ಮಕ್ಕಳ ಮೇಲಿನ ದೌರ್ಜನ್ಯಗಳು ಕಡಿಮೆಗೊಳಿಸಲು ಬಾಲನ್ಯಾಯ ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ, ಪೋಕ್ಸೋ ಕಾಯ್ದೆಗಳು ಜತೆ ಜತೆಯಾಗಿ ಕೆಲಸ ನಿರ್ವಹಿಸುವುದು ಅತೀ ಅವಶ್ಯವಾಗಿದೆ.

ಧಾರವಾಡ:

ಮಕ್ಕಳು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸಾಕಷ್ಟು ಕಠಿಣ ಕಾನೂನುಗಳಿದ್ದರೂ ಮಕ್ಕಳ ಮೇಲೆ ನಿರಂತರ ದೌರ್ಜನ್ಯ ಪ್ರಕರಣಗಳಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಜಿಲ್ಲಾಡಳಿತ ಹಾಗೂ ಇತರೆ ಇಲಾಖೆಗಳ ಜೊತೆಗೂಡಿ ಮಂಗಳವಾರ ಮಕ್ಕಳ ಪಾಲನಾ ಸಂಸ್ಥೆಗಳ ಅಧಿಕಾರಿ, ಸಿಬ್ಬಂದಿಗೆ ಮಕ್ಕಳ ಹಕ್ಕುಗಳ ರಕ್ಷಣೆ, ಬಾಲನ್ಯಾಯ ಕಾಯ್ದೆ ಮತ್ತು ಪೋಕ್ಸೋ ಕಾಯ್ದೆ ಕುರಿತ ತರಬೇತಿಯಲ್ಲಿ ಅವರು ಮಾತನಾಡಿ, ಮಕ್ಕಳ ಮೇಲಿನ ದೌರ್ಜನ್ಯಗಳು ಕಡಿಮೆಗೊಳಿಸಲು ಬಾಲನ್ಯಾಯ ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ, ಪೋಕ್ಸೋ ಕಾಯ್ದೆಗಳು ಜತೆ ಜತೆಯಾಗಿ ಕೆಲಸ ನಿರ್ವಹಿಸುವುದು ಅತೀ ಅವಶ್ಯವಾಗಿದೆ. ಈ ಕಾಯ್ದೆಗಳ ಪರಿಚಯ ಈಗಾಗಲೇ ಇದ್ದು, ಅಲ್ಲಲ್ಲಿ ಸಾಕಷ್ಟು ಘಟನೆಗಳು ನಡೆಯುತ್ತಿರುವುದು ವಿಷಾದನೀಯ ಎಂದರು.

ಸರ್ಕಾರದ ಇಲಾಖೆ ಮತ್ತು ಕಾಯ್ದೆಗಳು ಇದ್ದರೂ ಪ್ರಕರಣ ಕಡಿಮೆ ಮಾಡುವಲ್ಲಿ ಹಾಗೂ ಕಾಯ್ದೆ ಅರ್ಥೈಸುವಲ್ಲಿ ಹಾಗೂ ಅನುಷ್ಠಾನ ಮಾಡುವಲ್ಲಿಯೂ ಎಡವಿದ್ದೇವೆ. ಮಕ್ಕಳ ಪಾಲನಾ ಸಂಸ್ಥೆಗೆ ಸಾಕಷ್ಟು ಮಕ್ಕಳು ಪಾಲನೆ ಮತ್ತು ಪೋಷಣೆಗೆ ಬರುತ್ತಿದ್ದು, ಅಂತಹ ಮಕ್ಕಳಿಗೆ ಪ್ರೀತಿ ಮತ್ತು ಬಾಂಧವ್ಯದಿಂದ ವರ್ತಿಸಿ ಮಕ್ಕಳ ಪ್ರಕರಣಗಳನ್ನ ಸೂಕ್ಷ್ಮ ರೀತಿಯಲ್ಲಿ ನಿಭಾಹಿಸಬೇಕು. ಮಕ್ಕಳ ಪಾಲನಾ ಸಂಸ್ಥೆಯಲ್ಲಿ ದಾಖಲಾದ ಮಕ್ಕಳ ಭವಿಷ್ಯಕ್ಕಾಗಿ ಆಪ್ತ ಸಮಾಲೋಚಕರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಜಾವೂರ, ಮಕ್ಕಳ ಪಾಲನಾ ಸಂಸ್ಥೆಯಲ್ಲಿ ಮಕ್ಕಳು ದಾಖಲಾದಾಗ ಪ್ರೀತಿ-ವಾತ್ಸಲ್ಯದಿಂದ ಅವರವರ ಕೆಲಸ ನಿರ್ವಹಿಸಿದಾಗ, ಮಕ್ಕಳಿಗೆ ತಂದೆ-ತಾಯಿ ಪ್ರೀತಿ, ಕುಟುಂಬದ ವಾತಾವರಣ ನೀಡಿದಾಗ ಮಕ್ಕಳ ಸರ್ವೋತೋಮುಖ ಬೆಳವಣಿಗೆ ಸಾಧ್ಯ. ಮಿಷನ್ ವಾತ್ಸಲ್ಯ ಯೋಜನೆಯಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ಬಾಲನ್ಯಾಯ ಕಾಯ್ದೆ ಸಂಪೂರ್ಣ ಅರ್ಥೈಸಿಕೊಂಡು ಕೆಲಸ ನಿರ್ವಹಿಸಬೇಕು ಎಂಬ ಸಲಹೆ ನೀಡಿದರು. ವಿವಿಧ ಕಾನೂನುಗಳ ಬಗ್ಗೆ ಹಾಗೂ ಮಕ್ಕಳ ಸಹಾಯವಾಣಿ-1098 ಅರಿವು ಮೂಡಿಸಬೇಕೆಂದರು. ಅಧ್ಯಕ್ಷತೆ ವಹಿಸಿದ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ.ವೈ. ಪಾಟೀಲ್, ಸದಸ್ಯಾದ ನೂರಜಹಾನ ಕಿಲ್ಲೇದಾರ, ಮಹಮ್ಮದಲಿ ತಹಶೀಲ್ದಾರ್‌, ಪ್ರಕಾಶ ಕೊಡ್ಲಿವಾಡ ಉಪನ್ಯಾಸ ನೀಡಿದರು. ಕಸ್ತೂರಿ ಗಾಡದ, ಸುಚಿತ್ರಾ ಕಡಿಬಾಗಿಲು, ರವಿ ಬಂಡಾರಿ, ಕರೆಪ್ಪ ಕೌಜಲಗಿ ಇದ್ದರು.