ಮೇಲಾಧಿಕಾರಿಗಳ ಯಾವುದೇ ಅಧಿಕೃತ ಆದೇಶವಿಲ್ಲದಿದ್ದರೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹುದ್ದೆಯ ಅಧಿಕಾರ ಚಲಾಯಿಸಿರುವುದು ಸೇರಿ ಗಂಭೀರ ಸ್ವರೂಪದ ಆರೋಪಗಳನ್ನು ಎದುರಿಸುತ್ತಿರುವ ನಗರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಕಚೇರಿಯಲ್ಲಿ ಕಿರಿಯ ಎಂಜಿನಿಯರ್ ಆಗಿದ್ದ ನಾಗರಾಜ ಪ್ರಭಾ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಪಂ ಸಿಇಒ ಈಶ್ವರ್‌ ಕಾಂದೂ ಆದೇಶ ಹೊರಡಿಸಿದ್ದಾರೆ.

ಸಿಂಧನೂರು: ಮೇಲಾಧಿಕಾರಿಗಳ ಯಾವುದೇ ಅಧಿಕೃತ ಆದೇಶವಿಲ್ಲದಿದ್ದರೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹುದ್ದೆಯ ಅಧಿಕಾರ ಚಲಾಯಿಸಿರುವುದು ಸೇರಿ ಗಂಭೀರ ಸ್ವರೂಪದ ಆರೋಪಗಳನ್ನು ಎದುರಿಸುತ್ತಿರುವ ನಗರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಕಚೇರಿಯಲ್ಲಿ ಕಿರಿಯ ಎಂಜಿನಿಯರ್ ಆಗಿದ್ದ ನಾಗರಾಜ ಪ್ರಭಾ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಪಂ ಸಿಇಒ ಈಶ್ವರ್‌ ಕಾಂದೂ ಆದೇಶ ಹೊರಡಿಸಿದ್ದಾರೆ.

ನಾಗರಾಜ ಪ್ರಭಾ ಹಿರಿಯ ಅಧಿಕಾರಿಗಳ ಆದೇಶವಿಲ್ಲದೆ ಹಣಕಾಸು ಅಧಿಕಾರ ಚಲಾಯಿಸಿರುವ ಜೊತೆಗೆ ಪೂರ್ಣ ಪ್ರಮಾಣದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕರ್ತವ್ಯಕ್ಕೆ ಹಾಜರಾದ ನಂತರವೂ ಎಸ್‍ಬಿಆರ್‌ನಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ನಂತೆ ಸಹಿ ಮಾಡಿ ಅಧಿಕಾರ ವ್ಯಾಪ್ತಿ ಮೀರಿ ಕಾರ್ಯನಿರ್ವಹಿಸಿದ್ದಾರೆ. ಸಿಟಿಸಿಯಲ್ಲಿ 20.6.2026 ರವರೆಗೆ ಒಟ್ಟು 18 ಬಿಲ್ಲುಗಳಿಗೆ ಅವರು ರುಜು ಮಾಡಿರುವುದು ಕಂಡು ಬಂದಿದೆ. ಈ ಪೈಕಿ 12 ಬಿಲ್ಲುಗಳಿಗೆ ಎಇಇ ಆಗಿದ್ದ ಶ್ಯಾಮ್‍ಸುಂದರ ಕಾಳೇಕರ್ ಸಹಿ ಮಾಡಿದ ಬಳಿಕವೂ 6 ಬಿಲ್ಲುಗಳಿಗೆ ನಾಗರಾಜ ಪ್ರಭಾ ಸಹಿ ಮಾಡಿರುವುದು ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 21, 2026 ರಂದು ವಿಭಾಗ ಕಚೇರಿಗೆ ಬಂದು ಸಿಬ್ಬಂದಿ ಊಟಕ್ಕೆ ತೆರಳಿದ ಸಂದರ್ಭದಲ್ಲಿ 1.9.2026 ರಿಂದ 21.9.2026 ರವರೆಗೆ ತಾವು ಕರ್ತವ್ಯಕ್ಕೆ ಹಾಜರಿದ್ದುದಾಗಿ ದಾಖಲಿಸಿದ್ದಾರೆ. ಮತ್ತೊಂದೆಡೆ ಇಲಾಖೆಯ ನೋಟಿಸ್‍ಗೆ ಉತ್ತರಿಸಿಲ್ಲ. ರಜೆ ಅರ್ಜಿ ಸಲ್ಲಿಸದೆ ಕೇಂದ್ರ ಸ್ಥಾನ ತೊರೆದಿರುವ ಅವರು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಸೆ.24 ರಂದು ಮಧ್ಯರಾತ್ರಿ 12.05ಕ್ಕೆ ಆತ್ಮಹತ್ಯೆಗೆ ಪ್ರಯತ್ನಿಸುವಂತಹ ಛಾಯಾಚಿತ್ರಗಳನ್ನು ಕಾರ್ಯನಿರ್ವಾಹಕ ಎಂಜನಿಯರ್‍ಗೆ ಕಳುಹಿಸಿರುವುದು ಕಂಡು ಬಂದಿದೆ. ಈ ಎಲ್ಲ ಅಂಶಗಳನ್ನು ಗಮನಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರಕುಮಾರ ಕಾಂದೂ ಅವರು ನಾಗರಾಜ ಪ್ರಭಾ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.