ಸಾರಾಂಶ
ಕೆ.ಎಂ. ಮಂಜುನಾಥ್
ಬಳ್ಳಾರಿ: ಬಳ್ಳಾರಿ ರಾಜಕೀಯ ಇತಿಹಾಸದತ್ತ ಕಣ್ಣರಳಿಸಿ ನೋಡಿದಾಗ ಹೆಚ್ಚು ಗಮನ ಸೆಳೆವ ಹೆಸರು ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ. ರಾಜಕೀಯವಾಗಿ ತಮ್ಮದೇ ಆದ ಸೈದ್ಧಾಂತಿಕ ನಿಲುವಿನಿಂದಾಗಿ ಕಾಂಗ್ರೆಸ್ಸೇತರ ಧೋರಣೆ ಹೊಂದಿದ್ದ ವೈ.ಮಹಾಬಲೇಶ್ವರಪ್ಪ ಲೋಕಸಭಾ ಚುನಾವಣೆಯಲ್ಲಿ ನಾಲ್ಕು ಬಾರಿ ಸ್ಪರ್ಧಿಸಿದರೂ ಗೆಲುವು ದಾಖಲಿಸುವುದಿಲ್ಲ. ಆದರೆ, ನಾಲ್ಕು ಚುನಾವಣೆಯಲ್ಲೂ ಕಾಂಗ್ರೆಸ್ ಗೆ ಸಡ್ಡು ಹೊಡೆದು ನಿಲ್ಲುತ್ತಾರೆ. ಕಾಂಗ್ರೆಸ್ ಅಭ್ಯರ್ಥಿ ಭಾರಿ ಅಂತರದ ಗೆಲುವು ಸಾಧಿಸದಂತೆ ತೀವ್ರ ಪೈಪೋಟಿವೊಡ್ಡುತ್ತಾರೆ. ಜನಮುಖಿ ಸೇವಾ ಕೈಂಕರ್ಯಗಳಿಂದ ಜಿಲ್ಲೆಯ ಜನಮಾನಸದಲ್ಲಿ ನೆಲೆಯೂರಿದ್ದಾರೆ.ಅದು 1952ರ ಲೋಕಸಭಾ ಚುನಾವಣೆಯ ಸಂದರ್ಭ. ಸ್ವಾತಂತ್ರ್ಯ ಬಂದ ಬಳಿಕ ನಡೆದ ಮೊದಲ ಚುನಾವಣೆಯದು. ಕಾಂಗ್ರೆಸ್ ನಿಂದ ಯಾರೇ ಸ್ಪರ್ಧಿಸಿದರೂ ಗೆಲುವು ಖಚಿತ ಎಂಬಂತಿತ್ತು. ಕಾಂಗ್ರೆಸ್ ನ ಏಕಸ್ವಾಮ್ಯ ನಿಲುವು ವಿರೋಧಿಸುತ್ತಲೇ ಬಂದಿದ್ದ ವೈ.ಮಹಾಬಲೇಶ್ವರಪ್ಪ ಸ್ವಾತಂತ್ರ್ಯ ನಂತರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದು ಇಡೀ ಜಿಲ್ಲೆಯ ಗಮನ ಸೆಳೆಯುತ್ತಾರೆ.
ನಿಲ್ಲದ ಹೋರಾಟ:1952ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ವೈ.ಮಹಾಬಲೇಶ್ವರಪ್ಪ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟೇಕೂರು ಸುಬ್ರಮಣ್ಯಂ ವಿರುದ್ಧ 30,361 ಮತಗಳ ಅಂತರದಲ್ಲಿ ಪರಾಭವಗೊಳ್ಳುತ್ತಾರೆ. ಟೇಕೂರ್ 1,24,976 ಮತಗಳನ್ನು ಪಡೆದರೆ, ವೈ.ಮಹಾಬಲೇಶ್ವರಪ್ಪ 94,615 ಮತಗಳನ್ನು ಪಡೆದು ಗಮನ ಸೆಳೆಯುತ್ತಾರೆ.
1957ರ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಮತ್ತೆ ಸ್ಪರ್ಧೆಗಿಳಿಯುವ ವೈ.ಮಹಾಬಲೇಶ್ವರಪ್ಪ 26,288 ಮತಗಳ ಅಂತರದ ಸೋಲನುಭವಿಸುತ್ತಾರೆ. 1962ರ ಚುನಾವಣೆಯಲ್ಲಿ ಹಿಂದೆ ಸರಿಯುವ ವೈ.ಮಹಾಬಲೇಶ್ವರಪ್ಪ 1967ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ವಿಕೆಆರ್‌ವಿ ರಾವ್ ವಿರುದ್ಧ ಸ್ವತಂತ್ರ ಪಕ್ಷದ ಅಭ್ಯರ್ಥಿಯಾಗಿ ಅಖಾಡಕ್ಕಿಳಿದು 24,380 ಮತಗಳ ಅಂತರದಲ್ಲಿ ಸೋಲುತ್ತಾರೆ.ಮೂರು ಬಾರಿ ಸೋಲುಂಡರೂ ಎದೆಗುಂದದೇ 1971ರ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿ, ವಿಕೆಆರ್‌ವಿ ರಾವ್ ವಿರುದ್ಧ ಮತ್ತೆ ಸೋಲುತ್ತಾರೆ. ಇದಾದ ಬಳಿಕ ಚುನಾವಣೆಯಿಂದ ದೂರ ಸರಿಯುತ್ತಾರೆ.
ಕಾಂಗ್ರೆಸ್ ಬಗ್ಗೆ ಗೌರವ:ವೈ.ಮಹಾಬಲೇಶ್ವರಪ್ಪ ಕಾಂಗ್ರೆಸ್ ಪಕ್ಷ ವಿರೋಧಿಸುತ್ತಿದ್ದರು. ಆದರೆ, ಕಾಂಗ್ರೆಸ್ ನಾಯಕರ ಬಗ್ಗೆ ಅಪಾರ ಗೌರವವಿತ್ತು. ಮಹಾತ್ಮ ಗಾಂಧೀಜಿಯವರು 1934ರಲ್ಲಿ ಬಳ್ಳಾರಿಗೆ ಬಂದಾಗ ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿದ್ದ ವೈ.ಮಹಾಬಲೇಶ್ವರಪ್ಪ ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡಿದ್ದರು. ಬಾಬು ರಾಜೇಂದ್ರ ಪ್ರಸಾದ್ ಬಳ್ಳಾರಿಗೆ ಬಂದಾಗಲೂ ವೈ.ಮಹಾಬಲೇಶ್ವರಪ್ಪ ತಮ್ಮ ಕಾರ್‌ನಲ್ಲಿಯೇ ಕರೆದುಕೊಂಡು ಬಂದರು. ಈ ಮಹತ್ವದ ಘಟನೆ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿಯೇ ಸ್ಮರಣೀಯವಾದದ್ದು ಎನ್ನುತ್ತಾರೆ ಹಿರಿಯ ಲೇಖಕ ಮೃತ್ಯುಂಜಯ ರುಮಾಲೆ.
ಶಿಸ್ತಿನ ವ್ಯಕ್ತಿಯಾಗಿದ್ದ ವೈ.ಮಹಾಬಲೇಶ್ವರಪ್ಪ ಏಕಸ್ವಾಮ್ಯ ನಿಲುವಿನ ಕಾಂಗ್ರೆಸ್‌ನ್ನು ವಿರೋಧಿಸುತ್ತಿದ್ದರು. ಪ್ರತಿಯೊಬ್ಬರಿಗೂ ಪ್ರಶ್ನಿಸುವ ಅಧಿಕಾರ ಇರಬೇಕು ಎನ್ನುತ್ತಿದ್ದರು. ಕಾಂಗ್ರೆಸ್ ನಿಲುವು ಅವರಿಗೆ ಇಷ್ಟವಾಗಲಿಲ್ಲ. ಈ ಕಾರಣಕ್ಕಾಗಿಯೇ ಅವರು ಸ್ವತಂತ್ರ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲುತ್ತಾರೆ. ಚುನಾವಣೆಯಲ್ಲಿ ಸೋಲುಂಡರೂ ಜಿಲ್ಲೆಯ ಜನರು ಅವರನ್ನು ಅತ್ಯಂತ ಅಭಿಮಾನದಿಂದ ಧಣಿ ಎಂದೇ ಸಂಬೋಧಿಸುತ್ತಿದ್ದರು. ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಯಾರೂ ಮರೆಯುವಂತಿಲ್ಲ. ಶೈಕ್ಷಣಿಕವಾಗಿ ಜಿಲ್ಲೆಗೆ ನೀಡಿದ ಕೊಡುಗೆಯನ್ನು ಯಾರೂ ಮರೆಯುವಂತಿಲ್ಲ ಎನ್ನುತ್ತಾರೆ ಲೇಖಕ ರುಮಾಲೆ.ದೊಡ್ಡ ಜಮೀನ್ದಾರ:
ಬಳ್ಳಾರಿಯ ಪ್ರಮುಖ ವ್ಯಾಪಾರಿ, ಗಣಿಮಾಲೀಕ ಮತ್ತು ಜಮೀನ್ದಾರರಾಗಿದ್ದ ವೈ.ಮಹಾಬಲೇಶ್ವರಪ್ಪ 12 ವರ್ಷಗಳ ಕಾಲ ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾರೆ. 15 ವರ್ಷ ಕರ್ನಾಟಕ ವಾಣಿಜ್ಯ ಸಂಘದ ಅಧ್ಯಕ್ಷರಾಗುತ್ತಾರೆ. ಮೂರು ಬಾರಿ ಮದ್ರಾಸ್ ಸೆನೆಟ್ ಸದಸ್ಯರಾಗುತ್ತಾರೆ. ಮದ್ರಾಸ್ ವಿಧಾನಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸುತ್ತಾರೆ. ಮದ್ರಾಸ್ ಆರ್ಥಿಕ ಅಭಿವೃದ್ಧಿ ಸಮಿತಿ ಸದಸ್ಯರಾಗಿ, ಕರ್ನಾಟಕ ವಿವಿ ಸೆನೆಟ್ ಸದಸ್ಯರಾಗಿ ಅಪಾರ ಕೆಲಸ ಮಾಡುತ್ತಾರೆ. ಬಳ್ಳಾರಿ ವೀವಿ ಸಂಘ ಸ್ಥಾಪನೆಗೆ ಪ್ರಮುಖ ಪಾತ್ರ ವಹಿಸುತ್ತಾರೆ.