ಭತ್ತದ ತಳಿಗಳ ಸಂರಕ್ಷಣೆ ಹಾಗೂ ಉತ್ತೇಜನ ಮತ್ತು ರೈತರೊಂದಿಗೆ ಸಂವಾದ
ಕನ್ನಡಪ್ರಭ ವಾರ್ತೆ ಮೂಡಿಗೆರೆಸಾವಯವ ಕೃಷಿಯಲ್ಲಿ ರೈತರು ತೊಡಗುವುದರಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎ.ಟಿ.ಕೃಷ್ಣ ಮೂರ್ತಿ ಹೇಳಿದರು.
ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಇಲಾಖೆಯಿಂದ ನಡೆದ ದೇಶಿ ಭತ್ತದ ತಳಿಗಳ ಸಂರಕ್ಷಣೆ ಹಾಗೂ ಉತ್ತೇಜನ ಮತ್ತು ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ಥಳೀಯ ಭೂ ಪ್ರದೇಶಕ್ಕೆ ಮತ್ತು ಸ್ಥಳೀಯ ರೈತರಿಗೆ ವರದಾನ ವಾಗುವ ರೀತಿ ಭತ್ತದ ತಳಿಯನ್ನು ಆಯ್ಕೆ ಮಾಡಿ ತಮ್ಮ ಜಮೀನಿನಲ್ಲಿ ಬೆಳೆಯಲು ಮಲೆನಾಡಿನ ರೈತರು ಸಮರ್ಥರಿದ್ದಾರೆ.ಪ್ರತಿಯೊಬ್ಬ ರೈತ ಕುಟುಂಬದವರು ಆಹಾರ ಪದಾರ್ಥಕ್ಕೆ ಮತ್ತು ಭತ್ತವನ್ನು ತಮ್ಮ ಜಮೀನಿನಲ್ಲಿ ಬೆಳೆಯಬೇಕು. ಹಾಗಾದರೆ ಮಾತ್ರ ಆಹಾರ ಪದಾರ್ಥಕ್ಕೆ ತೊಂದರೆ ಉಂಟಾಗಲಾರದು ಎಂದು ತಿಳಿಸಿದರು.
ಪ್ರಗತಿಪರ ಕೃಷಿಕ ಶ್ರೀವತ್ಸ ಮಾತನಾಡಿ, ದೇಸಿ ಭತ್ತದ ತಳಿಗಳು ಮಲೆನಾಡಿನ ಭೂ ಪ್ರದೇಶಕ್ಕೆ ಸೂಕ್ತವಾಗುತ್ತದೆ. ರೈತರು ದೇಶಿ ಭತ್ತದ ತಳಿಯನ್ನು ಬಿತ್ತನೆ ಮಾಡುವ ಮೂಲಕ ಹೆಚ್ಚಿನ ಇಳುವರಿ ಪಡೆದು ಲಾಭಗಳಿಸಲು ಅವಕಾಶವಿದೆ.
ದೇಶೀ ಭತ್ತದ ತಳಿಗಳು ರೋಗ ನಿರೋಧಕ ಶಕ್ತಿ ಹೊಂದಿರುವುದಲ್ಲದೆ ಸ್ಥಳೀಯ ಭೂ ಪ್ರದೇಶಕ್ಕೆಹೊಂದಾಣಿಕೆಯಾಗುತ್ತದೆ. ಪ್ರದೇಶಕ್ಕೆ ಸೂಕ್ತ ದೇಶಿ ತಳಿಗಳನ್ನು ಗುರುತಿಸಿ ಸಂರಕ್ಷಸಿ ಅಭಿವೃದ್ಧಿ ಪಡಿಸಬೇಕಿದೆ ಎಂದರು.
ಸ್ಥಳೀಯ ಭತ್ತದ ಬೆಳೆಗಾರ ಅರುಣ್ ಕುಮಾರ್ ಮಾತನಾಡಿ, ಬತ್ತದ ಬೆಳೆ ಹಾಗೂ ತಳಿಗಳಲ್ಲಿ ಈಗ ಸಾಕಷ್ಟು ಬದಲಾವಣೆ ಗಳಾಗಿದೆ. ಸಾವಯುವ ಕೃಷಿ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಕೃಷಿ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರ ಕಾಲಕಾಲಕ್ಕೆ ಮಾಡುತ್ತಿದೆ. ಭತ್ತದ ಗದ್ದೆಯಲ್ಲಿ ಕಳೆ ತೆಗೆಯಲು ಕಾರ್ಮಿಕರ ಸಮಸ್ಯೆಯಿಂದಾಗಿ ಈಗ ಮಾರುಕಟ್ಟೆಗೆ ಕಳೆನಾಶಕಗಳು ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.ತಾಲೂಕು ರೈತ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪರ‍್ಣೇಶ್, ಕೃಷಿಇಲಾಖೆ ಜಿಲ್ಲಾ ಉಪನಿರ್ದೇಶಕಿ ಕುಮುದಾ, ಸಹಾಯಕ ಕೃಷಿ ನಿರ್ದೇಶಕಿ ಸುಮಾ, ಕೃಷಿ ಅಧಿಕಾರಿ ಗೀತಾ, ತಾಂತ್ರಿಕ ವ್ಯವಸ್ಥಾಪಕಿ ರಶ್ಮಿ, ಅನನ್ಯ ಇದ್ದರು.---ಪೋಟೋ--
ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ದೇಶಿ ಭತ್ತದ ತಳಿ ಕಾರ್ಯಾಗಾರದಲ್ಲಿ ಕೃಷಿ ವಿಜ್ಞಾನಿಗಳು ಮತ್ತು ಅಧಿಕಾರಿಗಳು ರೈತರೊಂದಿಗೆ ಸಂವಾದ ನಡೆಸಿದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎ.ಟಿ.ಕೃಷ್ಣಮೂರ್ತಿ, ಜಿಲ್ಲಾ ಉಪ ನಿರ್ದೇಶಕಿ ಕುಮುದಾ, ಸಹಾಯಕ ಕೃಷಿ ನಿರ್ದೇಶಕಿ ಸುಮಾ, ಕೃಷಿ ಅಧಿಕಾರಿ ಗೀತಾ ಇದ್ದರು.