ಸಾರಾಂಶ
ಮಂಗಳೂರು ನಗರ ವ್ಯಾಪ್ತಿಯ 13 ಠಾಣೆಗಳ ಒಟ್ಟು 37 ಪ್ರಕರಣಗಳಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದ್ದ 6,80,86,558 ಮೌಲ್ಯದ 460 ಕೆಜಿ 335 ಗ್ರಾಂ ಗಾಂಜಾ, 7 ಕೆಜಿ 640 ಗ್ರಾಂ ಎಂಡಿಎಂಎ ಮತ್ತು ಮಾದಕ ವಸ್ತುಗಳನ್ನು ಸುಟ್ಟು ನಾಶ ಮಾಡಿ ವಿಲೇವಾರಿ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟ, ಸಾಗಾಟ ಹಾಗೂ ಸೇವನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ಠಾಣೆಯಲ್ಲಿ ನಾರ್ಕೋಟಿಕ್ಸ್ ತಂಡದ ಮೂಲಕ ಕಾರ್ಯಾಚರಣೆ ನಡೆಸಿ 2024ನೇ ಸಾಲಿನಲ್ಲಿ ಒಟ್ಟು 88 ಪ್ರಕರಣಗಳನ್ನು ದಾಖಲಿಸಿ 158 ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 7,51,99,930 ರು. ಮೌಲ್ಯದ ಸುಮಾರು 190 ಕೆಜಿ ಗಾಂಜಾ, 7.744 ಎಂಡಿಎಂಎ ಹಾಗೂ ಇತರ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿದರು.ಕಮಿಷನರೇಟ್ ವ್ಯಾಪ್ತಿಯ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಲ್ಲಿ ಸ್ವಾಧೀನಪಡಿಸಿಕೊಂಡಿರುವ ಮಾದಕ ವಸ್ತುಗಳನ್ನು ನ್ಯಾಯಾಲಯದ ಅನುಮತಿಯಂತೆ ಮೂಲ್ಕಿಯ ಕೊಲ್ನಾಡಿನ ಕೈಗಾರಿಕಾ ಪ್ರದೇಶದ ಸಸ್ಟೇನೆಬಿಲಿಟಿ ಹೆಲ್ತ್‌ಕೇರ್ ಸೊಲ್ಯೂಷನ್ ಕಂಪನಿಯಲ್ಲಿ ಬುಧವಾರ ನಾಶಪಡಿಸಲಾಯಿತು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, 2025ನೇ ಸಾಲಿನಲ್ಲಿ ಇದುವರೆಗೆ 5 ಪ್ರಕರಣಗಳನ್ನು ದಾಖಲಿಸಿ 9 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. 73,75,000 ರುಯ ಬೆಲೆಬಾಳುವ ಗಾಂಜಾ ಎಂಡಿಎ ಮತ್ತಿತರ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.ಮಂಗಳೂರು ನಗರ ವ್ಯಾಪ್ತಿಯ 13 ಠಾಣೆಗಳ ಒಟ್ಟು 37 ಪ್ರಕರಣಗಳಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದ್ದ 6,80,86,558 ಮೌಲ್ಯದ 460 ಕೆಜಿ 335 ಗ್ರಾಂ ಗಾಂಜಾ, 7 ಕೆಜಿ 640 ಗ್ರಾಂ ಎಂಡಿಎಂಎ ಮತ್ತು ಮಾದಕ ವಸ್ತುಗಳನ್ನು ಸುಟ್ಟು ನಾಶ ಮಾಡಿ ವಿಲೇವಾರಿ ಮಾಡಲಾಯಿತು.