ಪಶ್ಚಿಮಘಟ್ಟದಲ್ಲಿ ಶೋಲಾ ಅರಣ್ಯಗಳ ನಾಶ ಅಪಾಯಕಾರಿ: ನ್ಯಾ.ಸಂತೋಷ್‌

| Published : Mar 18 2024, 01:49 AM IST

ಸಾರಾಂಶ

ಮನುಷ್ಯನ ಅತಿಯಾದ ಆಸೆಗೆ ಪಶ್ಚಿಮಘಟ್ಟದ ಶೋಲಾ ಅರಣ್ಯಗಳು ನಾಶವಾಗುತ್ತಿದೆ. ಕೃಷಿ ಹಾಗೂ ಕೃಷಿಯೇತರ ಉದ್ದೇಶಕ್ಕಾಗಿ ಕಾಡಿನ ಮರಗಳು ಉರುಳಿಬೀಳುತ್ತಿದೆ. ಇದು ಹೀಗೇ ಮುಂದುವರಿದರೆ ಮುಂದಿನ ಪೀಳಿಗೆಗೆ ನೀರನ್ನು ಸಂರಕ್ಷಿಸಲು ಅಸಾಧ್ಯ ಆಗಲಿದೆ ಎಂದು ಸ್ಥಳೀಯ ಮುನ್ಸಿಫ್ ನ್ಯಾಯಾಲಯ ಹಿರಿಯ ನ್ಯಾಯಾಧೀಶ ಸಂತೋಷ್ ಹೊಸನಗರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಹೊಸನಗರ: ಮನುಷ್ಯನ ಅತಿಯಾದ ಆಸೆಗೆ ಪಶ್ಚಿಮಘಟ್ಟದ ಶೋಲಾ ಅರಣ್ಯಗಳು ನಾಶವಾಗುತ್ತಿದೆ ಎಂದು ಸ್ಥಳೀಯ ಮುನ್ಸಿಫ್ ನ್ಯಾಯಾಲಯ ಹಿರಿಯ ನ್ಯಾಯಾಧೀಶ ಸಂತೋಷ್ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಗುರೂಜಿ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಸ್ವಾಭಾವಿಕ ಅರಣ್ಯ ಸಸ್ಯಗಳ ಬೀಜದುಂಡೆ ತಯಾರಿಕಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೃಷಿ ಹಾಗೂ ಕೃಷಿಯೇತರ ಉದ್ದೇಶಕ್ಕಾಗಿ ಕಾಡಿನ ಮರಗಳು ಉರುಳಿಬೀಳುತ್ತಿದೆ. ಇದು ಹೀಗೇ ಮುಂದುವರಿದರೆ ಮುಂದಿನ ಪೀಳಿಗೆಗೆ ನೀರನ್ನು ಸಂರಕ್ಷಿಸಲು ಅಸಾಧ್ಯ ಆಗಲಿದೆ ಎಂದರು.

ಪ್ರಧಾನ ನ್ಯಾಯಾಧೀಶ ರವಿಕುಮಾರ ಮಾತನಾಡಿ, ಈ ನೆಲ, ಕಾಡಿನ ಮೇಲಿನ ಹಕ್ಕು, ಅನುಭವದ ಕುರಿತು ಮಾತ್ರ ಮಾತನಾಡುತ್ತೇವೆ. ಅದರ ಸಂರಕ್ಷಣೆಯ ಜವಾಬ್ದಾರಿ, ಹೊಣೆಗಾರಿಕೆ ಕುರಿತಂತೆ ಮಾತ್ರ ಯಾರು ಸೊಲ್ಲೆತ್ತುತಿಲ್ಲ ಎಂದರು.

ಬೀಜದುಂಡೆ ಉತ್ತಮ ಸೇವೆ:

ಪರಿಸರ ಕಾರ್ಯಕರ್ತ ಚಕ್ರವಾಕ ಸುಬ್ರಹ್ಮಣ್ಯ ಮಾತನಾಡಿ, ಅರಣ್ಯ ಬೆಳೆಸುವ ಪದ್ಧತಿಗಳಲ್ಲಿ ಬೀಜದುಂಡೆ ಉತ್ತಮ ಸೇವೆಯಾಗಿದೆ. ಅರಣ್ಯದಲ್ಲಿ ದೊರೆಯುವ ಸ್ವಾಭಾವಿಕ ಸಸ್ಯಗಳ ಬೀಜಗಳನ್ನು ಸಂಗ್ರಹಿಸಿ, ಅದನ್ನು ಮಣ್ಣು ಅಥವಾ ಸಗಣಿಯ ಜತೆಗೆ ನೀರನ್ನು ಬೆರೆಸಿ ಮಣ್ಣಿನ ಉಂಡೆಗಳನ್ನು ಮಾಡಲಾಗುತ್ತದೆ. ಈ ಉಂಡೆಗಳ ಒಣಗಿಸಿ, ನಂತರ ಮಳೆಗಾದಲ್ಲಿ ಅರಣ್ಯದ ಸಮೀಪ ಬೀರುವುದರಿಂದ ಅಲ್ಲಿ ಸಸ್ಯಗಳು ಪುನಃ ವೃದ್ಧಿಯಾಗಿ, ಭವಿಷ್ಯದಲ್ಲಿ ವೃಕ್ಷಗಳಾಗಬಲ್ಲವು ಎಂದು ವಿವರಿಸಿದರು.

ಶಾಲಾಡಳಿತ ಮಂಡಳಿ ಅಧ್ಯಕ್ಷ ಸುದೇಶ ಕಾಮತ್ ಅಧ್ಯಕ್ಷತೆ ವಹಿಸಿ, ಈಗ ತಯಾರಿಸಿದ ಬೀಜದುಂಡೆಗಳನ್ನು ಜೂನ್ ಮೊದಲ ವಾರ ಮಳೆಗಾಲದ ಸಮಯದಲ್ಲಿ ಸಮೀಪದ ಕಾಡಿನಲ್ಲಿ ಮಕ್ಕಳಿಂದ ಬಿತ್ತಿಸುವ ಕೆಲಸ ಮಾಡಲಾಗುವುದು ಎಂದರು.

ಪರಿಸರ ಕಾರ್ಯಕರ್ತರಾದ ಹನಿಯಾ ರವಿ, ರವಿರಾಜ್ ಭಟ್, ಉಪ ವಲಯ ಅರಣ್ಯಾಧಿಕಾರಿ ಯುವರಾಜ್, ಶಾಲಾಡಳಿತ ಸಮಿತಿ ಕಾರ್ಯದರ್ಶಿ ಶಾಂತಮೂರ್ತಿ, ನಿರ್ದೇಶಕರು ಇದ್ದರು.

ಕಾರ್ಯಕ್ರಮದಲ್ಲಿ ಸುಷ್ಮಾ ಸ್ವಾಗತಿಸಿ, ಉಷಾ ನಿರೂಪಿಸಿದರು.

- - - (** ಈ ಪೋಟೋ- ಕ್ಯಾಪ್ಷನ್‌ ಪ್ಯಾನೆಲ್‌ಗೆ ಬಳಸಬಹುದು) -16ಎಚ್‍ಒಎಸ್1ಪಿ:

ಹೊಸನಗರದ ಗುರೂಜಿ ಇಂಟರ್‌ ನ್ಯಾಷನಲ್ ಸ್ಕೂಲ್‌ನಲ್ಲಿ ಅರಣ್ಯ ಸಸ್ಯಗಳ ಬೀಜದುಂಡೆ ತಯಾರಿಸುವ ಕಾರ್ಯಾಗಾರವನ್ನು ನ್ಯಾಯಾಧೀಶರಾದ ಸಂತೋಷ್ ಉದ್ಘಾಟಿಸಿದರು. ನ್ಯಾ.ರವಿಕುಮಾರ್, ಪರಿಸರ ಕಾರ್ಯಕರ್ತರಾದ ಚಕ್ರವಾಕ ಸುಬ್ರಹ್ಮಣ್ಯ, ಹನಿಯಾ ರವಿ, ಸುದೇಶ್ ಕಾಮತ್ ಮತ್ತಿತರರು ಪಾಲ್ಗೊಂಡಿದ್ದರು.