ಕನ್ನಡಪ್ರಭ ವಾರ್ತೆ ಪಾವಗಡ

ತುಂಗಭದ್ರಾ ಕುಡಿಯುವ ನೀರಿನ ಸರಬರಾಜು ಹಾಗೂ ಶಿಕ್ಷಣ ಇಲಾಖೆಯ ಅಸಮರ್ಪಕ ನಿರ್ವಹಣೆ ಕುರಿತು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ಅಸಮಾಧಾನ ವ್ಯಕ್ತಪಡಿಸಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಶುಕ್ರವಾರ ತುಮಕೂರಿನಲ್ಲಿ ನಡೆದ ದಿಶಾ ಸಭೆಯಲ್ಲಿ ಈ ಭಾಗದ ಚಿತ್ರದುರ್ಗ ಲೋಕಸಭಾ ಸಂಸದ ಗೋವಿಂದ ಎಂ.ಕಾರಜೋಳ ಅವರು ಬಹುಗ್ರಾಮಗಳ ತುಂಗಭದ್ರಾ ನೀರು ಅಸಮರ್ಪಕ ಸರಬರಾಜಿನ ಬಗ್ಗೆ ಟೀಕಾ ಪ್ರಹಾರ ನಡೆಸಿದ್ದರು. ಈ ಹಿನ್ನಲೆಯಲ್ಲಿ ಶನಿವಾರ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಪಾವಗಡಕ್ಕೆ ಆಗಮಿಸಿ ಪಾವಗಡ ಪಟ್ಟಣ ವ್ಯಾಪ್ತಿಯಲ್ಲಿ ತುಂಗಭದ್ರಾ ಕುಡಿಯುವ ನೀರಿನ ಸರಬರಾಜು ಯೋಜನೆಯ ಪ್ರಗತಿಯನ್ನು ಪರಿಶೀಲನೆ ನಡೆಸಿದರು.

ರೊಪ್ಪ ಬಳಿಯಿರುವ ಓವರ್ ಹೆಡ್ ಟ್ಯಾಂಕ್, ಪರಿಶೀಲನೆ ನಡೆಸಿ, ಟ್ಯಾಂಕ್‌ ನಿರ್ವಹಣೆ ಸರಿಯಿಲ್ಲದ ಕಾರಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು ಟ್ಯಾಂಕ್ ಸ್ವಚ್ಛತೆ ಮತ್ತು ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜಿನ ಬಗ್ಗೆ ಸೂಕ್ತ ಕ್ರಮವಹಿಸಿ ವರದಿ ನೀಡುವಂತೆ ಪಿಡಿಒ ವಿಜಯಕುಮಾರ್‌ ಹಾಗೂ ಪುರಸಭೆಯ ಆರೋಗ್ಯಧಿಕಾರಿ ಶಂಷುದ್ಧೀನ್‌ ಅವರಿಗೆ ಆದೇಶಿಸಿದರು.

ಪಾವಗಡ ತಾಲೂಕಿನ ಹಲವು ಸರ್ಕಾರಿ ಶಾಲೆಗಳ ಅವ್ಯವಸ್ಥೆ ಕಣ್ಣಾರೆ ಕಂಡ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಸಮರ್ಪಕ ನಿರ್ವಹಣೆ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿ, ಶಿಕ್ಷಕರ ಗೈರು ಹಾಜರಿ, ಸರ್ಕಾರದಿಂದ ಬಂದ ಸವಲತ್ತುಗಳನ್ನು ಸಮರ್ಪಕವಾಗಿ ಬಳಕೆ ಮಾಡದಿರುವುದು ಇತರೆ ಅವ್ಯವಸ್ಥೆ ಕಂಡು ಸಿಡಿಮಿಡಿಗೊಂಡರು. ಕೋಟಗುಡ್ಡ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಗೆ ಭೇಟಿ ನೀಡಿದ ವೇಳೆ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳು ಖಾಲಿ ಕುಳಿತಿದ್ದು ಕಂಡುಬಂದಿತು. ಅಲ್ಲಿನ ವಿಜ್ಞಾನ ಶಿಕ್ಷಕರು ವಸ್ತುಪ್ರದರ್ಶನಕ್ಕೆ ಹೋಗಿರುವುದಾಗಿ ಅಲ್ಲಿನ ಸಿಬ್ಬಂದಿ ತಿಳಿಸಿದಾಗ, ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಮ್ಮ ಆ ವಿಷಯ ತಮಗೆ ತಿಳಿಯದು ಎಂದು ಉತ್ತರಿಸಿದರು. ಇದಕ್ಕೆ ಬೇಸರ ವ್ಯಕ್ತಪಡಿಸಿದ ಡಿಸಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಹತ್ತಿರ ಬರುತ್ತಿವೆ. ಈಗಲೂ ಇಷ್ಟೊಂದು ನಿರ್ಲಕ್ಷ್ಯ ವಹಿಸಿದರೆ ಹೇಗೆ? ಎಂದು ಪ್ರಶ್ನಿಸಿದರು. ಅನುಮತಿಯಿಲ್ಲದೆ ಶಾಲೆಗೆ ಗೈರಾದ ಶಿಕ್ಷಕರಿಗೆ ನೋಟಿಸ್ ಜಾರಿ ಮಾಡುವಂತೆ ಆದೇಶಿಸಿದರು. ಜೊತೆಗೆ ಇಲ್ಲಿನ ಪಿಎಂಶ್ರೀ ಆದರ್ಶ ಶಾಲೆಗೆ ನೀಡಿದ್ದ ಉಪಕರಣಗಳು ಹಾಳಾಗಿದ್ದನ್ನು ಕಂಡು ಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.


ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಸೀಲ್ದಾರ್ ರವಿ, ತಾಪಂ ಕಾರ್ಯನಿರ್ವಹಣಾಧಿಕಾರಿಸೂಧನ್, ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಮ್ಮ, ಬೆಸ್ಕಾಂ ಎಇಇ ಕೃಷ್ಣಮೂರ್ತಿ, ಪುರಸಭೆ ಆರೋಗ್ಯ ನಿರೀಕ್ಷಕ ಶಂಶುದ್ಧೀನ್,ನೀರು ಸರಬರಾಜು ಉಸ್ತುವಾರಿ ಭಾಗ್ಯಮ್ಮ, ಗ್ರಾಮೀಣ ಕುಡಿಯುವ ನೀರು ಇಲಾಖೆ ಎಇ ಬಸವಲಿಂಗಪ್ಪ,ಆರ್‌ಐ ಕಿರಣ್‌ಕುಮಾರ್‌, ಮತ್ತಿತರರು ಹಾಜರಿದ್ದರು.

21ಪಿವಿಡಿ1

ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಟ್ಯಾಂಕ್‌ಗೆ ಸರಬರಾಜು ಅಗಿದ್ದ ತುಂಗಭದ್ರಾ ಕುಡಿಯುವ ನೀರನ್ನು ಜಿಲ್ಲಾಧಿಕಾರಿ ಶುಭಕಲ್ಯಾಣ್‌ ಸೇವಿಸಿ ಪರೀಕ್ಷಿಸಿದರು.