ನಗರಾಭಿವೃದ್ಧಿಗೆ ಇಲಾಖೆಗಳು ಒಗ್ಗಟ್ಟಿನಿಂದ ಕೆಲಸ ಮಾಡಿ: ಜುಬಿನ್‌ ಮೋಹಪಾತ್ರ

| Published : Feb 28 2025, 12:51 AM IST

ನಗರಾಭಿವೃದ್ಧಿಗೆ ಇಲಾಖೆಗಳು ಒಗ್ಗಟ್ಟಿನಿಂದ ಕೆಲಸ ಮಾಡಿ: ಜುಬಿನ್‌ ಮೋಹಪಾತ್ರ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರು ಮಹಾನಗರ ಪಾಲಿಕೆ (ಹಳೇ ಡಿಸಿ ) ಕಚೇರಿ ಸಭಾಂಗಣದಲ್ಲಿ ಆಯುಕ್ತ ಜುಬಿನ್ ಮೋಹಪಾತ್ರ ಅಧ್ಯಕ್ಷತೆಯಲ್ಲಿ ಕ್ರಿಯಾ ಯೋಜನೆಯನ್ನು ತಯಾರಿಸುವ ಸಲುವಾಗಿ ಸಭೆಯನ್ನು ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರುಹೊಸದಾಗಿ ರೂಪುಗೊಂಡಿರುವ ಮಹಾನಗರದ ಸಮಗ್ರ ಅಭಿವೃದ್ಧಿಗೆ ವಿವಿಧ ಇಲಾಖೆಗಳು ಒಗ್ಗಟಿನಿಂದ ಕೆಲಸ ಮಾಡುವ ಮೂಲಕ ಸಹಕಾರ ನೀಡಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೋಹಪಾತ್ರ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ರಾಷ್ಟ್ರೀಯ ಜೀವನೋಪಾಯ ಅಭಿಯಾನ ಅವರ ಹೊಸ ಯೋಜನೆಯಾದ ದೀನ್ ದಯಾಳ್ ಜನ ಅಜೀವಿಕ ಯೋಜನೆಗೆ ಪ್ರಾಯೋಗಿಕವಾಗಿ ರಾಯಚೂರು ಮಹಾನಗರ ಪಾಲಿಕೆ ಆಯ್ಕೆಯಾದ ಪ್ರಯುಕ್ತ ಸ್ಥಳೀಯ ಪಾಲಿಕೆ (ಹಳೇ ಡಿಸಿ ) ಕಚೇರಿ ಸಭಾಂಗಣದಲ್ಲಿ ಕ್ರಿಯಾ ಯೋಜನೆಯನ್ನು ತಯಾರಿಸುವ ಸಲುವಾಗಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮುಂದಿನ ಐದು ವರ್ಷಗಳಲ್ಲಿ ನಗರದ ಎಲ್ಲಾ ನಿರುದ್ಯೋಗಿ ಯುವಕರಿಗೆ ಹಾಗೂ ಉದ್ಯೋಗ ರಹಿತರಿಗೆ ಸ್ವಯಂ ಉದ್ಯೋಗವನ್ನು ಒದಗಿಸುವ ಉದ್ದೇಶವನ್ನು ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಈ ಯೋಜನೆಯಡಿ ನಗರದಲ್ಲಿ ಹೊಸ ಉದ್ಯೋಗ ಸೃಷ್ಟಿಗೆ ನೂತನ ವಿಚಾರಗಳ ಮಾಹಿತಿಯನ್ನು ಒದಗಿಸಬೇಕು ಎಂದರು. ಕಟ್ಟಡ ಕಾರ್ಮಿಕರು, ಸಾಗಾಣಿಕೆ ಕಾರ್ಮಿಕರು, ಗಿಗ್ ಕಾರ್ಮಿಕರು, ಆರೈಕೆ ಕಾರ್ಯಕರ್ತರು, ತ್ಯಾಜ್ಯ ಕೆಲಸಗಾರರು ಹಾಗೂ ಮನೆಗೆಲಸ ಎಂಬ ಆರು ದುರ್ಬಲ ವಲಯಗಳಲ್ಲಿ ಉದ್ಯೋಗ ಸೃಷ್ಟಿಸಲು ಎಲ್ಲಾ ಅಧಿಕಾರಿಗಳು ಕ್ರಮ ವಹಿಸಬೇಕು. ಜೊತೆಗೆ ಈ ವಲಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಆದಾಯವನ್ನು ಹೇಗೆ ಹೆಚ್ಚಳ ಮಾಡಬೇಕೆಂಬ ವಿಚಾರದ ಬಗ್ಗೆ ಅಧಿಕಾರಿಗಳು ತಮ್ಮ ವಿಚಾರಗಳನ್ನು ತಿಳಿಸಬಹುದು ಎಂದು ಹೇಳಿದರು.ಮೂರು ದಿನದಲ್ಲಿ ಮಾಹಿತಿ ಒದಗಿಸಿ:ಈ ಯೋಜನೆಯಡಿ ಕಾರ್ಯಕ್ರಮಗಳನ್ನು ರಾಯಚೂರು ನಗರದಲ್ಲಿ ಅನುಷ್ಠಾನಗೊಳಿಸಲು ಟಾಸ್ಕ್‌ ಫೋರ್ಸ್ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯಿಂದ ಮುಂದಿನ ದಿನಗಳಲ್ಲಿ ಯೋಜನೆಯ ಕುರಿತು ಸಂಪೂರ್ಣ ಕ್ರಿಯಾ ಯೋಜನೆಯನ್ನು ರೂಪಿಸಲು ಸೂಕ್ತ ಕ್ರಮಕೈಗೊಳ್ಳಲಾಗುವುದು. ಈ ಸಮಿತಿಯಿಂದ ಯೋಜನೆಗೆ ಸಂಬಂಬಂಧಿಸಿದಂತೆ ಸಮೀಕ್ಷೆ, ಜಾಗೃತಿ ಕಾರ್ಯಕ್ರಮಗಳು ಹಾಗೂ ತರಬೇತಿ ಕಾರ್ಯಕ್ರಮಗಳನ್ನು ಉತ್ತಮವಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮವಹಿಸಬೇಕು ಎಂದರು.ತಯಾರಿಕೆ ಮತ್ತು ಸೇವೆಗಳನ್ನು ಒದಗಿಸುವ ಸ್ವಯಂ ಉದ್ಯೋಗ ಸೃಷ್ಟಿಗೂ ಅಧಿಕಾರಿಗಳು ಮುಂದಾಗಬೇಕಿದ್ದು, ಈ ಎಲ್ಲಾ ಮಾಹಿತಿಗಳನ್ನು ಸರ್ಕಾರಕ್ಕೆ ತಲು ಪಿಸಲು 15 ದಿನಗಳ ಕಾಲಾವಕಾಶವಿದ್ದು, ಅಧಿಕಾರಿಗಳು ತಮ್ಮ ಇಲಾಖಾ ವ್ಯಾಪ್ತಿಯಲ್ಲಿರುವ ಯೋಜನೆಗಳ ಮಾಹಿತಿ ಹಾಗೂ ಇತರೆ ಮಾಹಿತಿಗಳನ್ನು ಮೂರು ದಿನದಲ್ಲಿ ಸಲ್ಲಿಸಬೇಕು ಎಂದು ಸೂಚಿಸಿದರು. ಪಾಲಿಕೆಯಿಂದಲೇ ನರ್ಸರಿಗಳ ನಿರ್ಮಾಣ:ನಗರದಲ್ಲಿ ಧೂಳಿನ ಸಮಸ್ಯೆ ಹೆಚ್ಚಿದ್ದು, ಪಾಲಿಕೆಯಿಂದಲೇ ನರ್ಸರಿ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಅಲ್ಲದೆ ಅದೇ ನರ್ಸರಿಯ ಗಿಡಗಳನ್ನು ಉಪಯೋಗಿಸಿ ಕೊಂಡು ನಗರವನ್ನು ಹಸಿರೀಕರಣ ಮಾಡಿದಾಗ ನಗರ ಶೇ.50ರಷ್ಟು ಧೂಳಿನ ಸಮಸ್ಯೆ ಬಗೆಹರಿಯುತ್ತದೆ. ಎಲ್ಲಾ ಯೋಜನೆಗಳನ್ನು ಗಂಭೀರವಾಗಿ ಪರಿಗಣಿಸಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಿದ್ದಲ್ಲಿ ಮುಂದಿನ ಆರು ತಿಂಗಳಲ್ಲಿ ನಗರದ ಎಲ್ಲರಿಗೂ ಉದ್ಯೋಗ ಸಿಗಲಿವೆ. ನಗರದಲ್ಲಿ 6 ತರಕಾರಿ ಹಾಗೂ ಹಣ್ಣು ಮಾರಾಟ ವಲಯಗಳನ್ನು ಸ್ಥಾಪಿಸಲಾಗುವುದು ಎಂದರು. ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ, ವಾಣಿಜ್ಯೋದ್ಯಮಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು,ಸದಸ್ಯರು ಸೇರಿ ಹಲವರು ಹಾಜರಿದ್ದರು.