ಸಾರಾಂಶ
ಕಳೆದ ಬಾರಿಯೂ ಸಹ ಮೆಕ್ಕೆಜೋಳ ಬೆಳೆಯನ್ನು ಕರಡಿಗಳು ದಾಳಿ ಮಾಡಿ ಹಾಳು ಮಾಡಿದ್ದವು.
ಕೂಡ್ಲಿಗಿ: ಕಳೆದ ಮೂರ್ನಾಲ್ಕು ದಿನಗಳಿಂದ ಕರಡಿಗಳು ದಾಳಿ ನಡೆಸಿ ಕಬ್ಬಿನ ಬೆಳೆ ನಾಶಪಡಿಸಿವೆ. ಇದಕ್ಕೆ ಸೂಕ್ತ ಪರಿಹಾರ ಕೊಡಿ ಎಂದು ಅಮರದೇವರಗುಡ್ಡ ಗ್ರಾಮದ ರೈತರು ಒತ್ತಾಯಿಸಿದ್ದಾರೆ.ಕೂಡ್ಲಿಗಿ ಸಮೀಪದ ಅಮರದೇವರಗುಡ್ಡ ಗ್ರಾಮದ ರೈತ ಧರ್ಮನಾಯ್ಕ ಎಂಬವರ ಜಮೀನಿಗೆ ಕರಡಿಗಳು ಲಗ್ಗೆ ಇಟ್ಟಿವೆ. ದಾಳಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದರು.
ಕಳೆದ ಬಾರಿಯೂ ಸಹ ಮೆಕ್ಕೆಜೋಳ ಬೆಳೆಯನ್ನು ಕರಡಿಗಳು ದಾಳಿ ಮಾಡಿ ಹಾಳು ಮಾಡಿದ್ದವು. ಈ ಬಾರಿಯೂ ಕರಡಿಗಳು ದಾಳಿ ನಡೆಸಿ ಹಾಳು ಮಾಡಿವೆ. ಸಾಲ ಮಾಡಿ ಬೆಳೆದ ರೈತನ ಕೈಗೆ ಏನೂ ಸಿಗದೇ ವಿಷ ಕುಡಿಯುವುದೊಂದೇ ಬಾಕಿ ಇದೆ. ಸಂಬಂಧಿಸಿದ ಅರಣ್ಯ ಇಲಾಖೆಯು ಕರಡಿಗಳನ್ನು ಊರೊಳಗೆ ಬಾರದಂತೆ ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.ಪರಿಶೀಲಿಸಿ ಕ್ರಮ: ಕರಡಿಗಳು ಕಬ್ಬಿನ ಬೆಳೆಗೆ ದಾಳಿ ನಡೆಸಿವೆ ಎಂಬುದರ ಬಗ್ಗೆ ಮಾಹಿತಿ ಬಂದಿದೆ. ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೂಡ್ಲಿಗಿ ಅರಣ್ಯ ಇಲಾಖೆಯ ಆರ್ ಎಫ್ ಒ ಸಂದೀಪ ನಾಯಕ ತಿಳಿಸಿದ್ದಾರೆ.
ಕರಡಿ ದಾಳಿ ಬಗ್ಗೆ ವಿಡಿಯೋ, ಫೋಟೋ ಬಂದಿವೆ. ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಬೆಳೆ ಕಳೆದುಕೊಂಡ ರೈತರ ಕಷ್ಟವನ್ನು ನಾನೊಬ್ಬ ರೈತನ ಮಗನಾಗಿ ಅರಿತಿದ್ದೇನೆ. ವಿಷ ಕುಡಿದು ಜೀವನ ಕಳೆದುಕೊಳ್ಳುವುದು ಪರಿಹಾರವಲ್ಲ ಎನ್ನುತ್ತಾರೆ ಶಾಸಕ ಡಾ.ಶ್ರೀನಿವಾಸ.