ಸಾರಾಂಶ
ಕೊಪ್ಪಳ: ತಂದೆ ಇಲ್ಲದ ತಬ್ಬಲಿ, ತಾಯಿ ಬಿಸಿಯೂಟ ತಯಾರಕರು. ಆಕೆಗೆ ಬರುವ ಪುಡಿಗಾಸು ಮನೆಯನ್ನು ನಡೆಸುವುದೇ ಕಷ್ಟ. ಅಂಥದ್ದರಲ್ಲಿ ಈಗ ಮಗಳು ಪಿಯುಸಿಯಲ್ಲಿ ಶೇ. 98ರಷ್ಟು ಅಂಕ ಪಡೆದು, ಬಿಎಸ್‌ಸಿ ಅಗ್ರಿ ಪದವಿ ಪ್ರವೇಶ ಪಡೆದಿದ್ದಾಳೆ. ಆದರೆ, ಮಗಳ ಸಾಧನೆಯ ಸಂಭ್ರಮ ಮನೆಯಲ್ಲಿ ಇಲ್ಲದಂತೆ ಆಗಿದೆ. ಆಕೆಯ ಶುಲ್ಕ ಪಾವತಿಸುವಷ್ಟು ಶಕ್ತವಾಗಿಲ್ಲ ಕುಟುಂಬ.
ಇದು, ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿನಿ ಭೂಮಿಕಾ ಮೇಟಿ ಸಂಕಷ್ಟ.ಮಗಳು ಪಿಯಸಿಯಲ್ಲಿ ಶೇ. 98ರಷ್ಟು ಅಂಕ ಪಡೆದಾಗ ಮನೆಯಲ್ಲಿ ಎಲ್ಲಿಲ್ಲದ ಸಂಭ್ರಮ. ಆಕೆಗೆ ಧಾರವಾಡ ವಿಶ್ವವಿದ್ಯಾಲಯದಲ್ಲಿ ಬಿಎಸ್‌ಸಿ ಅಗ್ರಿ ಪದವಿ ಸೀಟ್ ಸಹ ಲಭ್ಯವಾಗಿದೆ. ಆದರೆ, ಅದರ ಶುಲ್ಕ ಭರಿಸುವ ಶಕ್ತಿ ಕುಟುಂಬಕ್ಕೆ ಇಲ್ಲ. ಆದರೆ, ಎದೆಗುಂದದ ತಾಯಿ ಸವಿತಾ ಮೇಟಿ ಅವರು ಬ್ಯಾಂಕಿನಲ್ಲಿ ₹60 ಸಾವಿರ ಸಾಲ ಪಡೆದು ಪ್ರವೇಶವನ್ನೇನೋ ಕೊಡಿಸಿದ್ದಾರೆ. ಈಗ ಪ್ರತಿ ತಿಂಗಳು ಬಡ್ಡಿ ಪಾವತಿಸುವುದಕ್ಕೂ ಆಗದಂತೆ ಆಗಿದೆ. ಜತೆಗೆ ಮಗಳ ಓದಿನ ಖರ್ಚು ಭರಿಸಬೇಕಿದೆ. ಬಿಸಿಯೂಟವನ್ನು ತಿಂಗಳ ಪೂರ್ತಿ ತಯಾರು ಮಾಡಿದರೂ ಸಿಗುವುದು ಕೇವಲ ₹4700. ಅದರಲ್ಲಿ ಮನೆ ನಿಭಾಯಿಸಿಕೊಂಡು ಮಗಳನ್ನು ಓದಿಸುವುದು ಅಸಾಧ್ಯವೆನಿಸಿದೆ. ಮಗಳಿಗೆ ಬಿಎಸ್‌ಸಿ ಅಗ್ರಿ ಪ್ರವೇಶಕ್ಕಾಗಿ ₹45 ಸಾವಿರ ಶುಲ್ಕ ಪಾವತಿಸಿದ್ದಾರೆ. ಹೀಗಾಗಿ, ಮುಂದೆ ನನ್ನಿಂದ ಓದಿಸಲು ಆಗದು ಎಂದು ತಾಯಿ ಸವಿತಾ ಕಣ್ಣೀರು ಹಾಕುತ್ತಾರೆ.
ಸುದ್ದಿಗೋಷ್ಠಿಯಲ್ಲಿ ತನ್ನ ಅಳಲು ತೋಡಿಕೊಂಡ ಅವರು, ಪ್ರತಿ ವರ್ಷ ₹80-90 ಸಾವಿರ ಬೇಕು. ನನ್ನಿಂದ ಅಷ್ಟೊಂದು ಖರ್ಚು ಮಾಡಲು ಸಾಧ್ಯವಿಲ್ಲ. ಹಾಗಂತ ನನ್ನ ಮಗಳನ್ನು ಶಿಕ್ಷಣದಿಂದ ವಂಚಿತ ಮಾಡಲು ಸಿದ್ಧನಿಲ್ಲ ಎನ್ನುತ್ತಾರೆ. ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.ಅದರ ಜತೆಗೆ ಮಗ ಪಿಯುಸಿ ಓದುತ್ತಿದ್ದು, ಆತನನ್ನು ಓದಿಸಬೇಕಿದೆ. ಮಗಳು ಹಿರೇಸಿಂದೋಗಿ ಮೊರಾರ್ಜಿ ಶಾಲೆಯಲ್ಲಿದ್ದುಕೊಂಡು ಓದಿಯೇ ಪಿಯುಸಿಯಲ್ಲಿ ಶೇ. 98 ಅಂಕ ಪಡೆದಿದ್ದಾಳೆ. ಈಗ ಅವರ ಮುಂದಿನ ಶಿಕ್ಷಣಕ್ಕೆ ಕಷ್ಟವಾಗಿದೆ ಎನ್ನುತ್ತಾರೆ.
ಹೀಗಾಗಿ, ಸಹಾಯ ಮಾಡುವವರು ಅವರ ಬ್ಯಾಂಕ್ ಖಾತೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಾತರಕಿ- ಹೆಸರು – ಭೂಮಿಕಾ ಮಂಜಪ್ಪ ಮೇಟಿ, ಖಾತೆ ಸಂಖ್ಯೆ -10904100002246 , ಐಎಫ್ ಎಸ್ ಸಿ –ಪಿಕೆಜಿಬಿ0010904 ಖಾತೆಗೆ ನೆರವು ನೀಡಬಹುದಾಗಿದೆ. 9845057768 ಸಂಪರ್ಕಿಸಬಹುದು.;Resize=(128,128))
;Resize=(128,128))
;Resize=(128,128))