ಸಾರಾಂಶ
ಕೆ.ಎಂ.ದೊಡ್ಡಿ : ರಾಜಕೀಯವಾಗಿ ನನಗೆ ಮೂರು ಚುನಾವಣೆಗಳಲ್ಲಿ ಸೋಲಾಗಿರಬಹುದು. ಆದರೆ, ಜನರ ಮನಸ್ಸಿನಲ್ಲಿ ನನಗೆ ಸಿಕ್ಕಿರುವ ಪ್ರೀತಿ, ವಿಶ್ವಾಸವು ಶಾಶ್ವತ ಗೆಲುವು ಕೊಟ್ಟಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಸಿ.ಕೆ.ಕೆರೆ ಹೋಬಳಿ ದೊಡ್ಡರಸಿನಕೆರೆ ಗ್ರಾಮದಲ್ಲಿ ಯುವಕರ ತಂಡ ಆಯೋಜಿಸಿದ್ದ ದೊಡ್ಡರಸಿನಕೆರೆ - ಮುಟ್ಟನಹಳ್ಳಿ ಕ್ರಿಕೆಟ್ ಪ್ರಿಮೀಯರ್ ಲೀಗ್ ಸೀಸನ್ 1 ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
2019ರ ಲೋಕಸಭೆ ಹಾಗೂ ರಾಮನಗರ, ಚನ್ನಪಟ್ಟಣ ವಿಧಾನಸಭಾ ಚುನಾವಣೆಗಳಲ್ಲಿ ನಾನಾ ಕಾರಣಗಳಿಂದ ಸೋತಿರಬಹುದು. ಈ ಸೋಲನ್ನು ಮನಸ್ಸಿಲ್ಲಿ ಇಟ್ಟುಕೊಂಡಿಲ್ಲ. ಸೋಲು ಚುನಾವಣೆಯಲ್ಲಿ ಮಾತ್ರ ಆಗಿದೆ. ಜನರ ಮನಸ್ಸಿನಲ್ಲಿ ಅಲ್ಲ ಎಂದರು.
ನಾನು ಹೋದ ಕಡೆಗಳಲ್ಲಿ ನೀವು ತೋರುತ್ತಿರುವ ಪ್ರೀತಿ, ವಿಶ್ವಾಸ ಮುಂದಿನ ದಿನಗಳಲ್ಲಿ ಉತ್ತಮ ಸಮಾಜ ಕಟ್ಟುವ ಕೆಲಸಕ್ಕೆ ಸ್ಫೂರ್ತಿಯಾಗಿದೆ. ನಿಮ್ಮ ನಿರೀಕ್ಷೆಯೊಂದಿಗೆ ನಾನು ಗೆಲುವು ಕಾಣುತ್ತಿದ್ದೇನೆ ಎಂದು ತಿಳಿಸಿದರು.
ಕ್ರೀಡೆ ಮತ್ತು ಜೀವನದಲ್ಲಿ ಸೋಲು - ಗೆಲುವು ಸಾಮಾನ್ಯ ಹಾಗೂ ಪಾಠವಾಗಿದೆ. ಪ್ರತಿಯೊಂದರಲ್ಲೂ ಸೋಲು - ಗೆಲುವು ಇದ್ದೇ ಇರುತ್ತದೆ. ಅದನ್ನು ಸಮಾನವಾಗಿ ಸ್ವೀಕಾರ ಮಾಡಬೇಕು. ಹೋರಾಟಗಳು, ಸವಾಲುಗಳನ್ನು ಎದುರಿಸಬೇಕು. ಸೋತಿದ್ದೇನೆ ಎಂದು ಕುಗ್ಗುವಂಥ ದೊಡ್ಡ ತಪ್ಪು ಮತ್ತೊಂದು ಇಲ್ಲ ಎಂದರು.
ರಾಜ್ಯದ ಜನತೆ, ಈ ಸಮಾಜ ನಮ್ಮನ್ನು ಗುರುತಿಸಿದೆ. ನಮ್ಮ ತಾತ ದೇವೇಗೌಡರು, ತಂದೆ ಕುಮಾರಣ್ಣ ಸೇರಿದಂತೆ ನಮ್ಮನ್ನು ಬಹು ಎತ್ತರಕ್ಕೆ ಬೆಳೆಸಿದೆ. ಇದಕ್ಕೆ ಋಣಿಯಾಗಿರುತ್ತೇನೆ. ಕ್ರಿಕೆಟ್ ಕ್ರೀಡಾಂಗಣವಾಗಬೇಕು ಎಂದು ಹೇಳಿದ್ದೀರಿ. ಗ್ರಾಮ ಮಾತ್ರವಲ್ಲದೆ , ಜಿಲ್ಲೆ, ತಾಲೂಕಿನಲ್ಲೂ ಕ್ರೀಡಾಂಗಣವಾಗಬೇಕು. ಈ ಬಗ್ಗೆ ಕುಮಾರಣ್ಣರೊಂದಿಗೆ ಚರ್ಚೆಸಲಾಗುವುದು ಎಂದು ಹೇಳಿದರು.
ಧರ್ಮಸ್ಥಳದ ಬಗ್ಗೆ ಅಪಪ್ರಚಾರ ವಿರುದ್ಧ ಹಮ್ಮಿಕೊಂಡಿರುವ ಸತ್ಯಯಾತ್ರೆಯಲ್ಲಿ ರಾಜಕೀಯ ಬಯಸುತ್ತಿಲ್ಲ. ಇದೊಂದು ಪಕ್ಷಾತೀತ ಕಾರ್ಯಕ್ರಮ. 700- 800 ವರ್ಷಗಳ ಇತಿಹಾಸವಿರುವ ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ನೆಲೆಸಿರುವ ಪುಣ್ಯಸ್ಥಳಕ್ಕೆ ಭಕ್ತರು ದೇಶ- ವಿದೇಶಗಳಿಂದಲೂ ಬರುತ್ತಾರೆ. ಆದರೆ, ಕೆಲವೊಂದು ದುಷ್ಟಶಕ್ತಿ, ಸಮಾಜಘಾತುಕ ಶಕ್ತಿಗಳು ಧರ್ಮಸ್ಥಳ ವಿರುದ್ಧ ಸಂಚು ರೂಪಿಸಿ ಗೊಂದಲ ಉಂಟು ಮಾಡಿದ್ದಾರೆ. ಜನರಿಗೆ ಜಾಗೃತಿ ಮೂಡಿಸಲು ಸತ್ಯಯಾತ್ರೆ, ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಡಿ.ಸಿ.ತಮ್ಮಣ್ಣನವರು ಶಾಸಕರಾಗಿ, ಸಚಿವರಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಇಳಿ ವಯಸ್ಸಿನಲ್ಲೂ ಛಲ ಬಿಟ್ಟಿಲ್ಲ. ಅಧಿಕಾರ ದಾಹವಿಲ್ಲ. ಸಮಾಜ ಸೇವೆ ಮೂಲಕ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮೂಲಕ ಗ್ರಾಮಕ್ಕೆ ಮೆರಗು ತಂದಿದ್ದೀರಿ. ಇದು ಉತ್ತಮ ಕೆಲಸ. ತಂದೆ ಮನೆ ಇಲ್ಲದವರಿಗೆ ನಿವೇಶನ 1 ಎಕರೆ ದಾನ ಮಾಡಿದ್ದರು. ನಾನು ಮತ್ತು ನನ್ನ ತಮ್ಮ ಸೇರಿ 4 ಎಕರೆ ನೀಡಿ ಸೂರು ಇಲ್ಲದವರಿಗೆ ಮನೆಗಳನ್ನು ಕಟ್ಟಲು ನೆರವಾಗಿದ್ದೇವು ಎಂದರು.
ತಾತನ ಹೆಸರಿನಲ್ಲಿ ಗೌಡಯ್ಯನದೊಡ್ಡಿ, ತಂದೆ ಹೆಸರಿನಲ್ಲಿ ಮಾದರಹಳ್ಳಿ, ಮುಟ್ಟನಹಳ್ಳಿ, ದೊಡ್ಡರಸಿನಕೆರೆ ಗ್ರಾಮಗಳ ಅಭಿವೃದ್ಧಿಗೆ ಕಿರುಗಾವಲು ಶಾಸಕನಾಗಿದ್ದಾಗ ಸರ್ಕಾರದಿಂದ ಹಣ ತಂದು ನೆರವಾಗಿದ್ದೇನೆ ಎಂದು ತಿಳಿಸಿದರು.
ಪ್ರತಿಯೊಬ್ಬರಿಗೂ ಕ್ರೀಡೆ ಮುಖ್ಯ. ಕ್ರೀಡೆಯಲ್ಲಿ ಸೋಲು- ಗೆಲುವು ಸಮಾನವಾಗಿ ಸ್ವೀಕಾರ ಮಾಡಬೇಕು. ಸೋತರೂ ಮುಂದೆ ಗೆಲ್ಲಬೇಕು ಎಂಬ ಉತ್ಸಾಹ ಬರಬೇಕು. ಯಾವುದೇ ಕಷ್ಟ ಬಂದರೂ ಅದನ್ನು ಜೀವನದಲ್ಲಿ ಸೋಲದೆ ಎದುರಿಸುವಂತೆ ಕರೆ ನೀಡಿದರು.
ಮನ್ಮುಲ್ ಮಾಜಿ ಅಧ್ಯಕ್ಷ ರಾಮಚಂದ್ರು, ಜೆಡಿಎಸ್ ತಾಲೂಕು ಅಧ್ಯಕ್ಷ ಹಾಗಲಹಳ್ಳಿ ಚಿಕ್ಕತಿಮ್ಮೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಚಿಕ್ಕಹುಚ್ಚಪ್ಪ, ಮುಖಂಡರಾದ ಮಾದನಾಯಕನಹಳ್ಳಿ ರಾಜಣ್ಣ, ಕರಡಕೆರೆ ಹನುಮಂತೇಗೌಡ, ಗುರುದೇವರಹಳ್ಳಿ ಅರವಿಂದ್ ,ಕೆ.ಟಿ. ಸುರೇಶ್, ಅಣ್ಣೂರು ವಿನು, ಕಾರಕಹಳ್ಳಿ ಜಗದೀಶ್, ಅಣ್ಣೂರು ಯೋಗೇಂದ್ರ, ಮಹೇಶ್, ಪ್ರದೀಪ್, ಆಯೋಜಕರಾದ ನಂದನ್, ಹರ್ಷಿತ್ ಸೇರಿ ಮತ್ತಿತರರಿದ್ದರು.