ಕಾನ್ವೆಂಟ್‌ ಸಂಸ್ಕೃತಿಯಿಂದ ಕನ್ನಡತನ ವಿನಾಶ

| Published : Feb 03 2024, 01:47 AM IST

ಕಾನ್ವೆಂಟ್‌ ಸಂಸ್ಕೃತಿಯಿಂದ ಕನ್ನಡತನ ವಿನಾಶ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಜನರಲ್ಲಿ ಕಲೆ ಸಾಹಿತ್ಯದ ಅರಿವು ಮೂಡಿಸುವುದರ ಜೊತೆಗೆ ಪುಸ್ತಕ ಓದುವ ಮನೋಭಾವನೆಯನ್ನು ಮೂಡಿಸಿ, ಮಾಯವಾಗುತ್ತಿರುವ ಕನ್ನಡ ಭಾಷೆಯನ್ನು ಉಳಿಸುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ ಎಂದು ಸಾಣೇಹಳ್ಳಿ ಶ್ರೀ ಪ್ರತಿಪಾದಿಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ನಗರ ಪ್ರದೇಶಗಳಲ್ಲಿರುವ ಕಾನ್ವೆಂಟ್‌ ಸಂಸ್ಕೃತಿ ಗ್ರಾಮೀಣ ಪ್ರದೇಶಕ್ಕೂ ಕಾಲಿಟ್ಟಿದ್ದು, ಅದು ಹೀಗೇ ಮುಂದುವರೆದರೆ ಕನ್ನಡ ಸಂಸ್ಕೃತಿ ಮಾಯವಾಗಿ ಕನ್ನಡತನ ಅಳಿಸಿಹೊಗುತ್ತದೆ ಎಂದು ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ಸಾಣೆಹಳ್ಳಿಯ ತರಾಸು ಮಹಾಮಂಟಪದಲ್ಲಿನ ಅಲ್ಲಮಪ್ರಭು ವೇದಿಕೆಯಲ್ಲಿ ಉದ್ಘಾಟನೆಗೊಂಡ ಚಿಕ್ಕಮಗಳೂರು- ಚಿತ್ರದುರ್ಗ ಅಂತರ್ ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.ಇಂತಹ ಸಾಹಿತ್ಯ ಸಮ್ಮೇಳನಗಳನ್ನು ಗ್ರಾಮೀಣ ಭಾಗದಲ್ಲಿ ಆಯೋಜಿಸುವ ಮೂಲಕ ಗ್ರಾಮೀಣ ಜನರಲ್ಲಿ ಕಲೆ ಸಾಹಿತ್ಯದ ಅರಿವು ಮೂಡಿಸುವುದರ ಜೊತೆಗೆ ಪುಸ್ತಕ ಓದುವ ಮನೋಭಾವನೆಯನ್ನು ಮೂಡಿಸಿ, ಮಾಯವಾಗುತ್ತಿರುವ ಕನ್ನಡ ಭಾಷೆಯನ್ನು ಉಳಿಸುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ. ಹಾಗೆಯೇ ಸಾಹಿತ್ಯ ಸಮ್ಮೇಳನದ ಮೂಲಕ ಸಾಹಿತ್ಯದ ಚರ್ಚೆಯ ಜೊತೆಗೆ ಪ್ರಚಲಿತ ಸಮಸ್ಯೆಗಳತ್ತ ಬೆಳಕು ಚೆಲ್ಲುವಂತೆ ಆಗಬೇಕು. ರಾಜಕಾರಣಿ, ಕೃಷಿಕ, ವ್ಯಾಪಾರಿ, ಕೈಗಾರಿಕೋದ್ಯಮಿಗಳಿಗಿಂತ ಹೆಚ್ಚಾಗಿ ಸಾಹಿತಿಗಳಿಗೆ ಸಾಮಾಜಿಕ ಕಳಕಳಿ ಮತ್ತು ಬದ್ಧತೆ ಇರಬೇಕಾದ್ದು ಅನಿವಾರ್ಯ. ಬದ್ಧತೆಯಿಲ್ಲದೆ ಹೊತ್ತು ಬಂದಂತೆ ಕೊಡೆ ಹಿಡಿಯುವ ಪ್ರವೃತ್ತಿ ಸಾಹಿತಿಗಳಿಗೂ ಬಂದರೆ ಆದರ್ಶಗಳು ಅರ್ಥಹೀನವಾಗುತ್ತವೆ ಎಂದರು.ನಮ್ಮ ನಾಡು ಕೃಷಿಕರ ನಾಡು, ಕೃಷಿಕ ಈ ದೇಶದ ಬೆನ್ನೆಲುಬು ಕೃಷಿಕ ಸತ್ಯಾಗ್ರಹ ಮಾಡಿದರೆ ನಾಡಿನ ಪುಂಗಿ ನಡೆಯುವುದಿಲ್ಲ. ನಾವು ಬದುಕಿರುವುದು ಅನ್ನ ತಿಂದೇ ಹೊರತು ಮಣ್ಣು ತಿಂದಲ್ಲ. ಸರ್ಕಾರ ರೈತರಿಗೆ ಎಷ್ಟು ಸವಲತ್ತುಗಳನ್ನು ಒದಗಿಸಬೇಕಿತ್ತೋ, ಅಷ್ಟು ಸವಲತ್ತುಗಳನ್ನು ಒದಗಿಸುವಲ್ಲಿ ವಿಫಲವಾಗುತ್ತಿವೆ. ಪ್ರಕೃತಿಯ ಚೆಲ್ಲಾಟ ಒಂದುಕಡೆಯಾದರೆ ರೈತರಿಗೆ ಬೇಕಾದ ವಿದ್ಯುತ್, ನೀರಾವರಿ, ಬೆಂಬಲ ಬೆಲೆಯ ಸವಲತ್ತುಗಳು ಸಿಗುತ್ತಿಲ್ಲ. ಇಷ್ಟೆಲ್ಲಾ ನೋವಿಗಳ ನಡುವೆ ನಮ್ಮ ರೈತ ಹೆದೆಯುಬ್ಬಿಸಿ ಬದುಕುತ್ತಿದ್ದಾನೆ. ಅಂತಹ ರೈತರಿಗೆ ಬೇಕಾದ ಸವಲತ್ತುಗಳನ್ನು ಸರ್ಕಾರಗಳು ನೀಡಬೇಕು ಎಂದು ಈ ಸಮಾವೇಶದ ಮೂಲಕ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.ನಮ್ಮ ನಾಡಿನಲ್ಲಿರುವ ಮೌಲ್ಯಯುತವಾದ ಜಾನಪದ ಕಲೆಗಳೂ ಅವಸಾನದ ಅಂಚಿನಲ್ಲಿವೆ. ಅವು ಇಂದಿಗೆ ಕೊನೆಗೊಳ್ಳಬಾರದು ಮುಂದುವರೆಯಬೇಕು. ಸರ್ಕಾರಗಳು ಜಾನಪದ ಕಲೆಗಳ ಬಗ್ಗೆ ಉದಾಸೀನ ಮಾಡದೆ ಶಾಸ್ತ್ರೀಯ ಸಂಗೀತಗಳಿಗೆ ನೀಡಿದಂತೆ ಜಾನಪದ ಕಾಲಾವಿದರಿಗೂ ಹೆಚ್ಚಿನ ನೆರವು ನೀಡುವ ಕೆಲಸವನ್ನು ನಮ್ಮ ಸರ್ಕಾರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಕೆ ಮಾಡಬೇಕು ಎಂದರು. ಸಮ್ಮೇಳನ ಉದ್ಘಾಟಿಸಿದ ಕಸಾಪ ಮಾಜಿ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಮಾತನಾಡಿ, ಇಂತಹ ಸಮ್ಮೇಳನಗಳು ಗ್ರಾಮೀಣ ಪ್ರದೇಶಕ್ಕೆ ವಿಸ್ತಾರಗೊಳ್ಳುವುದು ಅಗತ್ಯವಿದೆ. ಟೀಕೆ ಟಿಪ್ಪಣಿಗಳಿಗೆ ಗುರಿಯಾಗುವವರು ಸ್ವಾಮಿಗಳು ರಾಜಕಾರಣಿಗಳೇ ಹೆಚ್ಚು ಅದರಂತೆ ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರಗಳು ಹದಗೆಟ್ಟಿ ರುವುದು ಕಟು ಸತ್ಯ ಆದರೂ ವೈಚಾರಿಕತೆಯ ಧರ್ಮಗುರುಗಳು ಹಾಗೂ ಬದ್ಧತೆಯ ರಾಜಕೀಯ ನಾಯಕರುಗಳು ನಮ್ಮ ಮಧ್ಯೆ ಇದ್ದಾರೆ. ಇಂಥವರಿಂದ ನಮ್ಮ ಸಮಾಜ ಕಟ್ಟುವ ಕೆಲಸ ಮಾಡಬೇಕಿದೆ ಎಂದರು.ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸುಧಾಕರ್ ಮಾತನಾಡಿ, ಕನ್ನಡ ಉಳಿಸುವ ಬೆಳೆಸುವ ಕೆಲಸವನ್ನು ಸರ್ಕಾರ ಪ್ರಾಮಾಣಿಕವಾಗಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ನಾಮಪಲಕಗಳಲ್ಲಿ ಶೇ. 60 ರಷ್ಟು ಕನ್ನಡವನ್ನು ಬಳಸುವಂತೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದರು.

ಸಮ್ಮೇಳನದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ನಾಡೋಜ ಡಾ.ಮಹೇಶ್ ಜೋಶಿ ಪುಷ್ಪನಮನ ಸಲ್ಲಿಸಿದರು. ಶಾಸಕ ಬಿ.ಜಿ.ಗೋವಿಂದಪ್ಪ ಸಮ್ಮೇಳನಾಧ್ಯಕ್ಷರ ಭಾಷಣದ ಪ್ರತಿಯನ್ನು, ಮಾಜಿ ಸಂಸದ ಚಂದ್ರಪ್ಪ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದರು. ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ ಪುಸ್ತಕ ಮಳಿಗೆ ಉದ್ಘಾಟನೆ ಮಾಡಿದರು. ಚಿಕ್ಕಮಗಳೂರು ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ್ ಶ್ರೀನಿವಾಸ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.ವೇದಿಕೆಯಲ್ಲಿ ಶಾಸಕ ರಘುಮೂರ್ತಿ ಸೇರಿದಂತೆ ಸಾಹಿತಿಗಳು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ಕಸಾಪದ ಪದಾಧಿಕಾರಿಗಳು ಹಾಜರಿದ್ದರು. ಕಾರ್ಯ ಕ್ರಮಕ್ಕೂ ಮುನ್ನ ಪಸ್ತಕಗಳನ್ನು ಅಲಂಕೃತ ರಥದಲ್ಲಿ ಇರಿಸಿ ಮೆರವಣಿಗೆ ನಡೆಸಲಾಯಿತು. ಅಲ್ಲದೆ ಸಮ್ಮೇಳನದ ಸರ್ವಾಧ್ಯಕ್ಷರು ಹಾಗೂ ಗಣ್ಯರ ಪಾದ ಯಾತ್ರೆಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ಜಾನಪದ ಕಲಾಮೇಳದೊಂದಿಗೆ ನಡೆಸಲಾಯಿತು.ಮಿತಿಗಳನ್ನು ದಾಟಿದಾಗಲೇ ಶ್ರೇಷ್ಠತೆ: ಶ್ರೀ

ಆಪಾದನೆಗಳು ಯಾರಿಗೂ ತಪ್ಪಿದ್ದಲ್ಲ ಆಪಾದನೆಗಳು ಸಕಾರಾತ್ಮಕವಾಗಿರಬೇಕೇ ಹೊರತು ನಕಾರಾತ್ಮಕ ವಾಗಿರಬಾರದು. ಸ್ವಾಮಿ, ರಾಜಕಾರಿಣಿ, ಸಾಹಿತಿಗಳು ದೇವಲೋಕದಿಂದ ಇಳಿದುಬಂದವರಲ್ಲ, ಅವರಿಗೂ ಕೂಡ ಅವರದೇ ಆದ ಮಿತಿಗಳಿರುತ್ತವೆ. ಮಿತಿಗಳನ್ನು ದಾಟಿದಾಗಲೇ ಸ್ವಾಮಿಗೆ ಶ್ರೇಷ್ಠತೆ ಬರುವುದು, ಸಾಹಿತಿಗೆ ಗೌರವ ಬರುವುದು. ರಾಜಕಾರಣಿ ಜನಮನ್ನಣೆಗಳಿಸುವುದು. ಆದರೆ, ಇಂದು ಸಾಹಿತಿಗಳು, ರಾಜಕಾರಣಿಗಳು, ಸ್ವಾಮಿಗಳು ತಮ್ಮದೇ ಆದ ಗೋಡೆ ಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ ಎಂದು ಡಾ.ಪಂಡಿತಾರಾಧ್ಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು, ಕಸಾಪ ಮಾಜಿ ಅಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಮಾತನಾಡಿ, ಸಮ್ಮೇಳನ ಎನ್ನುವುದು ಕೇವಲ ಸಂಕೇತ .ಅಲ್ಲಿ ನಡೆಯುವ ಚಟುವಟಿಕೆಗಳು ಕ್ರಿಯಾಶೀಲವಾಗಿರಬೇಕು. ಆಮಂತ್ರಣ ಪತ್ರಿಕೆ ನೋಡುವುದುಕ್ಕೂ ಓದುವುದಕ್ಕೂ ಆಕರ್ಷಣೀಯವಾಗಿರಬೇಕು. ಮತದಾರರ ಚೀಟಿಯಂತಾಗಬಾರದು ಎಂದು ಸಲಹೆಯಿತ್ತರು.

ಬಾಗೂರು ಚೆನ್ನಕೇಶವ ದೇಗುಲಕ್ಕೆ ನನ್ನನ್ನು ಬಿಡಲಿಲ್ಲವೇಕೆ?: ಕನಕಶ್ರೀ

ಸಾಣೆಹಳ್ಳಿ: ಹೊಸದುರ್ಗ ತಾಲೂಕಿನ ಸುಪ್ರಸಿದ್ಧ ಬಾಗೂರು ಚೆನ್ನಕೇಶವ ಸ್ವಾಮಿ ದೇವಸ್ಥಾನಕ್ಕೆ ತಮ್ಮನ್ನು ಬಿಟ್ಟುಕೊಳ್ಳದೇ ಇರುವ ಪ್ರಸಂಗವೊಂದನ್ನು ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಸಾಣೆಹಳ್ಳಿಯಲ್ಲಿ ಶನಿವಾರ ಆರಂಭಗೊಂಡ ಚಿಕ್ಕಮಗಳೂರು, ಚಿತ್ರದುರ್ಗ ಅಂತರ್ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಹರವಿ ನೋವು ತೋಡಿಕೊಂಡ ಘಟನೆ ನಡೆಯಿತು.

ಮಠಗಳ ಧಾರ್ಮಿಕ, ಸಾಹಿತ್ಯಿಕ, ಸಾಂಸ್ಕೃತಿಕ ಕೊಡುಗೆ ವಿಷಯದ ಮೇಲಿನ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಾಭಿಮಾನಕ್ಕೆ ಧಕ್ಕೆಯಾದ ಜಾಗಕ್ಕೆ ಹೋಗಬಾರದು ಎಂದರು.ಬಾಗೂರು ದೇವಸ್ಥಾನಕ್ಕೆ ಹೋದಾಗ ನಮ್ಮನ್ನು ಬಿಟ್ಟುಕೊಳ್ಳಲಿಲ್ಲ. ಅಲ್ಲಿಂದ ವಾಪಾಸ್ಸಾದ ನಂತರ ಇಡೀ ದೇವಸ್ಥಾನವನ್ನೇ ತೊಳೆದರು ಎಂಬ ಸಂಗತಿ ಗೊತ್ತಾ ಯಿತು. ದೇವಸ್ಥಾನ ತೊಳೆಯದೇ ಎಷ್ಟು ವರ್ಷವಾಯಿತೋ ಎಂದು ಸಮಾಧಾನ ಪಟ್ಟೆವು ಎಂದರು.ಚೆನ್ನಕೇಶವ ದೇವಸ್ಥಾನ ಮುಜರಾಯಿಗೆ ಸೇರಿದ್ದೆಂದು ಗೊತ್ತಾಗಲಿಲ್ಲ. ಮೊದಲೇ ಗೊತ್ತಿದ್ದರೆ ನಮ್ಮನ್ನೇಕೆ ಬಿಡಲ್ಲ? ಎಂದು ಪ್ರತಿಭಟನೆ ಮಾಡುತ್ತಿದ್ದೆವು. ದೇವಸ್ಥಾನ ತೊಳೆಯುವ ಬದಲು ಮನಸ್ಸಿನ ಮಲಿನ ಸ್ವಚ್ಛ ಮಾಡಿಕೊಳ್ಳಿ ಎಂದರು. ಇನ್ನು ಮೇಲೆ ನಾವು ಚೆನ್ನಕೇಶವ ದೇವಸ್ಥಾನಕ್ಕೆ ಹೋಗಲ್ಲ. ಹೋಗಿ ಏಕೆ ಹೊರಗೆ ನಿಲ್ಲಬೇಕು? ಎಂದು ಈಶ್ವರಾನಂದ ಪುರಿ ಸ್ವಾಮೀಜಿ ಪ್ರಶ್ನಿಸಿದರು.