ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಮಳೆಗಾಲ ಆರಂಭವಾಗಿ ಅತೀ ಮಳೆ ಸುರಿಯುತ್ತಿದ್ದರೂ ಈವರೆಗೆ ಯಾವುದೇ ಇಲಾಖೆಯಿಂದ ಮಳೆಯಿಂದ ಹಾನಿಯಾದ ರಸ್ತೆ, ಅಂಗನವಾಡಿ, ಶಾಲಾ, ವಿದ್ಯುತ್ ಕಂಬಗಳ ದುರಸ್ತಿ ಬಗ್ಗೆ ಪ್ರಸ್ತಾವನೆ ಬಂದಿಲ್ಲ. ಹಾಗಾದರೆ ಜಿಲ್ಲೆಯಲ್ಲಿ ಎಲ್ಲಿಯೂ ಏನು ಸಮಸ್ಯೆ ಇಲ್ಲವಾ ಎಂದು ಅಧಿಕಾರಿಗಳಿಗೆ ಡಿಸಿ. ಬಿ. ಫೌಜಿಯಾ ತರನ್ನುಮ್ ಅವರು ಖಾರವಗಿಯೇ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡ ಪ್ರಸಂಗ ವಿಪತ್ತು ನಿರ್ವಹಣಾ ಸಭೆಯಲ್ಲಿ ನಡೆಯಿತು.ಸಭೆಯಲ್ಲಿ ಜಿಲ್ಲಾಧಿಕಾರಿಗಳು ಅಧಿಕಾರಿಗಳು ಮಳೆ ಹಾನಿಯ ವಿಷಯದಲ್ಲೂ ಈ ಪರಿ ಸೋಮಾರಿತನ ತೋರೋದು ಸರಿಯಲ್ಲ, ಈ ಧೋರಣೆ ಮುಂದುವರಿದರೆ ಇದಕ್ಕೆ ಶಿಸ್ತು ಕ್ರಮ ಕಾದಿದೆ ಎಂದು ಎಚ್ಚರಿಸಿದರು.
ಶಾಲಾ-ಅಂಗನವಾಡಿ ಕಟ್ಟಡ ಎಲ್ಲಿಯೇ ಕುಸಿತ, ಶಿಥಿಲದಿಂದ ಛಾವಣಿ, ಛಾವಣಿಯ ಪದರು ಬಿದ್ದ ಅವಘಡ ಸಂಭವಿಸಿದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನೆ ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಹೀಗಾಗಿ ಕೂಡಲೆ ಅಂತಹ ಕಟ್ಟಡದಲ್ಲಿರುವ ಮಕ್ಕಳನ್ನು ಸುಸ್ಥಿತಿಯಲ್ಲಿರುವ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದರು.ಗ್ರಾಮೀಣ ಭಾಗದಲ್ಲಿ ಮಳೆಯಿಂದ ಕೆರೆ ತುಂಬಿ ಒಡೆದು ಹೋಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಕೆರೆ ಬಂಡ್ ಗಳನ್ನು ಈಗಲೇ ಪರಿಶೀಲಿಸಿ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಮಳೆಯಿಂದ ರಸ್ತೆ ಹಾಳಾದಲ್ಲಿ ಕೂಡಲೆ ಸರಿಪಡಿಸುವ ಕೆಲಸ ಆಗಬೇಕು. ರಸ್ತೆ ಗುಂಡಿಯಿಂದ ಅಪಘಾತಗಳು ಆಗದಂತೆ ನೋಡಿಕೊಳ್ಳಬೇಕು. ಲೋಕೋಪಯೋಗಿ ಮತ್ತು ಪಿ.ಆರ್.ಇ.ಡಿ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕೆಂದರು.
ಮಳೆಗಾಲ ಸಂದರ್ಭದಲ್ಲಿ ಕಲಬುರಗಿ ನಗರದಲ್ಲಿ ಚರಂಡಿ ತುಂಬಿ ಮನೆಗೆ ಕೊಳಚೆ ನೀರು ನುಗ್ಗುತ್ತವೆ. ಇದು ಮರುಕಳಿಸಬಾರದು. ಕಲಬುರಗಿ ಸೇರಿದಂತೆ ಜಿಲ್ಲೆಯ ಎಲ್ಲಾ ನಗರ-ಪಟ್ಟಣಗಳಲ್ಲಿ ಕೂಡಲೆ ಚರಂಡಿ ಸ್ವಚ್ಛಗೊಳಿಸಬೇಕು. ಸಾರ್ವಕನಿಕರಿಗೆ ಕಲುಷಿತ ಕುಡಿಯುವ ನೀರು ಪೂರೈಕೆಯಾಗದಂತೆ ಎಚ್ಚರ ವಹಿಸಬೇಕು. ಪಾಲಿಕೆ ಇಂಜಿನೀಯರ್ ಗಳು ನಗರದಲ್ಲಿ ವಾರ್ಡ್ ವಾರು ಖುದ್ದು ಭೇಟಿ ನೀಡಿ ಸಮಸ್ಯೆ ಅರಿಯಬೇಕು ಎಂದು ಡಿ.ಸಿ. ನಿರ್ದೇಶನ ನೀಡಿದರು.ಸಭೆಗೆ ಬಹುತೇಕ ತಾಲೂಕು ಮಟ್ಟದ ಅಧಿಕಾರಿಗಳ ವಿಡಿಯೋ ಕಾನ್ಫೆರೆನ್ಸ್‌ನಲ್ಲಿ ಗೈರಾಗಿರುವುದಕ್ಕೆ ಡಿ.ಸಿ. ತೀವ್ರ ಅಸಮಾಧಾನ ವ್ಯಕ್ತಪಡಿಸಿ ಗೈರಾದವರಿಗೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ನೊಟೀಸ್ ಜಾರಿಗೊಳಿಸುವಂತೆ ತಮ್ಮ ಕಚೇರಿಯ ಸಿಬ್ಬಂದಿಗೆ ಡಿ.ಸಿ. ಖಡಕ್ ಸೂಚನೆ ನೀಡಿದರು.
ಪರಿಹಾರ ವಿತರಣೆ ತ್ವರಿತವಾಗಲಿ: ಮಳೆಗೆ ಭಾಗಶಃ ಮನೆ ಹಾನಿಯಾದಲ್ಲಿ ಹಾನಿಯ ಪ್ರಮಾಣಕ್ಕನುಸಾರ ಗರಿಷ್ಠ 50 ಸಾವಿರ ರು. ಪರಿಹಾರ ನೀಡಲಾಗುತ್ತದೆ. ಇದು ವಿ.ಎ, ಪಿ.ಡಿ.ಓ ಹಾಗೂ ಪಿ.ಆರ್.ಇ.ಡಿ ಜ್ಯೂನಿಯರ್ ಇಮಜಿನೀಯರಗಳ ವರದಿ ಆಧಾರದ ಮೇಲೆ ತಹಸೀಲ್ದಾರರು ತಕ್ಷಣವೇ ಪರಿಹಾರ ವಿತರಿಸಬೇಕು. ಪೂರ್ಣ ಹಾನಿಯಾದಲ್ಲಿ 1.20 ಲಕ್ಷ ರು. ರಾಜೀವ್ ಗಾಂಧಿ ವಸತಿ ನಿಗಮದ ಪೋರ್ಟಲ್‌ನಲ್ಲಿ ಎಂಟ್ರಿ ಮಾಡಿ ನೀಡಲಾಗುತ್ತದೆ. ಇದುವರೆಗೆ 186 ಮನೆಗಳು ಹಾನಿಯಾಗಿದ್ದು, ಜಂಟಿ ಸರ್ವೆಯ ವರದಿ ಬಂದಿಲ್ಲ, ನಾಳೆಯೊಳಗೆ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿದರು.ಸಭೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಸಹಾಯಕ ಆಯುಕ್ತೆ ರೂಪಿಂದರ್ ಸಿಂಗ್ ಕೌರ್, ಪ್ರಭುರೆಡ್ಡಿ, ಡಿ.ಎಚ್.ಓ ಡಾ.ರತಿಕಾಂತ ಸ್ವಾಮಿ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಪಶುಸಂಗೋಪನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಎಸ್.ಡಿ. ಅವಟಿ, ಡಿ.ಡಿ.ಪಿ.ಐ ಸೂರ್ಯಕಾಂತ ಮದಾನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡಿ.ಡಿ. ರಾಜಕುಮಾರ ರಾಠೋಡ, ಡಿ.ಯು.ಡಿ.ಸಿ. ಯೋಜನಾ ನಿರ್ದೇಶಕ ಮುನಾವರ್ ದೌಲಾ ಸೇರಿದಂತೆ ಇನ್ನಿತರ ಅಧಿಕಾರಿಗಳಿದ್ದರು.