ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ರೈತರ ಹಿತದೃಷ್ಟಿಯಿಂದ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಮತ್ತು ರೇಷ್ಮೆ ಇಲಾಖೆಗಳು ಒಗ್ಗೂಡಿ ಪರಸ್ಪರ ಸಮನ್ವಯದ ಮೇಲೆ ಕೆಲಸ ಮಾಡಿ ಪ್ರಗತಿಪರ ರೈತರನ್ನು ಹುಟ್ಟು ಹಾಕುವಂತೆ ಶಾಸಕ ಎಚ್.ಟಿ.ಮಂಜು ಕರೆ ನೀಡಿದರು.ಪಟ್ಟಣದ ಟಿಎಪಿಸಿಎಂಎಸ್ ಸಮುದಾಯ ಭವನದ ಆವರಣದಲ್ಲಿ ತಾಲೂಕು ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಆಹಾರ ಮತ್ತು ಪೌಷ್ಟಿಕ ಭದ್ರತೆ (ನ್ಯೂಟ್ರಿಸೀರಿಯಲ್ಸ್ ) ಕಿಸಾನ್ ಗೋಷ್ಠಿ ಮತ್ತು ಸವಲತ್ತು ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ರೈತರ ಕಲ್ಯಾಣಕ್ಕಾಗಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಸಾಕಷ್ಟು ಸಹಾಯ ಧನ ಮತ್ತು ಜಾಗೃತಿ ಕಾರ್ಯಕ್ರಮ ಮಾಡುತ್ತಿದೆ. ಸರ್ಕಾರದ ಯೋಜನೆಗಳನ್ನು ರೈತ ಸಮುದಾಯಕ್ಕೆ ತಲುಪಿಸುವಲ್ಲಿ ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರು.ಇಂದಿನ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಸಮಗ್ರ ಕೃಷಿ ಪದ್ಧತಿಯ ಬಗ್ಗೆ ವಿಚಾರ ಗೋಷ್ಠಿ ಸಂಘಟಿಸಿದೆ. ರಾಗಿ ಮಹತ್ವ ತಿಳಿಸಿ ರೈತರನ್ನು ರಾಗಿ ಬೆಳೆಯಲು ಉತ್ತೇಜಿಸುವುದು ಕಾರ್ಯಕ್ರಮದ ಮೂಲ ಗುರಿ. ಆದರೆ, ಈ ವಿಚಾರ ಗೋಷ್ಠಿಗೆ ಸವಲತ್ತು ಪಡೆಯಲು ಬಂದಿರುವ ರೈತರನ್ನು ಹೊರತುಪಡಿಸಿ ಇತರೆ ರೈತ ಸಮುದಾಯ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಧಿಕಾರಿಗಳು ಸರ್ಕಾರಿ ಕಾರ್ಯಕ್ರಮಗಳನ್ನು ಕೇವಲ ಕಾಗದದ ಮೇಲೆ ಮಾಡುವುದನ್ನು ನಿಲ್ಲಿಸಿ ರೈತ ಸಮುದಾಯದ ಬಳಿಗೆ ತೆರಳಿ ಮಾಹಿತಿ ನೀಡಬೇಕು. ಇಲಾಖೆ ಅಧಿಕಾರಿಗಳು ಕೇವಲ ಸರ್ಕಾರದಿಂದ ಬರುವ ಸವಲತ್ತುಗಳನ್ನು ವಿತರಣೆ ಮಾಡುವ ಏಜೆನ್ಸಿಗಳಂತೆ ಕೆಲಸ ಮಾಡದೆ ಗ್ರಾಮೀಣ ಪ್ರದೇಶದ ರೈತ ಯುವಕರಿಗೆ ಅಗತ್ಯ ತರಬೇತಿ ಮತ್ತು ಸೌಲಭ್ಯ ಒದಗಿಸಿಕೊಡಬೇಕು ಎಂದರು.ತಾಲೂಕಿನಲ್ಲಿ ಹೇಮಾವತಿ ನದಿ ಹರಿಯುತ್ತಿದೆ. ನದಿ ಬಯಲಿನ ಜೊತೆಗೆ ನೋರಾರು ಕೆರೆ-ಕಟ್ಟೆಗಳಿವೆ. ಇಲ್ಲೆಲ್ಲಾ ಮೀನುಗಾರಿಕೆ ಮಾಡಲು ವಿಫುಲ ಅವಕಾಶಗಳಿವೆ. ಅರೆ ನೀರಾವರಿ ಪ್ರದೇಶದಲ್ಲಿ ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ ಕ್ಷೇತ್ರವನ್ನು ವಿಸ್ತರಿಸಬಹುದಾದ ಅನುಕೂಲಗಳಿವೆ. ಸರ್ಕಾರಿ ಅಧಿಕಾರಿಗಳು ರೈತರನ್ನು ಉತ್ತೇಜಿಸಿ ಕೃಷಿ ಉದ್ದಿಮೆದಾರ ರೈತ ಸಮುದಾಯವನ್ನು ನಿರ್ಮಿಸಬೇಕೆಂದು ಕರೆ ನೀಡಿದರು.
ಕೃಷಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಶ್ರೀನಿವಾಸ ಶೆಟ್ಟಿ ಸಮಗ್ರ ಕೃಷಿ ಪದ್ಧತಿಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಕೃಷಿ ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ ವಿವಿಧ ಸಹಾಯಧನ ಯೋಜನೆಯಡಿ ಮಂಜೂರಾದ ಪವರ್ ಟಿಲ್ಲರ್, ಮೇವು ಕತ್ತರಿಸುವ ಯಂತ್ರ, ನೀರಾವರಿ ಪೈಪುಗಳು ಸೇರಿದಂತೆ ವಿವಿಧ ಪರಿಕರಗಳನ್ನು ಶಾಸಕ ಎಚ್.ಟಿ.ಮಂಜು ವಿತರಿಸಿದರು.ಈ ವೇಳೆ ಕೃಷಿ ಇಲಾಖೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಸಂತೋಷ್ ಕುಮಾರ್, ಕೃಷಿಕ ಸಮಾಜದ ಉಪಾಧ್ಯಕ್ಷ ಎಸ್.ಎನ್.ಪ್ರಭಾಕರ್, ಕೃಷಿಕ ಸಮಾಜದ ನಿರ್ದೇಶಕರಾದ ಎಚ್.ಜೆ.ನಾರಾಯಣಗೌಡ, ಅಕ್ಕಿಹೆಬ್ಬಾಳು ರಾಮಸ್ವಾಮಿ, ಜಗದೀಶ್, ಮರಿಸ್ವಾಮಿಗೌಡ, ಬೀರವಳ್ಳಿ ಲಕ್ಷ್ಮೇಗೌಡ, ಸಚಿವ ಎನ್ ಚಲುವರಾಯಸ್ವಾಮಿ ಅವರ ಆಪ್ತ ಸಹಾಯಕ ಚೇತನ ಮಹೇಶ್, ಹರೀಶ್, ಕೃಷಿ ಅಧಿಕಾರಿ ಟಿ.ಕೆ.ಶ್ರೀಧರ್ ಹಲವರು ಇದ್ದರು.