ಮಹಿಳಾ ಪೊಲೀಸ್ ವೃತ್ತ ನಿರೀಕ್ಷಕಿ ಹಾಗೂ ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳು ಬಂಧಿಸಲು ಹೋಗಿದ್ದ ವೇಳೆ ಮೊಬೈಲ್ ಕಸಿದುಕೊಂಡು, ಹಲ್ಲೆ ಮಾಡಿದ ಮುಸ್ಲಿಂ ಗೂಂಡಾಗಳಾದ ಹಸೇನ್, ಹುಸೇನ್ ಇಬ್ಬರೂ ರಾಷ್ಟ್ರೀಯ ಬೆದರಿಕೆ (ನ್ಯಾಷನಲ್ ಥ್ರೆಟ್‌) ಆಗಿದ್ದಾರೆ. ಪ್ರಕರಣದ ಸೂಕ್ಷ್ಮತೆ ಮತ್ತು ಗಂಭೀರತೆ ಹಿನ್ನೆಲೆ ಇಬ್ಬರನ್ನೂ ಜಿಲ್ಲೆಯಿಂದ ಗಡೀಪಾರು ಮಾಡುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಹಿಳಾ ಪೊಲೀಸ್ ವೃತ್ತ ನಿರೀಕ್ಷಕಿ ಹಾಗೂ ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳು ಬಂಧಿಸಲು ಹೋಗಿದ್ದ ವೇಳೆ ಮೊಬೈಲ್ ಕಸಿದುಕೊಂಡು, ಹಲ್ಲೆ ಮಾಡಿದ ಮುಸ್ಲಿಂ ಗೂಂಡಾಗಳಾದ ಹಸೇನ್, ಹುಸೇನ್ ಇಬ್ಬರೂ ರಾಷ್ಟ್ರೀಯ ಬೆದರಿಕೆ (ನ್ಯಾಷನಲ್ ಥ್ರೆಟ್‌) ಆಗಿದ್ದಾರೆ. ಪ್ರಕರಣದ ಸೂಕ್ಷ್ಮತೆ ಮತ್ತು ಗಂಭೀರತೆ ಹಿನ್ನೆಲೆ ಇಬ್ಬರನ್ನೂ ಜಿಲ್ಲೆಯಿಂದ ಗಡೀಪಾರು ಮಾಡುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಪೊಲೀಸ್ ಇಲಾಖೆಗೆ ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲ್ಲೆಕೋರರು ಪೊಲೀಸ್ ಅಧಿಕಾರಿ, ಸಿಬ್ಬಂದಿ ಬಗ್ಗೆಯೇ ಕೇವಲವಾಗಿ ಮಾತನಾಡಿದ ವೀಡಿಯೋಗಳೂ ವೈರಲ್ ಆಗಿವೆ. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಲಿ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೇ ಮತೀಯ ಗೂಂಡಾಗಳ ಹಾವಳಿ ಮಿತಿ ಮೀರುತ್ತಿದೆ. ಸಚಿವರು ಅಧಿಕಾರ ವಹಿಸಿಕೊಂಡ ನಂತರ ಹುಟ್ಟಿಕೊಂಡ ಪಾಪದ ಕೂಸುಗಳು ಇಂತಹವರು. ಹಸೇನ್‌-ಹುಸೇನ್‌ ಜಿಲ್ಲಾಸ್ಪತ್ರೆ ಬಳಿ ಅದೇ ಕೋಮಿನ ಮತ್ತೊಂದು ಗುಂಪಿನ ಜೊತೆ ಹೊಡೆದಾಡಿದ್ದು, ಇಬ್ಬರನ್ನ ಬಂಧಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.

ಬೆಂಗಳೂರಿನ ಕೆಜೆ ಹಳ್ಳಿ, ಡಿಜೆ ಹಳ್ಳಿ ಸ್ಥಿತಿಯನ್ನೇ ದಾವಣಗೆರೆಯಲ್ಲೂ ತರಲು ಕೆಲವು ಮತೀಯ ಗೂಂಡಾಗಳು ಹೊರಟಿದ್ದಾರೆ. 2024ರಲ್ಲಿ ರಾತ್ರಿ ಅಂಗಡಿ ಮುಂಗ್ಗಟ್ಟು ಬಂದ್ ಮಾಡಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ಮಾಡಿ, ತಮ್ಮ ಹಿಂಭಾಗ ತೋರಿಸಿ, ಅಶ್ಲೀಲವಾಗಿ ವರ್ತಿಸಿದ್ದ ಘಟನೆ ವೇಳೆಯೇ ಪೊಲೀಸ್ ಇಲಾಖೆ ಎಚ್ಚರಗೊಳ್ಳಬೇಕಿತ್ತು. ಚನ್ನಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದಾಗಲೂ ಎಚ್ಚೆತ್ತುಕೊಳ್ಳಬೇಕಿತ್ತು. ಕಠಿಣ ಕ್ರಮ ಕೈಗೊಂಡಿದ್ದರೆ ಇಂದಿನ ಈ ಗತಿ ಪೊಲೀಸ್ ಇಲಾಖೆಗೆ ಬರುತ್ತಿರಲಿಲ್ಲ ಎಂದು ವಿವಿಧ ಪ್ರಕರಣಗಳ ಪ್ರಸ್ತಾಪಿಸಿದ ಅವರು, ಇನ್ನಾದರೂ ಪೊಲೀಸ್ ಇಲಾಖೆ ಮೈಚಳಿ ಬಿಟ್ಟು ಕೆಲಸ ಮಾಡಲಿ. ಘಟನೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ, ನಾಯಕರಿಗೆ ಭೇಟಿ ಮಾಡಿ ತಿಳಿಸಿ, ಸದನದ ಒಳಗೆ ಹಾಗೂ ಹೊರಗೆ ಬಿಜೆಪಿ ಹೋರಾಟ ರೂಪಿಸಲಿದೆ ಎಂದು ರಾಜಶೇಖರ ನಾಗಪ್ಪ ತಿಳಿಸಿದರು.

ಹರಿಹರದ ಶಾಸಕ ಬಿ.ಪಿ.ಹರೀಶ, ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್, ಬಿ.ಜಿ.ಅಜಯಕುಮಾರ, ಟಿ.ಶ್ರೀನಿವಾಸ ದಾಸಕರಿಯಪ್ಪ, ಅನಿಲಕುಮಾರ ನಾಯ್ಕ ಇತರರು ಇದ್ದರು.

- - -

-2ಕೆಡಿವಿಜಿ2: ದಾವಣಗೆರೆಯಲ್ಲಿ ಭಾನುವಾರ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.