ಸಾರಾಂಶ
ಹುಬ್ಬಳ್ಳಿ: ಹುಬ್ಬಳ್ಳಿ-ಸೋಲಾಪುರ ರೈಲ್ವೆ ಮಾರ್ಗದ ಗದಗ-ಹುಟಗಿ ವಿಭಾಗ ವ್ಯಾಪ್ತಿಯಲ್ಲಿ ಬರುವ ಲಚ್ಯಾಣ-ತಡವಾಳ ಮಾರ್ಗದಲ್ಲಿ ಮಂಗಳವಾರ ಮಧ್ಯರಾತ್ರಿ 1.30ರ ಸುಮಾರು ಗೂಡ್ಸ್ ರೈಲೊಂದು ಹಳಿ ತಪ್ಪಿದೆ. ದುರಸ್ತಿ ಕಾರ್ಯ ನಿರಂತರವಾಗಿ ನಡೆಯುತ್ತಿದೆ.
ಈ ನಡುವೆ ಈ ಮಾರ್ಗದಲ್ಲಿ ಸಂಚರಿಸಬೇಕಾದ ಹಲವು ರೈಲುಗಳನ್ನು ಭಾಗಶಃ ರದ್ದು ಮಾಡಿ ಬಸ್ ಮೂಲಕ ಪ್ರಯಾಣಿಕರಿಗೆ ಅವರ ಗಮ್ಯ ಸ್ಥಳಕ್ಕೆ ಕಳುಹಿಸಲಾಯಿತು. ಕೆಲ ರೈಲುಗಳ ಮಾರ್ಗ ಬದಲಿಸಲಾಗಿದೆ.
ಯರಿಭೂಮಿಯಾಗಿದ್ದರಿಂದ ಇತ್ತೀಚಿಗೆ ಸುರಿದ ಮಳೆಯಿಂದಾಗಿ ರೈಲು ಹಳಿಗಳು ಕೆಳಕ್ಕೆ ಕುಸಿದಿದ್ದವು. ಈ ಕಾರಣದಿಂದಾಗಿ ಮಂಗಳವಾರ ರಾತ್ರಿ ಈ ಮಾರ್ಗದಲ್ಲಿ ಸಂಚರಿಸಿದ ಗೂಡ್ಸ್ ರೈಲೊಂದು ಹಳಿ ತಪ್ಪಿದೆ. ಈಗಾಗಲೇ ದುರಸ್ತಿ ಕಾರ್ಯ ನಡೆಸಿದೆ.
ಹಲವು ರೈಲು ಸಂಚಾರ ರದ್ದು:
ಈ ಮಾರ್ಗದ ಮೂಲಕ ಸಂಚರಿಸುತ್ತಿದ್ದ ಸೋಲಾಪುರ-ಹೊಸಪೇಟೆ (ರೈಲು ಸಂಖ್ಯೆ 11305), ಹೊಸಪೇಟೆ-ಸೋಲಾಪುರ (11306), ರಾಯಚೂರು-ವಿಜಯಪುರ (07664), ವಿಜಯಪುರ-ಹೈದರಾಬಾದ್(17029), ಸೋಲಾಪುರ-ಹುಬ್ಬಳ್ಳಿ (07331) ಮಾರ್ಗ ರದ್ದುಪಡಿಸಲಾಗಿದೆ. ಧಾರವಾಡ-ಸೊಲ್ಲಾಪುರ, ವಿಜಯಪುರ- ಸೊಲ್ಲಾಪುರ, ಹೊಸಪೇಟೆ- ವಿಜಯಪುರ, ವಿಜಯಪುರ- ಸೊಲ್ಲಾಪುರ, ಹೈದರಾಬಾದ್- ವಿಜಯಪುರ, ಸೊಲ್ಲಾಪುರ- ವಿಜಯಪುರ ಮಾರ್ಗದ ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.
ಪ್ರಯಾಣಿಕರಿಗೆ ಬಸ್ ವ್ಯವಸ್ಥೆ
ಹಳಿ ತಪ್ಪಿದ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಾಗುವ ಎಲ್ಲ ರೈಲುಗಳ ಸಂಚಾರ ಮಾರ್ಗವನ್ನು ತಾತ್ಕಾಲಿಕವಾಗಿ ಬದಲಾಯಿಸಲಾಗಿದೆ. ವಿಜಯಪುರ ರೈಲ್ವೆ ನಿಲ್ದಾಣದಲ್ಲಿ 1000ಕ್ಕೂ ಹೆಚ್ಚು ಪ್ರಯಾಣಿಕರಿಗೆ ಆಹಾರ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಕಲಬುರಗಿಗೆ ತೆರಳುವ ಪ್ರಯಾಣಿಕರಿಗೆ ವಿಜಯಪುರದಿಂದ ಬಸ್ ವ್ಯವಸ್ಥೆ ಮಾಡಿ ಕಳುಹಿಸಲಾಯಿತು.
ಮಹಾಪ್ರಬಂಧಕ ಅರವಿಂದ ಶ್ರೀವಾಸ್ತವ ಸ್ಥಳಕ್ಕೆ ಭೇಟಿ ನೀಡಿ, ದುರಸ್ತಿ ಕಾರ್ಯ ವೀಕ್ಷಿಸಿದರು. ಸಿಬ್ಬಂದಿಗೆ ಕೆಲವೊಂದಿಷ್ಟು ಸೂಚನೆ ನೀಡಿದರು.