ಪತಿ ಸಾವಿನಿಂದ ಖಿನ್ನತೆ: ತಾಯಿ-ಮಗ ನೇಣಿಗೆ

| Published : Jul 14 2024, 01:38 AM IST / Updated: Jul 14 2024, 11:07 AM IST

 Rajasthan Suicide

ಸಾರಾಂಶ

ಪತಿಯ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ತಾಯಿ-ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲಹಂಕ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು :  ಪತಿಯ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ತಾಯಿ-ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲಹಂಕ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಯಲಹಂಕದ ಆರ್‌ಎನ್‌ಝಡ್‌ ಅಪಾರ್ಟ್‌ಮೆಂಟ್‌ ನಿವಾಸಿ ರಮ್ಯಾ(43) ಮತ್ತು ಆಕೆಯ ಪುತ್ರ ಭಾರ್ಗವ್‌(13) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು. ಜು.9ರ ರಾತ್ರಿ ಈ ಘಟನೆ ನಡೆದಿದ್ದು, ಜು.12ರ ಸಂಜೆ ಪುತ್ರಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಾನಸಿಕ ಖಿನ್ನತೆಯಿಂದ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಹಿನ್ನೆಲೆ: ಕೋಲಾರದ ರಮ್ಯಾ ಮತ್ತು ಆಂಧ್ರಪ್ರದೇಶ ಮೂಲದ ಸಾಫ್ಟ್‌ವೇರ್‌ ಎಂಜಿನಿಯರ್‌ ಶ್ರೀಧರ್‌ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ 19 ವರ್ಷದ ಪುತ್ರಿ ಹಾಗೂ 13 ವರ್ಷದ ಮಗ ಇದ್ದರು. ದಂಪತಿ ಮಕ್ಕಳ ಜತೆಗೆ ಯಲಹಂಕದ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದರು. ಪುತ್ರಿ ಪೇಯಿಂಗ್‌ ಗೆಸ್ಟ್‌ನಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುತ್ತಿದ್ದಳು.

ಕ್ಯಾನ್ಸರ್‌ ರೋಗದಿಂದ ಶ್ರೀಧರ್‌ ಮೂರು ತಿಂಗಳ ಹಿಂದೆ ಮೃತಪಟ್ಟಿದ್ದರು. ಮನೆಗೆ ಆಧಾರವಾಗಿದ್ದ ಶ್ರೀಧರ್‌ ಅಕಾಲಿನ ಸಾವಿನ ಬಳಿಕ ರಮ್ಯಾಗೆ ಮನೆ ನಿರ್ವಹಣೆ, ಫ್ಲ್ಯಾಟ್‌ ಬಾಡಿಗೆ, ಮಕ್ಕಳ ಶಾಲಾ-ಕಾಲೇಜು ಶುಲ್ಕಸೇರಿ ಇತರೆ ಖರ್ಚುಗಳನ್ನು ಭರಿಸುವುದು ಕಷ್ಟವಾಗಿತ್ತು. ಹೀಗಾಗಿ ಪತಿ ಸಾವಿನಿಂದ ಜರ್ಜರಿತರಾಗಿದ್ದ ರಮ್ಯಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ನಾವು ಕೂಡ ಸಾಯುವುದಾಗಿ ರಮ್ಯಾ ಹಾಗೂ ಪುತ್ರ ಭಾರ್ಗವ್‌ ಸಂಬಂಧಿಕರ ಬಳಿ ಹೇಳಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಸಾವಿನ ಬಗ್ಗೆ ಮಾತು: ಈ ನಡುವೆ ಪಿಜಿಯಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುತ್ತಿದ್ದ ಪುತ್ರಿ ಎರಡು ದಿನಕೊಮ್ಮೆ ತಾಯಿಗೆ ಕರೆ ಮಾಡಿ ಮಾತನಾಡುತ್ತಿದ್ದಳು. ಜು.9ರಂದು ರಾತ್ರಿ ತಾಯಿಗೆ ಕರೆ ಮಾಡಿ ಮಾತನಾಡಿದ್ದಾಳೆ. ಈ ವೇಳೆ ಸಹ ತಾಯಿ ಮತ್ತು ತಮ್ಮ ಸಾಯುವ ಬಗ್ಗೆ ಮಾತನಾಡಿದ್ದರು. ಈ ವೇಳೆ ಪುತ್ರಿ ಇಬ್ಬರಿಗೂ ಸಮಾಧಾನ ಹೇಳಿ ಕರೆ ಸ್ಥಗಿತಗೊಳಿಸಿದ್ದರು.ಬಳಿಕ ಭಾರ್ಗವ್‌ ಮಲಗುವ ಕೋಣೆಗೆ ತೆರಳಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲ ಸಮಯದ ಬಳಿ ತಾಯಿ ರಮ್ಯಾ ರೂಮ್‌ಗೆ ತೆರಳಿ ನೋಡಿದಾಗ ಭಾರ್ಗವ್‌ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಬಳಿಕ ನೇಣಿನ ಕುಣಿಕೆಯಿಂದ ಮಗನ ಮೃತದೇಹ ಕೆಳಗೆ ಇಳಿಸಿದ ರಮ್ಯಾ ಬಳಿಕ ತಾನೂ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶುಕ್ರವಾರ ಸಂಜೆ ಘಟನೆ ಬೆಳಕಿಗೆ:

ಜು.10 ಮತ್ತು 11ರಂದು ಮನೆಯಿಂದ ತಾಯಿ ಕರೆ ಮಾಡದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪುತ್ರಿ ಜು.12ರ ಸಂಜೆ ಮನೆಗೆ ಬಂದಿದ್ದಾರೆ. ಈ ವೇಳೆ ಮನೆ ಬಾಗಿಲು ಹಾಕಿದ್ದರಿಂದ ತನ್ನ ಬಳಿಯಿದ್ದ ಮತ್ತೊಂದು ಕೀ ಬಳಸಿ ಮನೆ ಬಾಗಿಲು ತೆರೆದು ರೂಮ್‌ಗೆ ತೆರಳಿ ನೋಡಿದಾಗ ತಾಯಿ ಮತ್ತು ತಮ್ಮನ ಆತ್ಮಹತ್ಯೆ ಘಟನೆ ಬೆಳಕಿಗೆ ಬಂದಿದೆ. ಬಳಿಕ ಸ್ಥಳೀಯರ ನೆರವಿನಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪರಿಶೀಲನೆ ನಡೆಸಿ ಅರೆಬರೆ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಶನಿವಾರ ಎರಡೂ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.

ಪುತ್ರಿಗೆ ಕರೆ ಮಾಡಿದಾಗಲೆಲ್ಲ ತಾಯಿಯ ಆತ್ಮಹತ್ಯೆ ಮಾತು

ತಾಯಿ-ಮಗ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆ ವರದಿ ಹಾಗೂ ವಿಧಿವಿಜ್ಞಾನ ತಜ್ಞರ ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ತಂದೆ ಸಾವಿನ ಬಳಿಕ ತಾಯಿ ಮತ್ತು ತಮ್ಮ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ನಾನು ಕರೆ ಮಾಡಿದಾಗಲೆಲ್ಲಾ ಆತ್ಮಹತ್ಯೆ ಬಗ್ಗೆ ಮಾತನಾಡುತ್ತಿದ್ದರು ಎಂದು ಪುತ್ರಿ ಹೇಳಿಕೆ ನೀಡಿದ್ದಾಳೆ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಯಲಹಂಕ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.