ಅಂತರ್ಜಲ ಕುಸಿತ, ಒಣಗುತ್ತಿರುವ ಹಿಂಗಾರಿ ಬೆಳೆಗಳು

| Published : Feb 10 2024, 01:47 AM IST

ಸಾರಾಂಶ

ಹಿಂಗಾರು ಹಂಗಾಮಿನಲ್ಲಾದರೂ ಫಸಲು ಕೈಹಿಡಿಯಬಹುದು ಎಂದು ಬೆಳೆದ ಗೆಜ್ಜೆ ಶೇಂಗಾ, ಅಲಸಂದಿ, ಹೈಬ್ರೀಡ್ ಜೋಳ ಹಾಗೂ ಗೋವಿನ ಜೋಳದ ಬೆಳೆಗಳಿಗೆ ನೀರಿನ ಕೊರತೆ ಉಂಟಾಗಿ ಒಣಗಿ ಹೋಗುತ್ತಿದ್ದು, ರೈತರು ದಿಕ್ಕು ತೋಚದಂತಾಗಿ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.

ಅಶೋಕ ಸೊರಟೂರ

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಹಿಂಗಾರು ಹಂಗಾಮಿನಲ್ಲಾದರೂ ಫಸಲು ಕೈಹಿಡಿಯಬಹುದು ಎಂದು ಬೆಳೆದ ಗೆಜ್ಜೆ ಶೇಂಗಾ, ಅಲಸಂದಿ, ಹೈಬ್ರೀಡ್ ಜೋಳ ಹಾಗೂ ಗೋವಿನ ಜೋಳದ ಬೆಳೆಗಳಿಗೆ ನೀರಿನ ಕೊರತೆ ಉಂಟಾಗಿ ಒಣಗಿ ಹೋಗುತ್ತಿದ್ದು, ರೈತರು ದಿಕ್ಕು ತೋಚದಂತಾಗಿ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ಲಕ್ಷ್ಮೇಶ್ವರ ತಾಲೂಕಿನಲ್ಲಿ ಈ ವರ್ಷ ಅತಿ ಕನಿಷ್ಠ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಬರಗಾಲ ಆವರಿಸಿ ರೈತರ ನಿದ್ದೆಗೆಡಿಸಿತ್ತು. ಆದರೆ ತಾಲೂಕಿನ ಕೆಲ ರೈತರು ಕೊಳವೆ ಬಾವಿಗಳನ್ನು ಆಶ್ರಯಿಸಿ ಬೇಸಿಗೆ ಹಂಗಾಮಿನಲ್ಲಿ ಗೆಜ್ಜೆ ಶೇಂಗಾ, ಅಲಸಂದಿ, ಹೈಬ್ರೀಡ್ ಜೋಳ ಬಿತ್ತನೆ ಮಾಡಿದ್ದರು. ಆರಂಭದ ದಿನಗಳಲ್ಲಿ ನಳನಳಿಸುತ್ತಿದ್ದ ಬೆಳೆಗಳು ಈಗ ಕೊಳವೆ ಬಾವಿಯಲ್ಲಿನ ನೀರಿನ ಮಟ್ಟ ಕುಸಿದಿದ್ದರಿಂದ ನೀರು ಬರದೆ ಬೆಳೆಗಳು ಒಣಗಲು ಆರಂಭಿಸಿವೆ. ಉಂಡೇನಹಳ್ಳಿ ಗ್ರಾಮದ ಉಡಚಪ್ಪ ಗಗ್ಗರಿ ಎನ್ನುವವರ ಹೊಲದಲ್ಲಿನ ಶೇಂಗಾ ಬೆಳೆಯು ನೀರಿಲ್ಲದೆ ಸಂಪೂರ್ಣವಾಗಿ ಒಣಗಿ ಹೋಗಿ ಕರಕಲಾಗಿದೆ. ಮಾಳವ್ವ ನಂದಗಾವಿ ಅವರು ನೀರಿನ ಕೊರತೆಯ ಕಾರಣದಿಂದ ಕೊಯ್ಲಿಗೆ ಬರುವ ಮೊದಲೇ ಶೇಂಗಾ ಬೆಳೆಯನ್ನು ಹರಗಿ ಗುಡ್ಡೆಗಳನ್ನಾಗಿ ಹಾಕಿದ್ದಾರೆ. ಗುಡದಯ್ಯ ಮಾಡಳ್ಳಿ ಅವರು ಶೇಂಗಾ ಹರಗಿ ಒಕ್ಕಲು ಮಾಡಿ ಜಾನುವಾರುಗಳಿಗೆ ಹೊಟ್ಟಾದರೂ ಸಿಗಲಿ ಎಂದು, ಗುರುಸಿದ್ದಪ್ಪ ಸಂಗೂರ, ನಾಗಪ್ಪ ಈಳಗೇರ, ಪರಮೇಶ್ವರ ಹುಲಕೋಟಿ ಹಾಗೂ ಸೂರಣಗಿ ಗ್ರಾಮದ ಗುಡ್ಡಪ್ಪ ಸಂಕ್ಲಿಪೂರ, ಈರಯ್ಯ ಹುಬ್ಬಳ್ಳಿಮಠ ಸೇರಿದಂತೆ 200ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿನ ಶೇಂಗಾ ಬೆಳೆಯು ಒಣಗಿ ಹೋಗಿ ರೈತರ ಬಾಳಿಗೆ ಸಂಕಷ್ಟವಾಗಿ ಪರಿಣಮಿಸಿದೆ.ಕಳೆದ ವರ್ಷ ಉಕ್ಕಿ ಹರಿಯುತ್ತಿದ್ದ ಕೊಳವೆ ಬಾವಿಗಳು ಈ ವರ್ಷ ಅನಾವೃಷ್ಟಿಯ ಕಾರಣದಿಂದ ನೀರು ಬರದೆ ಬತ್ತಿ ಹೋಗಿರುವುದು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಲಕ್ಷ್ಮೇಶ್ವರ ತಾಲೂಕಿನ ಉಂಡೆನಹಳ್ಳಿ, ದೊಡ್ಡೂರ, ಸೂರಣಗಿ ಯಲ್ಲಾಪೂರ, ಉಳ್ಳಟ್ಟಿ, ಶ್ಯಾಬಳ ಭಾಗದ ರೈತರ ಕೊಳವೆ ಬಾವಿಗಳಲ್ಲಿನ ನೀರಿನ ಮಟ್ಟ ಕುಸಿದು ಪಂಪ್ ಸೆಟ್‌ಗಳು ಬಂದಾಗಿವೆ. ಬೇಸಿಗೆ ಹಂಗಾಮಿನಲ್ಲಿ ಗೆಜ್ಜೆ ಶೇಂಗಾ ಬಿತ್ತನೆ ಬೀಜಗಳನ್ನು ಕೃಷಿ ಕೇಂದ್ರದಲ್ಲಿ ಕ್ವಿಂಟಾಲ್‌ಗೆ 12,350 ರು.ಗಳಂತೆ ಖರೀದಿಸಿ ಗೊಬ್ಬರ ಹಾಗೂ ಇತರೆ ಖರ್ಚು ಸೇರಿ ಎಕರೆಗೆ ರು. 20 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿರುವ ರೈತರು ಬಿತ್ತಿದ ಬೆಳೆಯು ಕೊಯ್ಲು ಮಾಡಿ ಅಲ್ಪಮಟ್ಟಿನ ಲಾಭ ಸಿಗುತ್ತದೆ. ತಮ್ಮ ಜಾನುವಾರುಗಳಿಗೆ ಹೊಟ್ಟು ಮೇವು ಸಿಗುತ್ತದೆ ಎನ್ನುವ ಕನಸಿಗೆ ನೀರಿನ ಕೊರತೆಯು ಕೊಳ್ಳಿ ಇಟ್ಟಿದೆ ಎಂದರೆ ತಪ್ಪಾಗಲಾರದು. ತಾಲೂಕಿನಲ್ಲಿ ಕೊಳವೆ ಬಾವಿಯ ನೀರನ್ನು ನಂಬಿ ಬೇಸಿಗೆಯ ಶೇಂಗಾ ಬಿತ್ತನೆ ಮಾಡಿದ್ದೆವು, ಆದರೆ ಕೊಳವೆ ಬಾವಿಯಲ್ಲಿ ನೀರು ಬಾರದೆ ಬೆಳೆದ ಬೆಳೆಗಳು ಒಣಗಿ ಹೋಗುವುದನ್ನು ನೋಡಲು ಆಗುತ್ತಿಲ್ಲ. ಸಾವಿರಾರು ರು.ಗಳನ್ನು ಖರ್ಚು ಮಾಡಿ ಬಿತ್ತನೆ ಮಾಡಿದ ಬೆಳೆಗಳು ನೀರಿಲ್ಲದೆ ಒಣಗಿ ಹೋಗಿವೆ. ಒಟ್ಟಿನಲ್ಲಿ ರೈತರಿಗೆ ಆಗುವ ನಷ್ಟವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಸತ್ಯ ಈಗ ಅರ್ಥವಾಗುತ್ತಿದೆ ಎಂದು ರೈತ ಉಡಚಪ್ಪ ಗಗ್ಗರಿ ಉಂಡೇನಹಳ್ಳಿಯ ಹೇಳಿದರು.ಈ ವರ್ಷ ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದ್ದರೂ ರಾಜ್ಯ ಸರ್ಕಾರ ರೈತರಿಗೆ ಬರ ಪರಿಹಾರದ ಹಣವನ್ನು ನೀಡದೆ ರೈತರ ಶಾಪಕ್ಕೆ ಗುರಿಯಾಗುತ್ತಿದೆ. ಶೀಘ್ರದಲ್ಲಿ ಎಕರೆಗೆ 10 ಸಾವಿರ ರು.ಗಳನ್ನು ಬರ ಪರಿಹಾರವಾಗಿ ನೀಡಬೇಕು ಎಂದು ರೈತ ಮುಖಂಡ ಬಸವರಾಜ ಇಟಗಿ ಹೇಳಿದರು.