ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಸಮಾಜಶಾಸ್ತ್ರದ ಬೋಧಕರು ಮತ್ತು ವಿದ್ಯಾರ್ಥಿಗಳು ಸಮಾಜದಲ್ಲಿ ಜಟಿಲವಾದ ಜಾತಿ ವ್ಯವಸ್ಥೆ, ದಲಿತರ ಮೇಲಿನ ದೌರ್ಜನ್ಯ, ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಎದುರಾಗಿರುವ ಅಪಾಯಗಳ ಬಗ್ಗೆ ಸದಾ ಜಾಗೃತರಾಗಿದ್ದು, ಸಮ ಸಮಾಜವನ್ನು ನಿರ್ಮಿಸಲು ಮುಂದಾಗಬೇಕು ಎಂದು ಮಹಾರಾಜ ಕಾಲೇಜು ನಿವೃತ್ತ ಪ್ರಾಂಶುಪಾಲ ಪ್ರೊ. ಕಾಳಚನ್ನೇಗೌಡ ಎಚ್ಚರಿಸಿದರು.ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆ, ಮೈಸೂರು ಜಿಲ್ಲಾ ಪದವಿಪೂರ್ವ ಕಾಲೇಜುಗಳ ಸಮಾಜಶಾಸ್ತ್ರ ಉಪನ್ಯಾಸಕರ ವೇದಿಕೆ ಸಹಯೋಗದಲ್ಲಿ ಮಹಾರಾಜ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಶೈಕ್ಷಣಿಕ ಪುನಶ್ಚೇತನ ಮತ್ತು ಆಂತರಿಕ ಮೌಲ್ಯವಾಪನ ಕಾರ್ಯಾಗಾರದಲ್ಲಿ ಬುಧವಾರ ಭಾಗವಹಿಸಿ ಸವಾಜಶಾಸ್ತ್ರದ ಅಳಿವು-ಉಳಿವು ವಿಷಯದ ಕುರಿತು ಅವರು ಮಾತನಾಡಿದರು.ಇತ್ತೀಚಿನ ವರ್ಷಗಳಲ್ಲಿ ಸಮಾಜಶಾಸ್ತ್ರ ವಿಷಯವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಹಳೆಯ ವಿಷಯಗಳ ಪುನಾರಾವರ್ತನೆಯೂ ಕಾರಣವಾಗಿದೆ. ಸಂಕೀರ್ಣಗೊಳ್ಳುತ್ತಿರುವ ಸಮಾಜದ ಪ್ರತಿಯೊಂದು ಆಗು- ಹೋಗುಗಳನ್ನು ಅರ್ಥ ಮಾಡಿಕೊಂಡು, ಹೊಸ ಹೊಳಹು ಮತ್ತು ಆಲೋಚನೆಗಳನ್ನು ಪಠ್ಯವಾಗಿ ಅಳವಡಿಸುವ ಮೂಲಕ ಸಮಾಜಶಾಸ್ತ್ರ ವಿಷಯವನ್ನು ಬೆಳೆಸಬೇಕು ಎಂದು ಅವರು ಹೇಳಿದರು.ಸಮಾಜಶಾಸ್ತ್ರ ವಿಷಯದಲ್ಲಿ ಅವಿಭಕ್ತ ಕುಟುಂಬ- ವಿಭಕ್ತ ಕುಟುಂಬ, ವಿವಾಹ ಇವುಗಳ ಕುರಿತಾಗಿ ಎಲ್ಲಿಯವರೆಗೆ ಪಾಠ ಮಾಡುವುದು ಎಂಬ ವಾದವೂ ಇತ್ತು. ವಿಷಯ ವಸ್ತು ಒಂದೇ ಆದರೂ ಪ್ರತಿ ವರ್ಷವೂ ಬೇರೆ ಬೇರೆ ವಿದ್ಯಾರ್ಥಿಗಳಿಗೆ ಬೋಧನೆ ಮಾಡುಲಾಗುತ್ತದೆ ಎಂಬ ಪ್ರತಿವಾದವೂ ಇತ್ತು. ವಿವಾಹದ ಬಗ್ಗೆ ಬೋಧನೆ ಮಾಡುವಾಗ ಪ್ರಸ್ತುತ ಕಾಲದಲ್ಲಿ ಮುನ್ನೆಲೆಗೆ ಬಂದಿರುವ ಸಲಿಂಗ ವಿವಾಹದ ಬಗ್ಗೆಯೂ ಚರ್ಚೆ ಮಾಡಬೇಕು. ಎಲ್ಲಾ ಸಂಗತಿಗಳ ಬಗ್ಗೆಯೂ ಅಧ್ಯಯನ ನಡೆಸಿ ಕಾಲಕಾಲಕ್ಕೆ ವಿಷಯ ಬೆಳೆಸಬೇಕು ಎಂದು ಅವರು ಸಲಹೆ ನೀಡಿದರು.ಒಂದು ಕಾಲದಲ್ಲಿ ಪ್ರಚಲಿತವಿದ್ದ ವಿಷಯ ಮತ್ತೊಂದು ಕಾಲಕ್ಕೆ ತನ್ನ ಅಸ್ತಿತ್ವ ಕಳೆದುಕೊಳ್ಳತ್ತದೆ. ಹೊಸ ವಿಷಯಗಳು ಮಾನ್ಯತೆ ಪಡೆಯುತ್ತವೆ. ಒಂದು ಕಾಲದಲ್ಲಿ ಜಾರಿಗೊಳಿಸಲಾದ ಶೈಕ್ಷಣಿಕ ಯೋಜನೆ ಮತ್ತೊಂದು ಕಾಲಕ್ಕೆ ಅಪ್ರಸ್ತುತವಾಗಿ ಹೊಸ ಯೋಜನೆಗಳು ಬರುತ್ತವೆ. ಈ ಬೆಳವಣಿಗೆ ಸಹಜ ಪ್ರಕ್ರಿಯೆಯಾಗಿದೆ. ಯಾವುದೇ ಸಮಸ್ಯಗಳಿಗೆ ಸಲುಭವಾಗಿ ಪರಿಹಾರ ಸಿಗುವುದಿಲ್ಲ. ನಿರಂತರವಾದ ಅಧ್ಯಯನ ಮತ್ತು ಗಂಭೀರ ಆಲೋಚನೆಯಿಂದ ಉತ್ತರ ಸಿಗುತ್ತದೆ ಎಂದು ಅವರು ತಿಳಿಸಿದರು. ಶಿಕ್ಷಕರಿಗೆ ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ಒಂದು ಅತ್ಯತ್ತಮ ಅವಕಾಶ ಇದೆ. ಆದ್ದರಿಂದ ಶಿಕ್ಷಕರೂ ಪ್ರಾಮಾಣಿಕವಾಗಿ ಪಾಠ ಮಾಡಬೇಕು. ಪಠ್ಯದ ಜೊತೆಗೆ ಪಠ್ಯೇತರ ವಿಷಯಗಳ ಬಗ್ಗೆಯೂ ತಿಳಿಸಬೇಕು. ವಿದ್ಯಾರ್ಥಿಗಳ ಜೊತೆ ಪ್ರೀತಿ- ವಿಶ್ವಾಸದಿಂದ ನಡೆಸಿಕೊಳ್ಳಬೇಕು. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವ, ಅವರ ಕಷ್ಟಗಳಿಗೆ ಸ್ಪಂದಿಸುವ ಗುಣವನ್ನು ಶಿಕ್ಷಕರು ಮೈಗೂಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ಡಿಡಿಪಿಯು ಎಂ. ಮರಿಸ್ವಾಮಿ, ಜಿಲ್ಲಾ ಸಮಾಜಶಾಸ್ತ್ರ ವೇದಿಕೆ ಅಧ್ಯಕ್ಷ ಎಚ್.ಎಸ್. ರವಿಶಂಕರ್, ಮಹಾರಾಜ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಡಿ. ಮಹೇಶ್, ಮೈಸೂರು ಜಿಲ್ಲಾ ಸಮಾಜಶಾಸ್ತ್ರ ವೇದಿಕೆ ಗೌರವಾಧ್ಯಕ್ಷ ಸಿ.ಆರ್. ದಿನೇಶ್, ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲ ಸೀಮಾ, ಸರಗೂರು ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಎಚ್.ವಿ. ರಾಘವೇಂದ್ರ, ಮೈಸೂರು ಜಿಲ್ಲಾ ಸಮಾಜಶಾಸ್ತ್ರ ವೇದಿಕೆ ಪ್ರಧಾನ ಕಾರ್ಯದರ್ಶಿ ಡಾ.ಕೆ. ಮಹಾದೇವಸ್ವಾಮಿ ಮೊದಲಾದವರು ಇದ್ದರು.