ಹಳಿ ತಪ್ಪಿದ ಗೂಡ್ಸ್‌ ರೈಲು: ರೈಲುಗಳ ಸಂಚಾರ ರದ್ದು

| Published : Aug 10 2024, 01:36 AM IST

ಹಳಿ ತಪ್ಪಿದ ಗೂಡ್ಸ್‌ ರೈಲು: ರೈಲುಗಳ ಸಂಚಾರ ರದ್ದು
Share this Article
  • FB
  • TW
  • Linkdin
  • Email

ಸಾರಾಂಶ

ವಾಸ್ಕೋದಿಂದ ಹೊಸಪೇಟೆ ಕಡೆಗೆ ಈ ಗೂಡ್ಸ್ ರೈಲು ತೆರಳುತ್ತಿತ್ತು. ಕಲ್ಲಿದ್ದಲು ಹೊತ್ತು ತೆರಳುತ್ತಿದ್ದ ಈ ರೈಲು ಕ್ಯಾಸೆಲ್ ರಾಕ್ ಬಳಿಕ ಹಳಿ ತಪ್ಪಿದ್ದರಿಂದ ರೈಲಿನ 11 ಬೋಗಿಗಳು ನೆಲಕ್ಕುರುಳಿವೆ. ಲೋಡ್ ಆಗಿದ್ದ ಕಲ್ಲಿದ್ದಲು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಹುಬ್ಬಳ್ಳಿ:ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯ ದೂದಸಾಗರ್ ಹಾಗೂ ಸೋನಾಲಿಯಂ ಮಧ್ಯ ಗೂಡ್ಸ್ ರೈಲು ಹಳಿ ತಪ್ಪಿದೆ. ಇದರಿಂದಾಗಿ ಕೆಲ ರೈಲುಗಳ ಸಂಚಾರವನ್ನು ರದ್ದುಪಡಿಸಿದ್ದರೆ ಕೆಲ ರೈಲುಗಳ‌ ಮಾರ್ಗವನ್ನು ಬದಲಿಸಲಾಗಿದೆ.‌ ಸರಿಪಡಿಸುವ ಕಾರ್ಯ ಭರದಿಂದ ಸಾಗಿದೆ.

ವಾಸ್ಕೋದಿಂದ ಹೊಸಪೇಟೆ ಕಡೆಗೆ ಈ ಗೂಡ್ಸ್ ರೈಲು ತೆರಳುತ್ತಿತ್ತು. ಕಲ್ಲಿದ್ದಲು ಹೊತ್ತು ತೆರಳುತ್ತಿದ್ದ ಈ ರೈಲು ಕ್ಯಾಸೆಲ್ ರಾಕ್ ಬಳಿಕ ಹಳಿ ತಪ್ಪಿದ್ದರಿಂದ ರೈಲಿನ 11 ಬೋಗಿಗಳು ನೆಲಕ್ಕುರುಳಿವೆ. ಲೋಡ್ ಆಗಿದ್ದ ಕಲ್ಲಿದ್ದಲು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಹೊಸಪೇಟೆ ಬಳಿಯ ಜಿಂದಾಲ್ ಕಂಪನಿಯು ಎಂದಿನಂತೆ ವಾಸ್ಕೋದಿಂದ ಕಲ್ಲಿದ್ದಲು ಆಮದು ತರಿಸಿಕೊಳ್ಳುತ್ತದೆ. ದೂದ್ ಸಾಗರ್‌ನಿಂದ ಸೋನಾಲಿಂ ನಡುವಿನ ಸುರಂಗ ಸಂಖ್ಯೆ 15ರ ಸಮೀಪ ವಾಸ್ಕೋದಿಂದ ತೋರಣಗಲ್ ಹೊಸಪೇಟೆಯ ಜಿಂದಾಲ್ ಕಂಪನಿಗೆ ಕಲ್ಲಿದ್ದಲು ಸಾಗಿಸುವ ಸರಕು ರೈಲು ಹಳಿ ತಪ್ಪಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ವರದಿ ಆಗಿದೆ. ಸದ್ಯ ಹುಬ್ಬಳ್ಳಿ ಮತ್ತು ಬೆಳಗಾವಿ ರೈಲುಗಳ ಸಂಚಾರದಲ್ಲಿ ಒಂದಷ್ಟು ವ್ಯತ್ಯಯವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಂಚಾರ ಸ್ಥಗಿತ: ಸದ್ಯ ಈ ಮಾರ್ಗದಲ್ಲಿ ಎಲ್ಲಾ ರೈಲು ಸಂಚಾರ ಸ್ಥಗಿತ ಮಾಡಲಾಗಿದೆ. ಹುಬ್ಬಳ್ಳಿ-ಲೋಂಡಾ-ಗೋವಾ ರೈಲು ಮಾರ್ಗವು ಅತ್ಯಂತ ದುರ್ಗಮ ಪ್ರದೇಶವಾಗಿದೆ. ಕಾಡು, ಕಣಿವೆಗಳಿಂದ ಆವೃತವಾಗಿರುವ ಈ ಪ್ರದೇಶದಲ್ಲಿ ರೈಲು ಮಾರ್ಗ ಬಿಟ್ಟರೆ ಬೇರಾವ ಮಾರ್ಗವೂ ಇಲ್ಲಿಲ್ಲ. ಇದೀಗ ಬಿದ್ದ ರೈಲು ಬೋಗಿಗಳನ್ನು ತೆರವುಗೊಳಿಸಲು, ಕಲ್ಲಿದ್ದಲ್ಲು ಸಾಗಿಸಲು ಹೆಚ್ಚು ಸಮಯ ಹಿಡಿಯುತ್ತದೆ. ಗೋವಾದ ಗಡಿಭಾಗದಿಂದ ನಿತ್ಯ ಕರ್ನಾಟಕಕ್ಕೆ ಬರುತ್ತಿದ್ದ ರೈಲುಗಳ ಸಂಚಾರಕ್ಕೆ ತಾತ್ಕಾಲಿಕ ಅಡಚಣೆ ಉಂಟಾಗಿದೆ. ಈ ಮಾರ್ಗದಲ್ಲಿ ಆ. ೧೦ರಂದು ಸಂಚರಿಸಬೇಕಾದ ಕೆಲ ರೈಲುಗಳನ್ನು ರದ್ದು ಪಡಿಸಿದ್ದರೆ ಕೆಲ ರೈಲುಗಳ ಸಂಚಾರವನ್ನು ಭಾಗಶಃ ರದ್ದುಪಡಿಸಲಾಗಿದೆ. ಕೆಲ ರೈಲುಗಳ ಮಾರ್ಗ ಬದಲಿಸಲಾಗಿದೆ. ಟ್ರೈನ್ ಸಂಖ್ಯೆ ೧೧೦೯೭ ಪುಣೆ- ಎರ್ನಾಕುಲಂ ( ಪೂರ್ಣ ಎಕ್ಸಪ್ರೈಸ್) ಆ.೧೦ರಂದು ಪಾನ್ವೆಲ್, ಮಡಗಾಂವ ಮೂಲಕ ಸಂಚರಿಸಲಿದೆ. ಟ್ರೈನ್ ಸಂಖ್ಯೆ ೧೮೦೪೮ ವಾಸ್ಕೋಡಿ ಗಾಮಾ-ಶಾಲಿಮಾರ್ ಎಕ್ಸ್‌ಪ್ರೇಸ್ ರೈಲು ಆ. ೧೧ರಂದು ವಾಸ್ಕೋಡಿಗಾಮಾದಿಂದ ಹುಬ್ಬಳ್ಳಿ ಮಧ್ಯದ ಸಂಚಾರ ರದ್ದುಗೊಳಿಸಲಾಗಿದೆ. ಟ್ರೈನ್ ಸಂಖ್ಯೆ ೧೭೩೦೯ ಯಶವಂತಪುರ-ವಾಸ್ಕೋ ಡಿಗಾಮಾ ಹಾಗೂ ಟ್ರೈನ್ ಸಂಖ್ಯೆ ೧೭೩೧೦ ವಾಸ್ಕೋ ಡಿಗಾಮಾ-ಯಶವಂತಪುರ ರೈಲು ಸಂಚಾರ ರದ್ದುಪಡಿಸಲಾಗಿದೆ. ಟ್ರೈನ್ ಸಂಖ್ಯೆ ೧೨೭೭೯ ವಾಸ್ಕೋಡಿಗಾಮಾ - ಹಜರತ್ ನಿಜಾಮುದ್ದೀನ ಎಕ್ಸ್‌ಪ್ರೇಸ್ ರೈಲು ಆ. ೧೦ರಂದು ಮಡಗಾಂವ, ಕಲ್ಯಾಣ,‌ ಪುಣೆ ಮಾರ್ಗವಾಗಿ ಸಂಚರಿಸಲಿದೆ.