ಸಾರಾಂಶ
ಈ ಹಿಂದೆ ನೇಹಾ ಹಿರೇಮಠ ಹತ್ಯೆಯಾದಾಗಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ, ಅದ್ಯಾವುದೂ ಆಗಲಿಲ್ಲ. ಈ ಹತ್ಯೆಯ ಹೊಣೆಗಾರಿಕೆಯನ್ನು ಗೃಹ ಸಚಿವರೇ ಹೊರಬೇಕು ಎಂದು ವಿಪ ಸದಸ್ಯ ಪ್ರದೀಪ ಶೆಟ್ಟರ ಹೇಳಿದರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ರಾಜಾರೋಷವಾಗಿ ಮನೆಗೆ ನುಗ್ಗಿ ಯುವತಿ ಕೊಲೆ ಮಾಡುತ್ತಾರೆಂದರೆ ರಾಜ್ಯ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬ ಆತಂಕ ಮೂಡಿದೆ ಎಂದು ವಿಪ ಸದಸ್ಯ ಪ್ರದೀಪ ಶೆಟ್ಟರ ಕಳವಳ ವ್ಯಕ್ತಪಡಿಸಿದರು.ಅವರು ಇಲ್ಲಿನ ವೀರಾಪುರ ಓಣಿಯಲ್ಲಿರುವ ಮೃತ ಅಂಜಲಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಹಿಂದೆ ನೇಹಾ ಹಿರೇಮಠ ಹತ್ಯೆಯಾದಾಗಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ, ಅದ್ಯಾವುದೂ ಆಗಲಿಲ್ಲ. ಈ ಹತ್ಯೆಯ ಹೊಣೆಗಾರಿಕೆಯನ್ನು ಗೃಹ ಸಚಿವರೇ ಹೊರಬೇಕು. ಪೊಲೀಸ್ ಅಧಿಕಾರಿಗಳು ಇನ್ನು ಮುಂದಾದರೂ ಜಾಗೃತರಾಗಬೇಕಿದೆ ಎಂದರು.ಗಾಂಜಾ ನಶೆಯಲ್ಲಿ ಇಂತಹ ದುಷ್ಕೃತ್ಯಗಳು ನಡೆಯುತ್ತಿವೆ. ಪರವಾನಗಿ ಇಲ್ಲದೇ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದು ಬಂದ್ ಆಗಬೇಕು. ಅಂದಾಗ ಮಾತ್ರ ಅಹಿತಕರ ಘಟನೆಗಳಿಗೆ ಮುಕ್ತಿ ದೊರೆಯಲಿದೆ ಎಂದರು. ಪೊಲೀಸ್ ಅಧಿಕಾರಿಗಳ ವೈಫಲ್ಯದಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಆರೋಪಿಸಿದರು.