ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಭಾರತದ ಇತಿಹಾಸವು ಅನೇಕ ಐತಿಹಾಸಿಕ ರಹಸ್ಯಗಳನ್ನು ತನ್ನ ಕಾಲಗರ್ಭದಲ್ಲಿ ಹುದುಗಿಸಿಕೊಂಡಿದ್ದು, ಚಾರಿತ್ರಿಕ ಸತ್ಯವನ್ನು ಹೊರತರುವ ಜವಾಬ್ದಾರಿಯು ಪ್ರತಿಯೊಬ್ಬ ಇತಿಹಾಸಕಾರರದ್ದಾಗಿದೆ ಎಂದು ನಿವೃತ್ತ ತಹಸೀಲ್ದಾರ್, ಚಿಂತಕ ಡಾ.ವಿ. ರಂಗನಾಥ್ ತಿಳಿಸಿದರು.ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ, ಐಕ್ಯೂಎಸಿ, ಮಹಿಳಾ ಸಮನ್ವಯ ಹಾಗೂ ರಾಷ್ಟ್ರ ಭಾರತೀ ಚಾರಿಟಬಲ್ ಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸಿದ್ದ ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರ ಜನ್ಮ ತ್ರಿಶತಾಬ್ಧಿ ಅಂಗವಾಗಿ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹತ್ತು ಹಲವು ಸಾಮಾಜಿಕ ಕಳಕಳಿಯ ಹೋರಾಟಗಾರರ ಇತಿಹಾಸವನ್ನು ಬೆಳಕಿಗೆ ತರುವುದು ಪ್ರಸಕ್ತ ಸಂದರ್ಭದಲ್ಲಿ ಅತ್ಯವಶ್ಯಕವಾಗಿದೆ. ಭಾರತದ ಇತಿಹಾಸದಲ್ಲಿ ಪುರುಷರಷ್ಟೇ ಸ್ತ್ರೀಯರು ಸಹ ವಿವಿಧ ರಾಜಮನೆತನಗಳ ಚುಕ್ಕಾಣಿ ಹಿಡಿದು ಅತ್ಯುತ್ತಮ ಆಡಳಿತ ನೀಡಿದಷ್ಟೇ ಅಲ್ಲದೇ, ಸಾಮಾಜಿಕ ಸುಧಾರಣೆಗಳ ಮೂಲಕ ಇತಿಹಾಸದಲ್ಲಿ ಅಜರಾಮರರಾಗಿದ್ದಾರೆ ಎಂದರು.ಆದರೆ, ಬೆಳಕಿಗೆ ಬಾರದ ಇನ್ನೂ ಅನೇಕ ಮಹನೀಯರ ಬಗ್ಗೆ ಸುದೀರ್ಘ ಸಂಶೋಧನೆಗಳ ಮೂಲಕ ಇತಿಹಾಸದ ಪುಟಗಳಲ್ಲಿ ಬೆಳಕು ಚೆಲ್ಲಿ ಜಗತ್ತಿನ ಸಮುದಾಯಕ್ಕೆ ತಿಳಿಸುವುದು ಅನಿವಾರ್ಯವಾಗಿದೆ. ಅವರಲ್ಲಿ ಇಂದೋರ್ ನ ಹೋಳ್ಕರ್ ಮನೆತನದ ರಾಣಿ ಅಹಲ್ಯಾಬಾಯಿ ಹೋಳ್ಕರ್ ಪ್ರಮುಖರಾಗಿದ್ದಾರೆ ಎಂದು ಅವರು ಹೇಳಿದರು.ಸಾಮಾನ್ಯ ಸೈನಿಕನ ಮಗಳಾಗಿ ಅಹಲ್ಯಾಬಾಯಿ ಅವರು ದೈವಭಕ್ತಿ, ಅಧ್ಯಾತ್ಮಿಕ ಮತ್ತು ಧಾರ್ಮಿಕ ಚಿಂತನೆ ಹಾಗೂ ಲೋಕ ಕಲ್ಯಾಣದ ಲೋಕಮಾತೆಯಾಗಿ ಜನಾನುರಾಗಿಯಾಗಿದ್ದಾರೆ. ಹೋಳ್ಕರ್ ಮನೆತನದ ಸೊಸೆಯಾಗಿ ಇಂದೋರ್ ಪ್ರಾಂತ್ಯದ ರಾಜ್ಯಭಾರವನ್ನು ವಹಿಸಿಕೊಂಡು, ಅತ್ಯಂತ ದಕ್ಷತೆ ಮತ್ತು ಕಾರ್ಯಕ್ಷಮತೆಯಿಂದ ಆಡಳಿತ ನಡೆಸಿದರು. ನೆರೆಹೊರೆಯ ದಾಳಿಗಳನ್ನು ಅತ್ಯಂತ ಚತುರತೆಯಿಂದ ಎದುರಿಸಿ, ರಾಜ್ಯ ರಕ್ಷಿಸುವುದರ ಜೊತೆಗೆ ಸಾಮಾಜಿಕ ಕಟ್ಟುಪಾಡುಗಳಿಗೆ ತಿಲಾಂಜಲಿ ಹಾಡಿದರು ಎಂದು ಅವರು ವಿವರಿಸಿದರು.ಭಾರತದ ಸನಾತನಧರ್ಮ, ಸಂಸ್ಕೃತಿ, ಪರಂಪರೆಯನ್ನು ಪುನರುಜ್ಜೀವನಗೊಳಿಸಿದರು. ಮಾಹೇಶ್ವರಿ ಎಂಬ ಹೆಸರಿನ ಎರಡನೇ ರಾಜಧಾನಿಯಾಗಿ ನಿರ್ಮಿಸಿ, ಉತ್ತರ ಭಾರತದಲ್ಲಿ ಸುಮಾರು ಮೂರು ಸಾವಿರ ದೇವಾಲಯಗಳ ಜೀರ್ಣೋದ್ಧಾರ ಕಾರ್ಯ ಕೈಗೊಂಡರು. ಅವುಗಳಲ್ಲಿ ಗುಜರಾತಿನ ಸೋಮನಾಥ ಮತ್ತು ಕಾಶೀ ವಿಶ್ವನಾಥ ದೇವಾಲಯಗಳು ಪ್ರಮುಖವಾದವು. ಹೀಗೆ, ಆಡಳಿತ ಮತ್ತು ಸಮಾಜಮುಖಿ ಕಾರ್ಯಗಳ ಯಶಸ್ಸಿಗೆ ತಮ್ಮನ್ನು ತಾವು ಅತ್ಯಂತ ನಿಸ್ವಾರ್ಥದಿಂದ ತೊಡಗಿಸಿಕೊಂಡು, ಸರಳತೆಯ ಸಾಕಾರಮೂರ್ತಿಯಾಗಿ ಲೋಕ ಕಲ್ಯಾಣದ ಕಾಯಕದಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡ ಅಹಲ್ಯಾಬಾಯಿ ಅವರನ್ನು ಇತಿಹಾಸದ ಪುಟಗಳಲ್ಲಿ ಸ್ಪಷ್ಟವಾಗಿ ದಾಖಲಿಸುವ ಮತ್ತು ಗುರುತಿಸುವ ಕೆಲಸವಾಗಬೇಕು ಎಂದು ಅವರು ತಿಳಿಸಿದರು.ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಡಾ.ಪಿ.ಪಿ. ಪುಷ್ಪರಾಣಿ, ಶೈಕ್ಷಣಿಕ ಡೀನ್ ಡಾ.ಎಚ್. ಶ್ರೀಧರ, ಮಹಿಳಾ ಸಮನ್ವಯ ಘಟಕದ ಮೈಸೂರು ವಿಭಾಗದ ಸಂಚಾಲಕಿ ಲಾವಣ್ಯ, ಲಕ್ಷ್ಮಣ್ ಗೊರ್ಲಕಟ್ಟೆ, ನಿವೃತ್ತ ಸೈನಿಕರಾದ ದತ್ತಣ್ಣ, ನಾಗೇಂದ್ರ, ಸಹಾಯಕ ಪ್ರಾಧ್ಯಾಪಕರಾದ ಎ.ಆರ್. ನಂದೀಶ, ಎನ್. ಜಯಲಕ್ಷ್ಮಿ ಮೊದಲಾದವರು ಇದ್ದರು.