ಸಾರಾಂಶ
ಕನ್ನಡಪ್ರಭ ವಾರ್ತೆ ಹಾನಗಲ್ಲ
ಲೋಕಸಭೆ ಚುನಾವಣೆಯಲ್ಲಿ ಸೋತಿರಬಹುದು. ಆದರೆ, ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ ಗೆದ್ದಿದ್ದೇನೆ. ಚುನಾವಣೆಯಲ್ಲಿ ಜಿದ್ದಿನಿಂದ ದುಡಿದವರೆಲ್ಲರಿಗೆ ಋಣಿಯಾಗಿದ್ದೇನೆ, ಸೋಲನ್ನು ಒಪ್ಪಿದ್ದೇನೆ. ರಾಜಕೀಯದಿಂದ ಹಿಂದೆ ಸರಿಯದೇ ಇಡೀ ಕ್ಷೇತ್ರದಲ್ಲಿ ನಿಮ್ಮೊಂದಿಗಿರುತ್ತೇನೆ ಎಂದು ಹಾವೇರಿ, ಗದಗ ಲೋಕಸಭಾ ಚುನಾವಣೆಯ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.ಹಾನಗಲ್ಲಿನಲ್ಲಿ ಶಾಸಕ ಶ್ರೀನಿವಾಸ ಮಾನೆ ಅವರ ಜನಸಂಪರ್ಕ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಆತ್ಮಾವಲೋಕನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸೋಲಿಗೆ ಯಾರ ಮೇಲೂ ಕೂಡ ಅಪವಾದ ಹೊರಿಸಲಾರೆ, ಯಾವುದೇ ಕಾರಣಕ್ಕೂ ಕುಗ್ಗಲಾರೆ. ಕೊನೆ ಉಸಿರು ಇರುವವರೆಗೂ ಜನರೊಂದಿಗಿನ ಸಂಬಂಧ ಉಳಿಸಿಕೊಳ್ಳುವೆ. ಸೋಲಿನಲ್ಲಿಯೂ ಗೆಲುವು ಕಂಡಿದ್ದೇನೆ. ೬ ಲಕ್ಷ ೬೫ ಸಾವಿರ ಮತದಾರರು ಮತ ನೀಡಿ ಆಶೀರ್ವದಿಸಿದ್ದಾರೆ. ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ, ಸಂಬಂಧ ಶಾಶ್ವತವಾಗಿರಲಿದೆ. ರಾಜಕಾರಣದಲ್ಲಿ ಹೊಸತನ್ನು ತರುವ ಪ್ರಯತ್ನ ಹೀಗೆಯೇ ಮುಂದುವರಿಯಲಿದೆ. ಚುನಾವಣೆಯಲ್ಲಿ ಗೆದ್ದವರಿಗೂ ಕೂಡ ಒಪ್ಪಿಕೊಳ್ಳುವಂಥ ಜನಾದೇಶ ಸಿಕ್ಕಿಲ್ಲ. ನಾನು ಚುನಾವಣೆಯಲ್ಲಿ ಸೋತಾಗಲೂ ಜೊತೆಗೆ ನಿಂತು ಧೈರ್ಯ ಹೇಳುತ್ತಿರುವ ಪ್ರತಿಯೊಬ್ಬ ಕಾರ್ಯಕರ್ತ ಮತದಾರರಿಗೆ ಕೃತಜ್ಞತೆ ಸಲ್ಲಿಸುವೆ ಎಂದರು.ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಸೋಲಿನ ಹಿಂದಿರುವ ತಪ್ಪು ಹುಡುಕಿ ತಿದ್ದಿಕೊಳ್ಳೋಣ. ಕಾರಣ ತಿಳಿದು ಸ್ಥಳೀಯವಾಗಿ ಸರಿಪಡಿಸಿಕೊಳ್ಳೋಣ. ಎದೆಗೆ ಎದೆಯೊಡ್ಡಿ ನಿಲ್ಲುವ ಗಟ್ಟಿ ಮನಸ್ಥಿತಿಯ ಕಾರ್ಯಕರ್ತರು ಇರುವ ಹಾನಗಲ್ಲ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿ ಎಂದಿಗೂ ಕುಗ್ಗಲಾರದು. ನಿರೀಕ್ಷೆ ಹೆಚ್ಚಿದಷ್ಟು ಅಸಮಾಧಾನ ಸಹಜ. ಏನೇ ಅಭಿಪ್ರಾಯ ಬೇಧಗಳಿದ್ದರೂ ನೇರವಾಗಿ ಮಾತನಾಡಿ ಹಂಚಿಕೊಳ್ಳಿ. ನಾನೂ ಕೂಡ ಮನುಷ್ಯ. ಎಡವುದು ಮನುಷ್ಯನ ಸಹಜ ಸ್ವಭಾವ. ನಾನು ಇರುವುದೇ ನಿಮ್ಮ ಸೇವೆಗಾಗಿ. ಯಾವುದೇ ಸಂದರ್ಭದಲ್ಲಿಯೂ ಜನರ ಭಾವನೆಗೆ ಧಕ್ಕೆ ತರುವುದಿಲ್ಲ, ಜನಾಭಿಪ್ರಾಯಕ್ಕೆ ವಿರುದ್ಧವಾಗಿ ಹೆಜ್ಜೆ ಹಾಕುವುದಿಲ್ಲ. ತಾಲೂಕಿನಲ್ಲಿ ಆಗಿರುವ ತಾತ್ಕಾಲಿಕ ಹಿನ್ನಡೆಗೆ ಯಾರೂ ಹಿಂಜರಿಯುವ ಅಗತ್ಯವಿಲ್ಲ. ಶೀಘ್ರದಲ್ಲಿ ಕಾರ್ಯಕರ್ತರ ಕೈಗೆ ಅಧಿಕಾರ ನೀಡುವ ಜಿಪಂ ಹಾಗೂ ತಾಪಂ ಚುನಾವಣೆ ಬರಲಿದ್ದು, ಅಲ್ಲಿ ನಮ್ಮ ಶಕ್ತಿ, ಸಾಮರ್ಥ್ಯ ನಿರೂಪಿಸೋಣ. ಬೂತ್ ಕಮಿಟಿಗಳನ್ನು ಪುನಾರಚಿಸೋಣ, ಅನುಭವಿಗಳ ಸೇವೆ ಪಕ್ಷಕ್ಕೆ ಬಳಕೆ ಮಾಡಿಕೊಳ್ಳೋಣ ಎಂದು ಹೇಳಿದ ಅವರು ಈ ವರ್ಷ ತಾಲೂಕಿಗೆ ₹೫೦ ಕೋಟಿ ಅನುದಾನ ಲಭಿಸಿದ್ದು, ಮತ್ತೆ ೩-೪ ತಿಂಗಳ ಅವಧಿಯಲ್ಲಿ ಇನ್ನಷ್ಟು ಅನುದಾನ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಪಕ್ಷ ಉತ್ತಮ ಅಭ್ಯರ್ಥಿ ಕಣಕ್ಕಿಳಿಸಿತ್ತು. ಉತ್ತಮ ನಾಯಕತ್ವದ ಗುಣದ ಆನಂದಸ್ವಾಮಿ ಗಡ್ಡದೇವರಮಠ ಅವರ ಸೋಲು ಸಹಜವಾಗಿ ಎಲ್ಲರಿಗೂ ನೋವು ತಂದಿದೆ. ಮತದಾರರೂ ಬೇಸರ ಮಾಡಿಕೊಂಡಿದ್ದಾರೆ. ಈ ಸೋಲಿಗೆ ಧೃತಿಗೆಡುವ ಅಗತ್ಯವಿಲ್ಲ. ಶ್ರೀನಿವಾಸ ಮಾನೆ ಅವರ ಸಮರ್ಥ ನಾಯಕತ್ವದಲ್ಲಿ ಹಾನಗಲ್ಲಿನಲ್ಲಿ ಪಕ್ಷ ಸದೃಢವಾಗಿದೆ. ಪಕ್ಷಕ್ಕೆ ಮಾಡಿದ ದ್ರೋಹ ಹೆತ್ತ ತಾಯಿಗೆ ದ್ರೋಹ ಮಾಡಿದಂತೆ. ಪಕ್ಷದಲ್ಲಿದ್ದು ಬೇರೆಯವರಿಗೆ ಸಹಾಯ ಮಾಡಿದವರು ಆತ್ಮಾವಲೋಕನ ಮಾಡಿಕೊಂಡು ಪಕ್ಷ ತೊರೆಯಲಿ. ಸೋತಲ್ಲಿಯೇ ಗೆದ್ದು ನಿಲ್ಲುವ ತಾಕತ್ತು ಕಾಂಗ್ರೆಸ್ ಪಕ್ಷಕ್ಕಿದೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಜಯಕುಮಾರ ದೊಡ್ಡಮನಿ, ಮಂಜು ಗೊರಣ್ಣನವರ, ಕೆಪಿಸಿಸಿ ಸದಸ್ಯರಾದ ಟಾಕನಗೌಡ ಪಾಟೀಲ, ಖ್ವಾಜಾಮೊಹಿದ್ದೀನ್ ಜಮಾದಾರ ಸೇರಿದಂತೆ ಹಲವರು ಇದ್ದರು.
ನೋವು ತಂದಿದೆಹಾನಗಲ್ಲ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಗಟ್ಟಿ ಮನಸ್ಥಿತಿಯವರು. ಒಳ್ಳೆಯ ಅಭ್ಯರ್ಥಿಯಾಗಿದ್ದ ಆನಂದಸ್ವಾಮಿ ಗಡ್ಡದೇವರಮಠ ಅವರ ಸೋಲು ಪ್ರತಿಯೊಬ್ಬರಿಗೂ ನೋವು ತಂದಿದೆ. ಪಕ್ಷಕ್ಕೆ ಹಾನಗಲ್ಲಿನಲ್ಲಿ ಗಟ್ಟಿ ನೆಲೆ ಇದೆ. ಕಾರ್ಯಕರ್ತರಲ್ಲಿ ಛಲ ಇದೆ. ಜಿಪಂ, ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಶಕ್ತಿ ನಿರೂಪಿಸೋಣ.
ಶ್ರೀನಿವಾಸ ಮಾನೆ, ಶಾಸಕ