ಹಾವೇರಿ: ಬೈಕ್‌ಗಳಲ್ಲಿ ಕರ್ಕಶ ಶಬ್ದ ಮಾಡುವ ಸೈಲೆನ್ಸರ್‌ಗಳನ್ನು ಹಾಕಿಕೊಂಡು ಶಬ್ದಮಾಲಿನ್ಯ ಮಾಡುತ್ತ, ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿದ್ದ ಯುವಕರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಅಂತಹ 40ಕ್ಕೂ ಹೆಚ್ಚು ಬೈಕ್‌ಗಳ ಸೈಲೆನ್ಸರ್‌ಗಳನ್ನು ವಶಪಡಿಸಿಕೊಂಡು ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ನೇತೃತ್ವದಲ್ಲಿ ನಿಷ್ಕ್ರಿಯಗೊಳಿಸಲಾಯಿತು.
ವಶಪಡಿಸಿಕೊಂಡಿದ್ದ ಸೈಲೆನ್ಸರ್‌ಗಳನ್ನು ನಗರದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಜೆಸಿಬಿ ವಾಹನದಿಂದ ನಜ್ಜುಗುಜ್ಜು ಮಾಡಿ, ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಯಿತು.ಹಾವೇರಿ ಜಿಲ್ಲಾ ಪೊಲೀಸ್ ಮಾರ್ಗದರ್ಶನದಲ್ಲಿ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿ, ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ಸುಮಾರು 40 ಬುಲೆಟ್ ಬೈಕ್‌ಗಳಿಂದ ಸೈಲೆನ್ಸರ್‌ಗಳನ್ನು ವಶಪಡಿಸಿಕೊಂಡಿದ್ದರು. ಬುಧವಾರ ಸಾರ್ವಜನಿಕ ಬೈಕ್ ಸವಾರರಿಗೆ ಜಾಗೃತಿ ಮೂಡಿಸುವ ಹಾಗೂ ಎಚ್ಚರಿಕೆ ನೀಡುವ ಉದ್ದೇಶದಿಂದ ಸೈಲೆನ್ಸರ್‌ಗಳನ್ನು ಗುಜರಿ ಮಾಡಲಾಯಿತು. ಈ ವೇಳೆ ಸುದ್ದಿಗಾರರೊಂದಿಗೆ ಎಸ್‌ಪಿ ಯಶೋದಾ ವಂಟಗೋಡಿ ಮಾತನಾಡಿ, ನಗರದಲ್ಲಿ ಸಾರ್ವಜನಿಕರ ನೆಮ್ಮದಿ ಹಾಳು ಮಾಡುವ ಹಾಗೂ ಸಂಚಾರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಶಬ್ದ ಮಾಲಿನ್ಯ ಉಂಟುಮಾಡುವ ವಾಹನಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುತ್ತಿದೆ. ಪೊಲೀಸ್ ಇಲಾಖೆ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸುವ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿದ್ದ ಸೈಲೆನ್ಸರ್‌ಗಳನ್ನು ವಶಪಡಿಸಿಕೊಂಡು ನಿಷ್ಕಿಯಗೊಳಿಸಲಾಗಿದೆ ಎಂದರು.
ಮೋಟಾರ್ ಬೈಕ್‌ಗೆ ಮಾರ್ಪಡಿಸಿದ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡ ವಾಹನಗಳ ವಿರುದ್ಧ ಪೊಲೀಸ್ ಇಲಾಖೆ ಇತ್ತೀಚೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ನಗರದ ಶಾಲಾ ಕಾಲೇಜು, ಆಸ್ಪತ್ರೆ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಅತಿಯಾದ ಶಬ್ದಮಾಲಿನ್ಯ ಉಂಟುಮಾಡುವ ಬೈಕ್‌ಗಳನ್ನು ಹಿಡಿದು ದಂಡ ವಿಧಿಸಲಾಗಿದೆ. ಜತೆಗೆ ಸೈಲೆನ್ಸರ್‌ಗಳನ್ನು ವಶಕ್ಕೆ ಪಡೆದು ಸಾರ್ವಜನಿಕರ ಸಮ್ಮುಖದಲ್ಲಿ ನಿಷ್ಕ್ರಿಯಗೊಳಿಸಲಾಗುತ್ತಿದೆ. ಮುಂದೆಯೂ ವಾಹನ ಸವಾರರು ಬಹಳ ಎಚ್ಚರಿಕೆಯಿಂದ ಇರಬೇಕು. ಸಂಚಾರ ನಿಯಮಗಳನ್ನು ಪಾಲಿಸಿ, ವಾಹನಗಳಲ್ಲಿ ಅನಧಿಕೃತ ಬದಲಾವಣೆಗಳನ್ನು ಮಾಡದಂತೆ ಎಚ್ಚರಿಕೆ ನೀಡಿದರು.ಮೇನ್‌ರೋಡ್‌ಗಳಲ್ಲಿ ವೀಲಿಂಗ್ ಮಾಡುವವರ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ರಸ್ತೆಯಲ್ಲಿ ವೀಲಿಂಗ್ ಮಾಡುವವರ ವಿರುದ್ಧವೂ ಪೊಲೀಸರು ಕ್ರಮಕೈಗೊಂಡಿದ್ದಾರೆ. ಈಗಾಗಲೇ ರಾಣಿಬೆನ್ನೂರಿನಲ್ಲಿ 2 ಕೇಸ್ ದಾಖಲಿಸಲಾಗಿದೆ. ಸಾರ್ವಜನಿಕರು ಅಥವಾ ಯಾರಾದರೂ ವಿಲೀಂಗ್ ಮಾಡುವ ಬೈಕ್ ಸವಾರರ ಪೋಟೋ, ಮಾಡೆಲ್ ನಂಬರ್ ಹೀಗೆ ಹೆಚ್ಚಿನ ಮಾಹಿತಿ ಒದಗಿಸಿದ್ದಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಹೆಚ್ಚುವರಿ ಎಸ್‌ಪಿ ಲಕ್ಷ್ಮಣ ಶಿರಕೋಳ, ಡಿವೈಎಸ್‌ಪಿ ಗಿರಿಮಲ್ಲಪ್ಪ ತಳಕಲ್ಲ, ಶಹರ ಠಾಣೆ ಸಿಪಿಐ ಮೋತಿಲಾಲ್ ಪವಾರ, ಸಂಚಾರಿ ಪೊಲೀಸ್ ಠಾಣೆ ಪಿಎಸ್‌ಐ ಶೈಲಶ್ರೀ ಎಸ್., ಕೆ.ಎಂ. ನದಾಫ, ಸಿ.ವೈ. ತಹಸೀಲ್ದಾರ ಉಪಸ್ಥಿತರಿದ್ದರು.ನಿಯಮ ಕಟ್ಟುನಿಟ್ಟಾಗಿ ಪಾಲಿಸಿ: ಹೆಚ್ಚು ಶಬ್ದ ಮಾಡುವ ಬೈಕ್ ಸೈಲೆನ್ಸರ್‌ಗಳನ್ನು ಮಾರಾಟ ಮಾಡದಂತೆ ಡೀಲರ್ಸ್‌ಗೆ ಹಾಗೂ ಬೈಕ್‌ಗಳಿಗೆ ಅಳವಡಿಸದಂತೆ ಗ್ಯಾರೇಜ್‌ನವರಿಗೆ ಸೂಚನೆ ನೀಡಲಾಗಿದೆ. ಈ ಶಿಸ್ತುಕ್ರಮ ಇನ್ನೂ ಮುಂದುವರಿಯಲಿದ್ದು, ಬೈಕ್ ಸವಾರರು ಎಚ್ಚರಿಕೆಯಿಂದ ಇರಬೇಕು. ಸಂಚಾರಿ ನಿಯಮಗಳನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಹಾವೇರಿ ಎಸ್‌ಪಿ ಯಶೋದಾ ವಂಟಗೋಡಿ ಹೇಳಿದರು.