ಸಾಮಾಜಿಕವಾಗಿ ಬೆರೆಯುವುದು ಮೆದುಳಿನ ಆರೋಗ್ಯಕ್ಕೆ ಉತ್ತಮ. ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಮೆದುಳಿನ ಆರೋಗ್ಯ ವೃದ್ಧಿಸುತ್ತದೆ ವ್ಯಾಯಾಮವು ಜ್ಞಾಪಕ ಶಕ್ತಿ ಮತ್ತು ಅರಿವನ್ನು ಸುಧಾರಿಸುತ್ತದೆ.

ಗದಗ: ಮೆದುಳಿನ ಅಸ್ವಸ್ಥತೆಗಳನ್ನು ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದು ತುಂಬಾ ಅವಶ್ಯಕವಾಗಿದ್ದು, ಯಾವುದೇ ನರಸಂಬಂಧಿ ರೋಗಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಜಿಲ್ಲಾ ಆಸ್ಪತ್ರೆಯಲ್ಲಿರುವ ಕರ್ನಾಟಕ ಮೆದುಳು ಉಪಕ್ರಮ ಚಿಕಿತ್ಸಾ ಕೇಂದ್ರದ ವೈದ್ಯರನ್ನು ನರರೋಗ ತಜ್ಞರನ್ನು ಸಂಪರ್ಕಿಸಬೇಕೆಂದು ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಅಧಿಕಾರಿ ಡಾ. ರಾಜೇಂದ್ರ ಸಿ. ಬಸರಿಗಿಡದ ತಿಳಿಸಿದರು.

ನಗರದ ತಾಲೂಕು ಆರೋಗ್ಯ ಅಧಿಕಾರಿಗಳ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಶ್ರಯದಲ್ಲಿ ಜಿಲ್ಲೆಯ ಫಾರ್ಮಸಿಸ್ಟ್ ಅಧಿಕಾರಿಗಳಿಗೆ ಜರುಗಿದ ಕರ್ನಾಟಕ ಮೆದುಳು ಉಪಕ್ರಮ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಸಾಮಾಜಿಕವಾಗಿ ಬೆರೆಯುವುದು ಮೆದುಳಿನ ಆರೋಗ್ಯಕ್ಕೆ ಉತ್ತಮ. ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಮೆದುಳಿನ ಆರೋಗ್ಯ ವೃದ್ಧಿಸುತ್ತದೆ ವ್ಯಾಯಾಮವು ಜ್ಞಾಪಕ ಶಕ್ತಿ ಮತ್ತು ಅರಿವನ್ನು ಸುಧಾರಿಸುತ್ತದೆ. ದೈಹಿಕ ಚಟುವಟಿಕೆಗಳು ಜ್ಞಾಪನ ಶಕ್ತಿಯನ್ನು ಹೆಚ್ಚಿಸುತ್ತವೆ. ಅರಿವನ್ನು ಚುರುಕುಗೊಳಿಸುವುದರಿಂದ ಮೆದುಳಿನ ಆರೋಗ್ಯ ಸುಧಾರಣೆ ಮಾಡಿಕೊಳ್ಳಬಹುದು ಎಂದರು.

ಆರೋಗ್ಯ ಇಲಾಖೆಯ ಜಿಲ್ಲಾ ಯೋಜನಾಧಿಕಾರಿ ಡಾ. ವೈ.ಕೆ. ಭಜಂತ್ರಿ ಮಾತನಾಡಿ, ಇಂದು ಮಕ್ಕಳು ಸೇರಿದಂತೆ ಪ್ರತಿಯೊಬ್ಬರೂ ಒತ್ತಡದಿಂದ ಬಳಲುತ್ತಿದ್ದಾರೆ. ದೈನಂದಿನ ಚಟುವಟಿಕೆಗಳಲ್ಲಿ ಧ್ಯಾನ, ಯೋಗ ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.ಕರ್ನಾಟಕ ಮೆದುಳು ಉಪಕ್ರಮ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಪ್ರವೀಣ ರೋಣದ ಮಾತನಾಡಿ, ತರಬೇತಿಯಲ್ಲಿ ಪಡೆದ ಜ್ಞಾನವನ್ನು ಆಶಾ ಕಾರ್ಯಕರ್ತೆಯರು ತಮ್ಮ ದಿನ ನಿತ್ಯದ ಆರೋಗ್ಯ ಸೇವೆಯಲ್ಲಿ ಉಪಯೋಗಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದರು. ಸಂಪನ್ಮೂಲ ವ್ಯಕ್ತಿಗಳಾದ ಡಾ. ಅಶ್ವಿನಿ ಕುರಿಯವರ ಹಾಗೂ ರವಿ ನಂದಿಹಾಳ, ಶ್ರೀಧರ್ ಅವರು ಮಾತನಾಡಿದರು. ಡಾ. ಪ್ರೀತಿ, ಸರೋಜಾ ಕಟ್ಟಿಮನಿ, ವೈ.ವೈ. ಹಕ್ಕಿ, ಬೂದೇಶ ಶಿದ್ದನಗೌಡರ, ಸುನೀಲ ಬದ್ದಿ ಸೇರಿದಂತೆ ಇತರರು ಇದ್ದರು. ಹಿರಿಯ ಫಾರ್ಮಸಿ ಅಧಿಕಾರಿ ದತ್ತಾತ್ರೇಯ ತಿರುಮಲೆ ಪ್ರಾರ್ಥಿಸಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಡಾ. ರಾಜೇಂದ್ರ ಎಸ್. ಗಡಾದ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರವೀಣ ರೋಣದ ವಂದಿಸಿದರು.