ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶುಕ್ರವಾರ ಸ್ಥಳೀಯ ಕಾಂಗ್ರೆಸ್ ನಗರ ಹಾಗೂ ಗ್ರಾಮೀಣ ಮಹಿಳಾ ಘಟಕದ ಕಾರ್ಯಕರ್ತರು ತಹಸೀಲ್ದಾರ್ ಸುರೇಶಕುಮಾರ ಟಿ. ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ರಾಣಿಬೆನ್ನೂರು: ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶುಕ್ರವಾರ ಸ್ಥಳೀಯ ಕಾಂಗ್ರೆಸ್ ನಗರ ಹಾಗೂ ಗ್ರಾಮೀಣ ಮಹಿಳಾ ಘಟಕದ ಕಾರ್ಯಕರ್ತರು ತಹಸೀಲ್ದಾರ್ ಸುರೇಶಕುಮಾರ ಟಿ. ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಪೂರ್ಣಿಮಾ ಕೋಳಿವಾಡ ಮಾತನಾಡಿ, ರಾಜ್ಯ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಗಳು ಹಾಗೂ ಉಚಿತ ಬಸ್ ಸೇವೆಯ ಬಗ್ಗೆ ಚುನಾವಣಾ ಪ್ರಚಾರ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ನಟಿ ಶೃತಿ ಈ ಯೋಜನೆಯಿಂದ ಹೆಣ್ಣು ಮಕ್ಕಳು ತೀರ್ಥಯಾತ್ರೆಗೆ ಹೋಗುತ್ತೇವೆ ಎಂದು ಹೇಳಿ ಎಲ್ಲೆಲ್ಲೋ ಹೋಗುತ್ತಿದ್ದಾರೆಂದು ಹೇಳಿಕೆ ನೀಡಿರುವುದು ಸರಿಯಲ್ಲ. ಇವರು ಮಹಿಳೆಯರ ಘನತೆಗೆ ಧಕ್ಕೆ ತರುವಂತೆ ನಡೆದುಕೊಂಡಿದ್ದಾರೆ. ಈ ಹೇಳಿಕೆಯು ಮಹಿಳಾ ಸಮಾಜಕ್ಕೆ ಅವಮಾನ ಮತ್ತು ಮುಜುಗರ ತರುವಂಥ ಹೇಳಿಕೆಯಾಗಿರುತ್ತದೆ. ಸರ್ಕಾರವು ನೀಡುತ್ತಿರುವ ಯೋಜನೆಗಳಿಂದ ಮಹಿಳೆಯರ ಜೀವನವು ಹಸನಾಗಿದೆ. ಭೀಕರ ಬರಗಾಲದ ಈ ಸಂದರ್ಭದಲ್ಲಿ ರಾಜ್ಯದ ಜನತೆ ಸರ್ಕಾರದ ಯೋಜನೆಗಳಿಂದ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇದನ್ನು ಅರಿಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ತಮ್ಮ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಕೂಡಲೇ ಕುಮಾರಸ್ವಾಮಿ ಹಾಗೂ ಶೃತಿ ರಾಜ್ಯದ ಮಹಿಳೆಯರಲ್ಲಿ ಕ್ಷಮೆ ಕೇಳಬೇಕು. ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿದ ಇವರಿಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ರುಕ್ಮಿಣಿ ಸಾವಕಾರ, ರತ್ನಾ ಪುನೀತ, ಜಯಶ್ರೀ ಪಿಸೆ, ಶಿರಿನ್ ತಾಜಶೇಖ, ರವೀಂದ್ರಗೌಡ ಪಾಟೀಲ, ಚಂದ್ರಕಲಾ ಬಿಷ್ಟಣ್ಣನವರ, ಭವಾನಿ, ಸುಜಾತಾ, ಶಕುಂತಲ, ನೇತ್ರಾವತಿ, ಮಂಗಳಾ, ಶ್ರೀನಿವಾಸ ಹಳ್ಳಳ್ಳಿ, ಫಾತಿಮಾ ಹಿಂದುಪುರ ಮತ್ತಿತರರು ಪಾಲ್ಗೊಂಡಿದ್ದರು.