ಆಡಳಿತ ಸುಧಾರಣಾ ಆಯೋಗಕ್ಕೆ ದೇಶಪಾಂಡೆ ಅಧ್ಯಕ್ಷ

| Published : Dec 30 2023, 01:15 AM IST

ಸಾರಾಂಶ

ಸಿದ್ಧರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ನಡುವಣ ಶೀತಲ ಸಮರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹುದ್ದೆ ಆರ್.ವಿ. ದೇಶಪಾಂಡೆ ಅವರ ಕೈತಪ್ಪಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಈ ವರೆಗೂ ದೇಶಪಾಂಡೆ ಅವರ ಕ್ಷೇತ್ರಕ್ಕೆ ಭೇಟಿಯನ್ನೇ ನೀಡಿಲ್ಲ.

ಕಾರವಾರ:

ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಅನುಭವ, ಹಿರಿತನ, ಜಾಣ್ಮೆ ಎಲ್ಲವೂ ಇದ್ದುಕೊಂಡು ಸಚಿವ ಸ್ಥಾನದಿಂದ ವಂಚಿತರಾಗಿದ್ದ ಹಳಿಯಾಳ ಶಾಸಕ, ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅವರನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿ, ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ.

ಸಿದ್ಧರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ನಡುವಣ ಶೀತಲ ಸಮರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹುದ್ದೆ ಆರ್.ವಿ. ದೇಶಪಾಂಡೆ ಅವರ ಕೈತಪ್ಪಿತ್ತು. ಆದರೆ ಅವರು ಬಹಿರಂಗವಾಗಿ ಏನನ್ನೂ ಹೇಳದೆ ಇದ್ದರೂ ಸಂಪುಟದಲ್ಲಿ ಸ್ಥಾನ ನೀಡುವಾಗ ದೇಶಪಾಂಡೆ ಅವರ ಅರ್ಹತೆ, ಹಿರಿತನ, ಅನುಭವವನ್ನು ಕಡೆಗಣಿಸಿದ ಬಗ್ಗೆ ಅವರ ಬೆಂಬಲಿಗರಲ್ಲಿ ಅಸಮಾಧಾನ ಇತ್ತು. ಯಾವ ಕಾರಣವೋ ಗೊತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಈ ವರೆಗೂ ದೇಶಪಾಂಡೆ ಅವರ ಕ್ಷೇತ್ರಕ್ಕೆ ಭೇಟಿಯನ್ನೇ ನೀಡಿಲ್ಲ. ಈಗ ದೇಶಪಾಂಡೆ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ಲಭಿಸಿರುವುದರಿಂದ ದೇಶಪಾಂಡೆ ಅವರ ಹಿರಿತನಕ್ಕೆ ಗೌರವದ ಸ್ಥಾನ ಲಭಿಸಿದಂತಾಗಿದೆ.

ದೇಶಪಾಂಡೆ ಈಗ ರಾಜ್ಯಾದ್ಯಂತ ಸಂಚರಿಸಿ ಆಡಳಿತ ಸುಧಾರಣೆಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವ ಮಹತ್ವದ ಹುದ್ದೆ ಲಭ್ಯವಾಗಿದೆ. ಸರ್ಕಾರದಲ್ಲಿ ಯಾವುದೇ ಜವಾಬ್ದಾರಿ ಕೊಡಿ ಎಂದು ನಾನು ಕೇಳಿರಲಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನನಗೆ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದಾರೆ. ಆಡಳಿತದಲ್ಲಿ ಸುಧಾರಣೆ ಆಗುತ್ತಿದೆ. ಆದರೂ ಇನ್ನೂ ಹೆಚ್ಚು ಜನಸ್ನೇಹಿ, ಪಾರದರ್ಶಕವಾಗಿ ನಡೆಯಲು ಯಾವ ರೀತಿ ಮಾಡಬಹುದು ಎಂದು ಪರಿಶೀಲಿಸಿ ಮುಂದಡಿ ಇಡುತ್ತೇನೆ ಎಂದು ದೇಶಪಾಂಡೆ ತಿಳಿಸಿದ್ದಾರೆ.