ಸಾರಾಂಶ
ನರಸಿಂಹರಾಜಪುರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ, ಜೆಡಿಎಸ್ ವಿಜಯೋತ್ಸವ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಗ್ಯಾರಂಟಿಗಳನ್ನು ನಿಲ್ಲಿಸದೆ ಮುಂದುವರಿಸಬೇಕು ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಆಗ್ರಹಿಸಿದರು.
ಬಾನುವಾರ ರಾತ್ರಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಕ್ಕೆ ತಾಲೂಕು ಬಿಜೆಪಿ ಘಟಕ ಹಾಗೂ ಜೆಡಿಎಸ್ ಪಕ್ಷದಿಂದ ಆಯೋಜಿಸಿದ್ದ ವಿಜಯೋತ್ಸವದಲ್ಲಿ ಮಾತನಾಡಿದರು.ಜವಾಹರಲಾಲ್ ನೆಹರು ಅವರು ಯಾವುದೇ ವಿರೋಧಪಕ್ಷ ವಿಲ್ಲದ ಸಂದರ್ಭದಲ್ಲಿ ಮೂರು ಬಾರಿ ಪ್ರಧಾನ ಮಂತ್ರಿಯಾಗಿದ್ದರು. ಆದರೆ, ನರೇಂದ್ರ ಮೋದಿ ದೊಡ್ಡ ಮಟ್ಟದ ವಿರೋದ ಪಕ್ಷಗಳು ಇದ್ದರೂ 3 ನೇ ಬಾರಿ ಪ್ರಧಾನಿಯಾಗಿದ್ದು ದೊಡ್ಡ ಸಾಧನೆ. ನೈರುತ್ಯ ಪದವೀಧರ ಕ್ಷೇತ್ರದ ಕಳೆದ 10ವರ್ಷಗಳ ಇತಿಹಾಸದಲ್ಲಿ ಪ್ರಥಮ ಪ್ರಾಶಸ್ತ್ಯ ಮತಗಳಿಂದ ಅತಿಹೆಚ್ಚು ಮತ ಪಡೆದು ಧನಂಜಯಸರ್ಜಿ ಅವರು ಗೆಲುವು ಸಾಧಿಸಿ ದ್ದಾರೆ. ಎಸ್.ಎಲ್.ಭೋಜೇಗೌಡರು ಸಹ ಮೊದಲ ಪ್ರಾಶಸ್ತ್ರ್ಯ ಮತಗಳಿಂದ ಗೆಲುವು ಸಾಧಿಸಿ 2ನೇ ಭಾರಿ ಶಿಕ್ಷಕರ ಕ್ಷೇತ್ರಕ್ಕೆ ಆಯ್ಕೆಯಾಗಿದ್ದಾರೆ ಎಂದರು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಆದರೆ ಒಂದು ವರ್ಷದೊಳಗೆ ಜನರಿಗೆ ಕಾಂಗ್ರೆಸ್ ಬೇಡವಾಗಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ನಾನು ಸೋತಿದ್ದರೂ ಪ್ರಸ್ತುತ ನಡೆದ ಎಲ್ಲಾ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು ನನಗೆ ಸಂತಸ ತಂದಿದೆ ಎಂದರು.ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮತದಾರರನ್ನು ತಮ್ಮ ಸೆಳೆಯಲು ಕಾಂಗ್ರೆಸ್ ಗ್ಯಾರಂಟಿ ಘೋಷಿಸಿತ್ತು. ಇದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಲೋಕಸಭಾ ಚುನಾವಣಾ ಫಲಿತಾಂಶಕ್ಕೂ ಗ್ಯಾರಂಟಿ ನಿಲ್ಲಿಸುವುದಕ್ಕೆ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್ ಶಾಸಕರೇ ಗ್ಯಾರಂಟಿ ಸ್ಥಗಿತಗೊಳಿಸಲು ಒತ್ತಾಯಿಸುತ್ತಿರುವುದು ಸರಿಯಲ್ಲ ಎಂದರು.ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವುದು ಐತಿಹಾಸಿಕ ದಿನವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗಿದೆ. ಜೆಡಿಎಸ್ ನ ಎಚ್.ಡಿ.ಕುಮಾರಸ್ವಾಮಿ ಅವರ ಕಾರ್ಯವನ್ನು ಪರಿಗಣಿಸಿ ಅವರ ಸೇವೆ ರಾಜ್ಯಕ್ಕೆ ಮಾತ್ರ ಸೀಮಿತವಾಗಿರದೆ ದೇಶಕ್ಕೆ ಲಭಿಸುವಂತಾಗ ಬೇಕೆಂದು ಕೇಂದ್ರ ಸಚಿವರನ್ನಾಗಿ ಮಾಡಿರುವುದಕ್ಕೆ ನರೇಂದ್ರ ಮೋದಿ ಅವರಿಗೆ ಚಿರಋಣಿಯಾಗಿದ್ದೇವೆ ಎಂದರು.
ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಎಚ್.ಎಂ.ಅರುಣ್ ಕುಮಾರ್ ಮಾತನಾಡಿ, ಪ್ರಸ್ತುತ ನಡೆದ ಚುನಾವಣೆ ಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ಡಿ.ಎನ್.ಜೀವರಾಜ್ ಶ್ರಮವಹಿಸಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಜನರ ಒಲವು ಕಳೆದುಕೊಂಡಿದ್ದು ಮುಂದಿನ ದಿನಗಳಲ್ಲಿ ಜೀವರಾಜ್ ಅವರನ್ನು ಶಾಸಕರಾಗಿ, ಸಚಿವರನ್ನಾಗಿ ಮಾಡಲು ಶ್ರಮಿಸುವುದಾಗಿ ತಿಳಿಸಿದರು.ಬಿಜೆಪಿ ಮುಖಂಡರಾದ ಎನ್.ಎಂ.ನಾಗೇಶ್, ಕೆಸವಿ ಮಂಜುನಾಥ್, ಲೋಕೇಶ್, ಅಶ್ವನ್, ಎಸ್.ಎಸ್. ಸಂತೋಷ್ ಕುಮಾರ್. ಎನ್.ಎಂ.ಕಾಂತರಾಜ್, ರಶ್ಮಿ ದಯಾನಂದ್, ಬಿ.ಎಸ್.ಆಶೀಶ್ ಕುಮಾರ್, ಫರ್ವೀಜ್, ಸುರಬಿರಾಜೇಂದ್ರ, ರೇಖಾ ಮಂಜುನಾಥ್, ಜೆಡಿಎಸ್ ಮುಖಂಡ ಕೆ.ಎನ್.ಶಿವದಾಸ್ ಮತ್ತಿತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.