತ್ತದೆ. ನಗರ ಪ್ರದೇಶದಲ್ಲಿ ಕಲಿಕೆಗೆ ಸಾಕಷ್ಟು ಅವಕಾಶ ಲಭ್ಯವಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೂ ಈ ಅವಕಾಶ ದೊರಕುವಂತಾಗಬೇಕು ಎಂಬ ಉದ್ದೇಶದಿಂದ ಶಿಕ್ಷಕರಾಗಿದ್ದ ತಮ್ಮ ತಂದೆ ಚಂದೀಗೌಡರ ನೆನಪಿಗಾಗಿ ಹೊಸ ಕೊಠಡಿ ನಿರ್ಮಿಸಲಾಗಿದೆ. ಅಗತ್ಯ ಸೌಲಭ್ಯ ಕಲ್ಪಿಸಿಕೊಡಲು ಪ್ರಯತ್ನ ನಡೆಸಿದ್ದೇನೆ ಎಂದರು.

ಹಲ್ಲಿನ ಆರೋಗ್ಯ ಕುರಿತು ಜನರಲ್ಲಿ ನಿರಾಸಕ್ತಿ ಹೆಚ್ಚು. 2ರಿಂದ 13ನೇ ವಯಸ್ಸಿನವರೆಗೆ ಮಕ್ಕಳ ಹಲ್ಲಿನ ಆರೋಗ್ಯ ಕುರಿತು ಗಮನ ಹರಿಸಿ ಅಗತ್ಯ ಚಿಕಿತ್ಸೆ ಕೊಡಿಸಿದರೆ ಮುಂದೆ ಅವರ ಬದುಕಿನಲ್ಲಿ ಹುಳುಕು ಹಲ್ಲಿನ ಸಮಸ್ಯೆ ಎದುರಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಡೆಂಟಲ್ ಕೇರ್ ಯಂತ್ರ ಅಳವಡಿಸಿ ವಿದ್ಯಾರ್ಥಿಗಳ ಹಲ್ಲಿನ ಆರೋಗ್ಯದ ಕಾಳಜಿ ವಹಿಸಲಾಗಿದೆ. ಗ್ರಾಮದ ಇತರೆ ಮಕ್ಕಳಿಗೂ ಇದರ ಸೌಲಭ್ಯ ದೊರಕಿಸಲಾಗುವುದು. ಗ್ರಾಮಸ್ಥರು ಸಹಕಾರ ಅಗತ್ಯ ಎಂದರು.

ಬಿಇಒ ಕೆ.ಪಿ. ನಾರಾಯಣ್, ಬಿಆರ್‌ಸಿ ಬಾಲರಾಜ್, ಸಿಆರ್‌ಪಿ ಇಂದ್ರೇಗೌಡ, ಗ್ರಾಪಂ ಸದಸ್ಯರಾದ ಹೇಮಾವತಿ, ಹನುಮಂತಪ್ಪ, ಮುಖ್ಯ ಶಿಕ್ಷಕ ತ್ಯಗರಾಜ್ ಸಹಶಿಕ್ಷಕರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.