ಪಕ್ಷಗಾರರ ಮೂಲ ಸಮಸ್ಯೆಯನ್ನು ತಾಳ್ಮೆಯಿಂದ ಪೂರ್ಣವಾಗಿ ಆಲಿಸಿ, ಉಭಯ ಪಕ್ಷಗಾರರು ಒಪ್ಪುವ ರೀತಿಯಲ್ಲಿ ಸಂಧಾನದ ಮೂಲಕ ವ್ಯಾಜ್ಯಗಳನ್ನು ಬಗೆಹರಿಸಲು ಸಂಧಾನಕಾರರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು.

ಕನ್ನಡಪ್ರಭ ವಾರ್ತೆ ಗದಗ

ಪಕ್ಷಗಾರರ ಮೂಲ ಸಮಸ್ಯೆಯನ್ನು ತಾಳ್ಮೆಯಿಂದ ಪೂರ್ಣವಾಗಿ ಆಲಿಸಿ, ಉಭಯ ಪಕ್ಷಗಾರರು ಒಪ್ಪುವ ರೀತಿಯಲ್ಲಿ ಸಂಧಾನದ ಮೂಲಕ ವ್ಯಾಜ್ಯಗಳನ್ನು ಬಗೆಹರಿಸಲು ಸಂಧಾನಕಾರರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ನಾಗವೇಣಿ ಸಲಹೆ ನೀಡಿದರು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ಮಧ್ಯಸ್ಥಿಕೆ ಕೇಂದ್ರ, ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಧ್ಯಸ್ಥಿಕೆ ಕೇಂದ್ರ ಹಾಗೂ ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಗದಗ ಜಿಲ್ಲಾ ನ್ಯಾಯಾಲಯದ ಆವರಣದ ಎಡಿಆರ್ ಕಟ್ಟಡದಲ್ಲಿ ಆಯೋಜಿಸಲಾಗಿದ್ದ ಗದಗ ಮತ್ತು ಧಾರವಾಡ ಜಿಲ್ಲೆಗಳ ನೂತನ ಮಧ್ಯಸ್ಥಿಕೆದಾರರ 5 ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯವಾಗಿ ಕೌಟುಂಬಿಕ ಕಲಹ ಹಾಗೂ ಪಾಲು ವಿಭಾಗದ ವ್ಯಾಜ್ಯಗಳಲ್ಲಿ ಎರಡೂ ಕಡೆಯವರ ಮಾತುಗಳನ್ನು ಗಣನೆಗೆ ತೆಗೆದುಕೊಂಡು, ಸಂಧಾನದ ಮೂಲಕ ಸೌಹಾರ್ದಯುತವಾಗಿ ಸಮಸ್ಯೆ ಇತ್ಯರ್ಥಪಡಿಸಲು ಮುಂದಾಗಬೇಕು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎಂ.ಎ. ಸಂಗನಾಳ ಮಾತನಾಡಿ, ಉಭಯ ಪಕ್ಷಗಾರರ ಮನವೊಲಿಸಿ ಯಾವ ರೀತಿ ಸಂಧಾನ ಮಾಡಿದರೆ ಇಬ್ಬರಿಗೂ ಒಪ್ಪಿಗೆಯಾಗುತ್ತದೆ ಎಂಬುದನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಖಾಯಂ ಜನತಾ ನ್ಯಾಯಾಲಯದ ಅಧ್ಯಕ್ಷೆ ಸುವರ್ಣಾ ಕೆ. ಮಿರ್ಜಿ ಮಾತನಾಡಿ, 5 ದಿನಗಳ ತರಬೇತಿಯ ಸದುಪಯೋಗ ಪಡೆದುಕೊಂಡು ವ್ಯಾಜ್ಯಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸುವಂತೆ ನೂತನ ಮಧ್ಯಸ್ಥಿಕೆದಾರರಿಗೆ ಕರೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ, ಸಂಪನ್ಮೂಲ ವ್ಯಕ್ತಿಗಳಾದ ಕರ್ನಾಟಕ ಮಧ್ಯಸ್ಥಿಕೆ ಕೇಂದ್ರದ ಹಿರಿಯ ತರಬೇತಿದಾರ ಜಿ. ಲಕ್ಷ್ಮೀಶ ರಾವ್, ಸುಧಾ ಎಸ್.ಎನ್., ವೀಕ್ಷಕರು ಹಾಗೂ ಸಹ ತರಬೇತಿದಾರರಾದ ಎಸ್.ಎಚ್. ಮನೂರ್, ಬೆಳಗಾವಿ ಖಾಯಂ ಜನತಾ ನ್ಯಾಯಾಲಯದ ಸದಸ್ಯೆ ಚೈತನಾ ಎಸ್. ಮಠಪತಿ ಉಪಸ್ಥಿತರಿದ್ದರು. ಸಹಾಯಕ ಕಾನೂನು ನೆರವು ಅಭಿರಕ್ಷಕ ಗುರುರಾಜ ಗೌರಿ ಸ್ವಾಗತಿಸಿದರು. ಸುಧಾ ನಾಯ್ಕರ್ ಪ್ರಾರ್ಥಿಸಿದರು. ಬಿ.ಎಂ. ಕುಕನೂರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ಕೌಟುಂಬಿಕ ಕಲಹ ಹಾಗೂ ಆಸ್ತಿ ವ್ಯಾಜ್ಯಗಳಲ್ಲಿ ಉಭಯ ಪಕ್ಷಗಾರರ ಮೂಲ ಸಮಸ್ಯೆಯನ್ನು ಆಲಿಸಿ, ಎರಡೂ ಕಡೆಯವರಿಗೆ ಒಪ್ಪಿಗೆಯಾಗುವ ರೀತಿಯಲ್ಲಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸುವುದು ಮಧ್ಯಸ್ಥಿಕೆದಾರರ ಮುಖ್ಯ ಜವಾಬ್ದಾರಿಯಾಗಿದೆ.

ನಾಗವೇಣಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಗದಗ