ಪಾಲಕರು ಮಕ್ಕಳನ್ನು ಸರಿಯಾಗಿ ಬೆಳೆಸುತ್ತಿಲ್ಲ. ಕೇವಲ ಅಂಕಗಳ ಒತ್ತಡ ಹಾಕುತ್ತಿದ್ದಾರೆ.ಇದರಿಂದ ಮಕ್ಕಳಿಗೆ ಸಾಕಷ್ಟು ಒತ್ತಡವಾಗುತ್ತಿದ್ದು, ಇತ್ತೀಚೆಗೆ ಮಕ್ಕಳಿಗೂ ಹೃದಯ ಸಂಬಂಧಿ ಕಾಯಿಲೆ ಸಂಭವಿಸುತ್ತಿವೆ.
ಕುಕನೂರು: ಸರ್ಕಾರಿ ಶಾಲಾ ಶಿಕ್ಷಕರನ್ನು ಮೆರಿಟ್ ಮೇಲೆ ನೇಮಕಾತಿ ಮಾಡಿಕೊಂಡಿದ್ದರೂ ಗುಣಮಟ್ಟದ ಶಿಕ್ಷಣದ ಕೊರತೆ ಕಾಣುತ್ತಿದೆ ಎಂದು ನಿವೃತ್ತ ಉಪ ನಿರ್ದೇಶಕ ಎ.ಎನ್.ನಾಗರಳ್ಳಿ ಕಳವಳ ವ್ಯಕ್ತಪಡಿಸಿದರು. ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ವಜ್ರಮಹೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳ ವಜ್ರಮಹೋತ್ಸವದಿಂದ ಸಂತಸ ಮೂಡಿದೆ. ಗುಣಮಟ್ಟದ ಶಿಕ್ಷಣ ಮಕ್ಕಳ ಬಾಳಿಗೆ ಬೆಳಕಾಗುತ್ತದೆ. ಪಾಲಕರು ಮಕ್ಕಳನ್ನು ಸರಿಯಾಗಿ ಬೆಳೆಸುತ್ತಿಲ್ಲ. ಕೇವಲ ಅಂಕಗಳ ಒತ್ತಡ ಹಾಕುತ್ತಿದ್ದಾರೆ.ಇದರಿಂದ ಮಕ್ಕಳಿಗೆ ಸಾಕಷ್ಟು ಒತ್ತಡವಾಗುತ್ತಿದ್ದು, ಇತ್ತೀಚೆಗೆ ಮಕ್ಕಳಿಗೂ ಹೃದಯ ಸಂಬಂಧಿ ಕಾಯಿಲೆ ಸಂಭವಿಸುತ್ತಿವೆ. ಅಲ್ಲದೇ ಮಕ್ಕಳಿಗೆ ಶ್ರಮದ ಆಟೋಟಗಳು ಕೂಡ ಇಲ್ಲದಂತಾಗಿದೆ. ಮಕ್ಕಳ ಬಾಲ್ಯ ಕೇವಲ ಅಂಕಗಳ ಒತ್ತಡಕ್ಕೆ ಸಿಮೀತಗೊಳಿಸಿದ್ದಾರೆ. ಅಲ್ಲದೇ ಇಂದಿನ ಪ್ರತಿಷ್ಠಿತ ಆಂಗ್ಲ ಭಾಷೆಯ ಶಾಲೆಯಲ್ಲಿ ಮಕ್ಕಳಿಗೆ ನಮ್ಮ ಗ್ರಾಮೀಣ ಕ್ರೀಡೆಗಳ ಪ್ರದರ್ಶನ ನಡೆಸುತ್ತಿಲ್ಲ. ಇದರಿಂದ ಮಕ್ಕಳು ನಮ್ಮ ಗ್ರಾಮೀಣ ಕ್ರೀಡೆ ಮರೆತ್ತಿದ್ದಾರೆ. ಇನ್ನೂ ಮಕ್ಕಳು ಕಲಿತ ಮಹಾನಗರಗಳತ್ತ ಉದ್ಯೋಗಕ್ಕೆ ಹೋಗುತ್ತಿದ್ದು, ವೃದ್ಧಾಶ್ರಮ ಹೆಚ್ಚಾಗುತ್ತಿವೆ. ಶಿಕ್ಷಕರು ಮಕ್ಕಳಿಗೆ ಪುನರ್ಜನ್ಮ ನೀಡುತ್ತಾರೆ. ಶಿಕ್ಷಕರು, ಮಕ್ಕಳ ನಡುವೆ ಸಂಬಂಧ ಸಹ ಉಳಿಯುತ್ತಿಲ್ಲ. ಕನ್ನಡ ಶಾಲೆಯಲ್ಲಿ ಪ್ರತಿಭಾವಂತ ಶಿಕ್ಷಕರಿದ್ದರೂ ಅದರ ಉಪಯೋಗವಾಗುತ್ತಿಲ್ಲ. ಮಕ್ಕಳು ಕಲಿಸಿದರೆ ಕಲಿಯುತ್ತಾರೆ ಎಂಬುದು ನನ್ನ ಧ್ಯೇಯ. ಸರ್ಕಾರಿ ಶಾಲೆಯಲ್ಲಿ ರಾತ್ರಿ ಊಟ ಬಿಟ್ಟು ಎಲ್ಲ ಸೌಲಭ್ಯಗಳು ದೊರೆಯುತ್ತದೆ.ಇನ್ನೂ ಇಟಗಿ ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಬ್ಬರು ಶಾಸಕರಾಗಿದ್ದಾರೆ. ಇಟಗಿ ಗ್ರಾಮದ ಹಿರಿಯರು, ಯುವಕರು ಹಾಗೂ ಗ್ರಾಮಸ್ಥರು ಸರ್ಕಾರಿ ಶಾಲೆಯ ವಜ್ರಮಹೋತ್ಸವ ಆಚರಿಸುತ್ತಿದ್ದು, ಸಾಕಷ್ಟು ಸಂತೋಷವಾಗಿದೆ ಎಂದರು.
ನಿವೃತ್ತ ಶಿಕ್ಷಕ ಅಂದಾನಪ್ಪ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲೆಗೆ ಭೂ ದಾನ ಮಾಡಿದ ನಂತರ ಗ್ರಾಮದ ರೈತರು ಪ್ರತಿ ಸೋಮವಾರ ಬಂಡಿ ಮೂಲಕ ಕಲ್ಲು ತಂದಿದ್ದಾರೆ. ಶಾಲೆ ನಿರ್ಮಾಣಕ್ಕೆ ಅವರ ಸಹಕಾರ ನೀಡಿದ್ದಾರೆ. ನಮ್ಮ ಶಾಸಕರಾದ ದಿ.ಈಶಣ್ಣ ಗುಳಗಣ್ಣನವರು ಶಾಲೆಗೆ ಹೊಸ ಕಟ್ಟಡ ನಿರ್ಮಿಸಲು ಅನುದಾನ ನೀಡಿ, ಶಾಲೆ ಅಭಿವೃದ್ಧಿ ಪಡಿಸಿದ್ದಾರೆ ಎಂದರು.ಬಿಜೆಪಿ ಜಿಲ್ಲಾ ನಿಕಟಪೂರ್ವ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ವಜ್ರಮಹೋತ್ಸವದ ವಿಶೇಷ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಈ ಶಾಲೆಯ ನಾಲ್ಕನೇ ತಲೆಮಾರಿನ ಶಿಕ್ಷಕರು ಈ ವೇದಿಕೆ ಮೇಲೆ ಇದ್ದಾರೆ. ಇಂದಿನ ಕಾರ್ಯಕ್ರಮವು ಇತಿಹಾಸ ಪುಟ ಸೇರುತ್ತದೆ. ನಮ್ಮ ತಂದೆ ಕಲಿತ ಶಾಲೆಯಾಗಿದ್ದು, ಶಾಲೆಯ ಅಭಿವೃದ್ಧಿಗೆ ಎಲ್ಲರ ಸಹಕಾರ ಪಡೆದು ಇನ್ನೂ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಅನ್ನದಾನೀಶ್ವರ ಶಾಖಾಮಠದ ಡಾ. ಮಹಾದೇವ ಸ್ವಾಮೀಜಿ ಮಾತನಾಡಿ, ಶಾಲೆ ದೊಡ್ಡವರು ಬಂದರೆ ಬಾಗುವುದು ಕಲಿಸಿದೆ. ಶಿಕ್ಷಣ ಮತ್ತು ಆರೋಗ್ಯ ಎಂದು ಖಾಸಗೀಕರಣವಾಗಬಾರದು. ಸರ್ಕಾರಿ ಶಾಲೆ ಶಿಕ್ಷಕರಿಗೆ ತಾಯಿ ಗುಣ ಇದೆ ಎಂದರು.ಸಿಂಧನೂರಿನ ಡಿವೈಎಸ್ಪಿ ಬಾಳಪ್ಪ ತಳವಾರ ಮಾತನಾಡಿದರು. ಭೈರನಹಟ್ಟಿಯ ಶ್ರೀಶಾಂತಲಿಂಗ ಸ್ವಾಮೀಜಿ, ಮುತ್ತಯ್ಯ ಕಳ್ಳಿಮಠ ಸಾನ್ನಿಧ್ಯ ವಹಿಸಿದ್ದರು. ಸಾಹಿತಿ ಬಿ.ಎಂ. ಹಳ್ಳಿ ಅವರ ಪುಸ್ತಕ ವಜ್ರಸಿರಿ ಪುಸ್ತಕ ಬಿಡುಗಡೆಯಾಯಿತು. ಭೂದಾನಿ ವೆಂಕಟರಾವ್ ಕುಲಕರ್ಣಿ ಅವರ ಕಂಚಿನ ಮೂರ್ತಿ ಅನಾವರಣಗೊಳಿಸಲಾಯಿತು.
ನಿವೃತ್ತ ಪ್ರಾಚಾರ್ಯ ಶ್ರೀಧರ ದೀಕ್ಷಿತ್, ಗ್ರಾಪಂ ಅಧ್ಯಕ್ಷೆ ರತ್ನಮ್ಮ ಭಜಂತ್ರಿ, ತಾಪಂ ಮಾಜಿ ಅಧ್ಯಕ್ಷ ಬಸವಪ್ರಭು ಪಾಟೀಲ್, ನಿವೃತ್ತ ಶಿಕ್ಷಕ ಹಂಚ್ಯಾಳಪ್ಪ ತಳವಾರ, ಎಸ್ಡಿಎಂಸಿ ಅಧ್ಯಕ್ಷ ಲಿಂಗರಾಜ ಹೊಸಭಾವಿ, ವಜೀರಸಾಬ್ ತಳಕಲ್, ಮಹೇಶ ದಾಸರ, ಅಂದಪ್ಪ ಹುರುಳಿ, ಶಂಕ್ರಪ್ಪ ಗಾಂಜಿ, ರಾಮಣ್ಣ ಕೌದಿ, ಪ್ರಭು ಹಳ್ಳಿ, ಸೋಮಶೇಖರಗೌಡ, ಎಫ್.ಎಂ.ಕಳ್ಳಿ, ಮಂಜುನಾಥ ಕಡೆಮನಿ, ಶಿವಪ್ಪ ಈಬೇರಿ, ರಾಜಶೇಖರ ಹೊಂಬಾಳ, ವಿರುಪಾಕ್ಷಪ್ಪ ಹುರುಳಿ, ಗವಿಸಿದ್ದನಗೌಡ ಮುದ್ದಾಬಳ್ಳಿ, ಶಿವಕುಮಾರ ಗುಳಗಣ್ಣವರ, ಬಸವರಾಜ ಡಿವೆಪ್ಪನವರ್, ಶರಣಪ್ಪ ಕಳ್ಳಿಮನಿ, ವಕೀಲ ಗುಡದಪ್ಪ, ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿದ್ದರು ಇತರರಿದ್ದರು.ಗ್ರಾಮದ ಇಟಗಿ ಮಹಾದೇವ ದೇವಾಲಯದಿಂದ ಶಾಲೆಯ ಎಲ್ಲ ಶಿಕ್ಷಕರ ಹಾಗೂ ಭೂ ದಾನ ಮಾಡಿದ ದಿ.ವೆಂಟಕರಾವ್ ಅವರ ಕಂಚಿನ ಮೂರ್ತಿ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.