ಕನ್ನಡಪ್ರಭ ವಾರ್ತೆ ಬೆಳಗಾವಿಮಹಾನಗರ ಪಾಲಿಕೆಯ ಕಾರ್ಯವೈಖರಿಯನ್ನು ಪರಿಶೀಲಿಸಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು, ಅಧಿಕಾರಿಗಳು ಮತ್ತು ಸಿಬ್ಬಂದಿಯ ಕರ್ತವ್ಯ ನಿರ್ಲಕ್ಷ್ಯಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಹಲವು ವಿಷಯಗಳಲ್ಲಿ ಖಡಕ್ ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಮಹಾನಗರ ಪಾಲಿಕೆಯ ಕಾರ್ಯವೈಖರಿಯನ್ನು ಪರಿಶೀಲಿಸಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು, ಅಧಿಕಾರಿಗಳು ಮತ್ತು ಸಿಬ್ಬಂದಿಯ ಕರ್ತವ್ಯ ನಿರ್ಲಕ್ಷ್ಯಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಹಲವು ವಿಷಯಗಳಲ್ಲಿ ಖಡಕ್ ಎಚ್ಚರಿಕೆ ನೀಡಿದರು.ಗುರುವಾರ ಬೆಳಗಾವಿ ಮಹಾನಗರ ಪಾಲಿಕೆಗೆ ಭೇಟಿ ನೀಡಿದ ಅವರು, ಸಿಬ್ಬಂದಿಯ ಹಾಜರಾತಿ ವಹಿ, ನಗದು ವಹಿ ಹಾಗೂ ಚಲನವಲನ ವಹಿಗಳನ್ನು ಪರಿಶೀಲಿಸಿದರು. ಹಾಜರಾತಿ ವಹಿಯನ್ನು ಸಮರ್ಪಕವಾಗಿ ನಿರ್ವಹಿಸದಿರುವುದನ್ನು ಪ್ರಶ್ನಿಸಿದ ಅವರು, ಸಿಬ್ಬಂದಿ ಬೆಳಗ್ಗೆ ಮತ್ತು ಸಂಜೆ ಕಡ್ಡಾಯವಾಗಿ ಹಾಜರಾತಿ ದಾಖಲಿಸಬೇಕು ಎಂದು ಸೂಚಿಸಿದರು. ಅಲ್ಲದೆ, ಕಳೆದ 3 ತಿಂಗಳ ಸಿಬ್ಬಂದಿಯ ಹಾಜರಾತಿ ವಿವರ ಹಾಗೂ ವಿವಿಧ ಶಾಖೆಗಳ ಮುಖ್ಯಸ್ಥರ ವೇತನದ ವಿವರಗಳನ್ನು ಪಡೆದುಕೊಂಡರು.ಮಾಂಜಾ ದಾರದಿಂದ ಮೃತಪಟ್ಟವರಿಗೆ ಪರಿಹಾರಕ್ಕೆ ಸೂಚನೆ: ಮಾಂಜಾ ದಾರದಿಂದ ಸಂಭವಿಸಿದ ದುರಂತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಪರಿಹಾರ ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.ಈ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಲು ಲೋಕಾಯುಕ್ತ ಕಚೇರಿಯ ಸಿಬ್ಬಂದಿ ದೂರವಾಣಿ ಮೂಲಕ ಸಂಪರ್ಕಿಸಿದಾಗ ಸಮರ್ಪಕವಾಗಿ ಸ್ಪಂದಿಸದಿರುವುದಕ್ಕೂ ಅವರು ಆಕ್ರೋಶ ವ್ಯಕ್ತಪಡಿಸಿದರು.ಲೀಸ್ ನಿವೇಶನ, ಒತ್ತುವರಿ ಜಾಗದ ವಿವರಕ್ಕೆ ಸೂಚನೆ: ಬಳಿಕ ಪಾಲಿಕೆಯ ವಿವಿಧ ಶಾಖೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಉಪ ಲೋಕಾಯುಕ್ತರು, ಪಾಲಿಕೆಯಿಂದ ಲೀಸ್ಗೆ ನೀಡಿರುವ ನಿವೇಶನಗಳ ವಿವರಗಳನ್ನು ಪಡೆದುಕೊಂಡರು. ದೀರ್ಘಾವಧಿಗೆ ಲೀಸ್ ನೀಡಿರುವ ನಿವೇಶನಗಳ ಸಂಪೂರ್ಣ ಮಾಹಿತಿ ಹಾಗೂ ಪಾಲಿಕೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿರುವವರ ವಿವರಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಇದಲ್ಲದೆ, ಕಚೇರಿ ಸಿಬ್ಬಂದಿಯ ಮೊಬೈಲ್ಗಳನ್ನು ಪರಿಶೀಲಿಸಿದ ಅವರು, ಸಿಬ್ಬಂದಿಯ ಬ್ಯಾಂಕ್ ಖಾತೆಗಳ ವಿವರಗಳನ್ನು ಒದಗಿಸುವಂತೆಯೂ ತಿಳಿಸಿದರು. ಪಾಲಿಕೆಯ ವಾಹನಗಳ ಮಾಹಿತಿ ಪಡೆದು, ಫಿಟ್ನೆಸ್ ಹೊಂದಿರುವ ವಾಹನಗಳ ವಿವರಗಳನ್ನು ಪರಿಶೀಲಿಸಿದರು.ಬೀದಿ ದೀಪ, ಸ್ವಚ್ಛತೆ ನಿರ್ಲಕ್ಷಿಸಿದರೆ ಕ್ರಮ: ಪಾಲಿಕೆ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ, ಕುಡಿಯುವ ನೀರಿನ ವ್ಯವಸ್ಥೆ ಉತ್ತಮವಾಗಿದೆ ಹಾಗೂ ನಗರದಲ್ಲಿ 38 ಸಾವಿರ ಬೀದಿ ದೀಪಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸಿಬ್ಬಂದಿ ಮಾಹಿತಿ ನೀಡಿದರು. ಆದರೆ, ಈ ಮಾಹಿತಿಗೆ ತೃಪ್ತರಾಗದ ಉಪ ಲೋಕಾಯುಕ್ತರು, ಬೀದಿ ದೀಪಗಳ ಕುರಿತು ನಾಗರಿಕರಿಂದ ದೂರುಗಳು ಬಂದಲ್ಲಿ ಸಂಬಂಧಿಸಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಬೆಳಗಾವಿ ನಗರದಲ್ಲಿ ಸ್ವಚ್ಛತೆ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸಿದ ಅವರು, ನಗರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಿದರು. ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸುವವರ ವಿರುದ್ಧ ದೂರು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ನಿರ್ದೇಶನ ನೀಡಿದರು.ಈ ಸಂದರ್ಭದಲ್ಲಿ ಉಪನಿಬಂಧಕ ಅರವಿಂದ, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಪ್ರಸನ್ ದೇಸಾಯಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್. ಶಿವಕುಮಾರ, ಮಹಾನಗರ ಪಾಲಿಕೆ ಆಯುಕ್ತ ಎಂ. ಕಾರ್ತಿಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.