- ಶೃಂಗೇರಿ ರೈತ ಒಕ್ಕೂಟದ ಅಧ್ಯಕ್ಷ ವಿಶ್ವನಾಥ್ ಭೇಟಿ । ಸಮಸ್ಯೆ ಆಲಿಸಲು ಡಿಸಿ ಸ್ಥಳಕ್ಕೆ ಬರಬೇಕು: ಆಗ್ರಹ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಭೂಮಿಗಾಗಿ ಆಹೋರಾತ್ರಿ ಧರಣಿ ಮೂಲಕ ನಮ್ಮ ಹೋರಾಟ ಇಂದು ಐದನೇ ದಿನಕ್ಕೆ ಕಾಲಿಟ್ಟಿದ್ದರೂ ದಲಿತರ ಕೂಗು ಕೇಳುವವರಿಲ್ಲ ಎಂದು ಪ್ರೊ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ತರೀಕೆರೆ ಎನ್. ವೆಂಕಟೇಶ್ ಹೇಳಿದರು.
ಶುಕ್ರವಾರ ತಾಲೂಕು ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ನಿರತರನ್ನುದ್ದೇಶಿಸಿ ಮಾತನಾಡಿ, ಜಿಲ್ಲಾಧಿಕಾರಿ, ಶಾಸಕರು, ಉಸ್ತುವಾರಿ ಸಚಿವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಬೇಕು. ದಲಿತರ ಸಮಸ್ಯೆಗಳನ್ನು ಆಲಿಸಿ ಅವರಿಗೆ ಭೂಮಿ ಕೊಡಬೇಕಾ, ಇಲ್ಲವೇ ವಿಷ ಕೊಡಬೇಕಾ ಎಂದು ತೀರ್ಮಾನಿಸಲಿ. ತಾಲೂಕಿನ ರಾವೂರು, ಶಿರಗಳಲೆ, ನಾಗಲಾ ಪುರ ಗ್ರಾಮಗಳಲ್ಲಿ ದಲಿತರ ಅಭಿವೃದ್ಧಿಗಾಗಿ ಮಂಜೂರಾಗಿದ್ದ ಜಾಗ ನೀಡದೇ ಹೋದರೆ ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ಉಗ್ರವಾಗಿರುತ್ತದೆ ಎಂದು ಎಚ್ಚರಿಕೆ ನೀಡಿದರು. ರಾಜ್ಯ ಸಮಿತಿ ಸದಸ್ಯ ಎಸ್.ರಾಜೇಶ್ ಮಾತನಾಡಿ ಜಿಲ್ಲಾ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕು. ಇಲ್ಲದಿದ್ದರೆ ಬೇರೆ ರೀತಿಯಲ್ಲಿ ಹೋರಾಟ ಮಾಡುತ್ತೇವೆ. ಭೂಮಿ ಕೊಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದರು. ರಾಜ್ಯ ಸಮಿತಿ ಸದಸ್ಯ ಕಡೂರಿನ ಟಿ.ಮಂಜಪ್ಪ ಮಾತನಾಡಿ, ಕಳೆದ 20 ವರ್ಷಗಳಿಂದ ಭೂಮಿಗಾಗಿ ಹೋರಾಟ ನಡೆ ಯುತ್ತಿದೆ. ಅಂದಿನ ಜಿಲ್ಲಾಧಿಕಾರಿ ಅಳತೆ ಮಾಡಿಸಿ ದಲಿತರಿಗೆ ಭೂಮಿ ನೀಡುವ ನಕಾಶೆ ತಯಾರಿಸಲು ತಿಳಿಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ದಲಿತರಿಗೆ ಮೀಸಲಿಟ್ಟ ಜಮೀನು ನೀಡದೆ ಅಧಿಕಾರಿಗಳು ವಂಚನೆ ಮಾಡು ತ್ತಿದ್ದಾರೆ. ಆದ್ದರಿಂದ ಭೂಮಿ ಸಿಗುವವರೆಗೂ ಚಳುವಳಿ ಮುಂದುವರಿಸುತ್ತೇವೆ ಎಂದರು. ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿಯಾದ ಎಂ.ವಿ.ಭವಾನಿ,ಬೆಳಗಾವಿ ಜಿಲ್ಲಾ ಸಂಚಾಲಕ ಗೋವಿಂದ ಸಣ್ಣಕ್ಕಿ ಮಾತನಾಡಿದರು.ಗದ್ದೇಮನೆ ವಿಶ್ವನಾಥ್ ಭೇಟಿ: ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷ ಗದ್ದೇಮನೆವಿಶ್ವನಾಥ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಹೋರಾಟಕ್ಕೆ ನಮ್ಮ ಬೆಂಬಲವಿದೆ. ನಿಮ್ಮ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಡಲು ಚರ್ಚಿಸುತ್ತೇನೆ. ಜಾಗಕ್ಕೆ ಸಂಬಂಧಪಟ್ಟ ದಾಖಲೆ ನೀಡಬೇಕು. ತಮ್ಮ ಒಕ್ಕೂಟದಿಂದ ಎಲ್ಲಾ ರೀತಿಯ ಸಹಕಾರ ನೀಡುತೇವೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಗೌರವಾಧ್ಯಕ್ಷ ರಾಮಸ್ವಾಮಿ ಶೆಟ್ಟಿಗದ್ದೆ, ಕಾರ್ಯಾಧ್ಯಕ್ಷ ಎಂ.ಎನ್.ನಾಗೇಶ್, ಪದಾಧಿಕಾರಿ ಅಜಿತ್, ಡಿಎಸ್‌ಎಸ್ ಮುಖಂಡರಾದ ಎಂ.ಜೆ.ಸಿಜು,ಅಬ್ದುಲ್‌ರೆಹಮಾನ್, ಗೋವಿಂದ, ರವಿ,ರಾಜು, ಗೋಪಾಲ,ತಿಮ್ಮಯ್ಯ, ಮಂಜುನಾಥ್, ಜಯಕುಮಾರ ಮತ್ತಿತರರು ಉಪಸ್ಥಿತರಿದ್ದರು.