ಸಾರಾಂಶ
ಮಂಡ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕುರುಬ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪಿಗಳನ್ನು ಗಡಿಪಾರು ಮಾಡಬೇಕು ಮತ್ತು ಕುರಿಗಾರರ ರಕ್ಷಣೆಗೆ ವಿಶೇಷ ಕಾಯ್ದೆ ಜಾರಿ ಮಾಡಬೇಕು ಎಂದು ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕ್ಕೀರಪ್ಪ ಹೆಬಸೂರ ಹೇಳಿದರು.
ಗದಗ: ಮಂಡ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕುರುಬ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪಿಗಳನ್ನು ಗಡಿಪಾರು ಮಾಡಬೇಕು ಮತ್ತು ಕುರಿಗಾರರ ರಕ್ಷಣೆಗೆ ವಿಶೇಷ ಕಾಯ್ದೆ ಜಾರಿ ಮಾಡಬೇಕು ಎಂದು ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕ್ಕೀರಪ್ಪ ಹೆಬಸೂರ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಾಚ್ಯ ಶಬ್ದಗಳಿಂದ ನಿಂಧನೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಈ ಬಗ್ಗೆ ರಾಜ್ಯಾದ್ಯಾಂತ ಹೋರಾಟ ಮಾಡಲಾಗುವುದು ಎಂದರು.ಇತ್ತೀಚೆಗೆ ಅರಣ್ಯ ಇಲಾಖೆ ಸಚಿವರು ಕಾಡಿನಲ್ಲಿ ಕುರಿಗಳನ್ನು ಬಿಡಬಾರದು ಎಂದು ಹೇಳಿರುವುದು ಖಂಡನೀಯ. ಕುರಿಗಾರರ ರಕ್ಷಣೆಗಾಗಿ ಕುರುಬರ ಸಂಘ ಮತ್ತು ಹಾಲುಮತ ಮಹಾಸಭಾದಿಂದ ಪಕ್ಷಾತೀತವಾಗಿ ಹೋರಾಟ ಮಾಡಲಾಗುವುದು ಎಂದರು.
ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಮಾತನಾಡಿ,ಆಧುನಿಕತೆ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಕುರಿಗಳಿಗೆ ಮೇವು ಸಿಗದಂತಾಗಿದ್ದು, ಕುರಿಗಾರರು ಈಗ ಹೊರಗಿನ ಅಂದರೆ ಬೆಟ್ಟ-ಗುಡ್ಡಗಳನ್ನು ಪೂರ್ಣವಾಗಿ ಅವಲಂಬಿಸಿ ತನ್ನ ದಿನನಿತ್ಯದ ಕಾಯಕದಲ್ಲಿ ತೊಡಗಿರುವಾಗ ಕುರಿಗಾರರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿರುವ ಬಹಳಷ್ಟು ಉದಾಹರಣೆಗಳಿವೆ. ಹೋಗಿ ಬರುವ ದಾರಿಯಲ್ಲಿ ವಾಹನಗಳಿಂದ ಬಹಳಷ್ಟು ಅಪಘಾತಗಳಾಗಿ ಕುರಿಗಾಹಿಯ ಪ್ರಾಣಹಾನಿ ಹಾಗೂ ಅಸಂಖ್ಯಾತ ಕುರಿಗಳ ಮಾರಣಹೋಮ ನಡೆದಿದೆ. ಇತ್ತೀಚಿಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದ ಕುರಿಗಾಹಿ ಶರಣಪ್ಪ ಜಮ್ಮನಕಟ್ಟಿ, ಬೀದರ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಕುರಿಗಾಹಿ ಪ್ರಭು ಮೇತ್ರೆ ಅವರನ್ನು ಕುರಿಗಳ್ಳರು ಕೊಲೆ ಮಾಡಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ಲಕ್ಷ್ಮೀ ಕಳ್ಳಿಮನಿ ಎಂಬ ಕುರಿಗಾಹಿ ಮಹಿಳೆಯನ್ನು ಅತ್ಯಾಚಾರ ಮಾಡಿ ಕ್ರೂರವಾಗಿ ಕೊಲೆ ಮಾಡಲಾಗಿದೆ. ರಾಜ್ಯದಲ್ಲಿರುವ ಗುಡ್ಡುಗಾಡು ಪ್ರದೇಶಗಳಲ್ಲಿ ಕುರಿ ಮೇಯಿಸಲು ಹೋದಾಗ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಹಾಗೂ ಸಿಬ್ಬಂದಿಯಿಂದ ನಿರಂತರ ಕಿರುಕುಳ, ದೌರ್ಜನ್ಯಗಳು ನಡೆಯುತ್ತಿವೆ ಎಂದು ಆರೋಪಿಸಿದರು.ಕುರಿಗಾರ ಹಾಗೂ ಆತನ ಪರಿವಾರದ ಮೇಲೆ ಆಗುತ್ತಿರುವ ನಿರಂತರ ದೌರ್ಜನ್ಯಗಳಂತಹ ದುಷ್ಕೃತ್ಯಗಳ ಕಡಿವಾಣಕ್ಕಾಗಿ ಸಾಂಪ್ರದಾಯಿಕ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆ ರೂಪಿಸಿ ಜಾರಿಗೆ ತರಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇವೆ ಎಂದರು.
ನಾಗರಾಜ ಮೆಣಸಗಿ, ನಾಗಪ್ಪ ಗುಗ್ಗರಿ, ಸೋಮನಗೌಡ ಪಾಟೀಲ, ಬಸಪ್ಪ ಶಿರೂರ, ರಾಘು ವಗ್ಗನವರ, ಮೋಹನ ಇಮರಾಪುರ, ಮುತ್ತು ಜಡಿ, ಸತೀಶ ಗಿಡ್ಡಹನುಮಣ್ಣವರ, ಹನುಮಂತ ಗಿಡ್ಡಹನುಮಣ್ಣವರ, ಆನಂದ ಜೋಗಾಡಿ, ಬಸಪ್ಪ ಗಿಡ್ಡಹನುಮಣ್ಣವರ ಇದ್ದರು.ಸರ್ಕಾರ 2024-25ನೇ ಸಾಲಿನ ಬಜೆಟ್‌ನಲ್ಲಿ ಕುರಿಗಾಹಿಗಳಿಗೆ ಸಂಬಂಧಿಸಿದಂತೆ ದೌರ್ಜನ್ಯ ತಡೆ ಕಾಯ್ದೆ ರೂಪಿಸಲು ಪ್ರಸ್ತಾಪಿಸಿದ್ದು, ಈಗ ಸರ್ಕಾರ ಆ. 11ರಿಂದ ನಡೆದ ಅಧಿವೇಶನದಲ್ಲಿ ಕಾಯ್ದೆಯಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕುರಿಗಾರರ ನಡಿಗೆ ವಿಧಾನಸೌಧ ಕಡೆಗೆ ಎಂಬ ಘೋಷಣಾ ವಾಕ್ಯದೊಂದಿಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಆ. 19ರಂದು ರಾಜ್ಯದ ಎಲ್ಲ ಭಾಗಗಳ ಕುರಿಗಾಹಿಗಳು ಸೇರಿ ಸರ್ಕಾರವನ್ನು ಒತ್ತಾಯಿಸಲು ನಿರ್ಧರಿಸಲಾಗಿದೆ ಎಂದು ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಹೇಳಿದರು.