ದೇಶದಲ್ಲಿ ನಗರೀಕರಣ ವೇಗವಾಗಿ ಹೆಚ್ಚುತ್ತಿದ್ದು, ಮೂಲಸೌಕರ್ಯ ಕಲ್ಪಿಸಲು ವ್ಯವಸ್ಥಿತ ಯೋಜನೆಗಳ ಅಗತ್ಯವಿದೆ.
ವಸತಿ ವಿನ್ಯಾಸ, ಉದ್ಯಾನವನ, ಪ್ರಾಧಿಕಾರ ಕಚೇರಿ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ
ಕನ್ನಡಪ್ರಭ ವಾರ್ತೆ ಗದಗದೇಶದಲ್ಲಿ ನಗರೀಕರಣ ವೇಗವಾಗಿ ಹೆಚ್ಚುತ್ತಿದ್ದು, ಮೂಲಸೌಕರ್ಯ ಕಲ್ಪಿಸಲು ವ್ಯವಸ್ಥಿತ ಯೋಜನೆಗಳ ಅಗತ್ಯವಿದೆ. ಗದಗ ಬೆಟಗೇರಿ ನಗರವನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿ ಸುಂದರ, ಮಾದರಿ ನಗರವನ್ನಾಗಿಸುವ ಜೊತೆಗೆ ಜಿಲ್ಲೆಗೆ ಮಾಲಿನ್ಯರಹಿತ ಕೈಗಾರಿಕೆಗಳನ್ನು ತರುವ ಮೂಲಕ ಆರ್ಥಿಕ ಪ್ರಗತಿಗೆ ಒತ್ತು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬುಧವಾರ ನಗರದ ಕಬಾಡರ ಲೇಔಟ್ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ₹27 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯ ಬರ ಪರಿಸ್ಥಿತಿ ಎದುರಿಸಲು ಗ್ಯಾರಂಟಿ ಯೋಜನೆಗಳು ಬಡವರಿಗೆ ನೆರವಾಗಿವೆ. ಅಧಿಕಾರಿಗಳು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು. ನಿರ್ಲಕ್ಷ್ಯ ತೋರಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, 18.19 ಎಕರೆ ಪ್ರದೇಶದಲ್ಲಿ ₹19.69 ಕೋಟಿ ವೆಚ್ಚದ ವಸತಿ ವಿನ್ಯಾಸ, ₹5 ಕೋಟಿ ವೆಚ್ಚದಲ್ಲಿ ಪ್ರಾಧಿಕಾರದ ನೂತನ ಕಚೇರಿ ಹಾಗೂ ₹4 ಕೋಟಿ ವೆಚ್ಚದಲ್ಲಿ 18 ಉದ್ಯಾನವನಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಸಿಂಗಟಾಲೂರು ಪೈಪ್ಲೈನ್ ಬದಲಾವಣೆಗೆ ₹59 ಕೋಟಿ, ಓವರ್ಹೆಡ್ ಟ್ಯಾಂಕ್ಗಳಿಗೆ ₹29 ಕೋಟಿ ಹಾಗೂ ಪಾಪನಾಶಿ ನೀರು ಸಂಗ್ರಹಣೆಗೆ ₹21 ಕೋಟಿ ಅನುದಾನದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, 2027ರ ಅಂತ್ಯಕ್ಕೆ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದರು.
ಪ್ರಾಧಿಕಾರದ ಆಯುಕ್ತ ಎಸ್.ಸಿ. ಬೇವೂರ ಸ್ವಾಗತಿಸಿದರು. ಪ್ರೊ. ಬಾಹುಬಲಿ ಜೈನರ್ ನಿರೂಪಿಸಿದರು. ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಡಿ.ಆರ್. ಪಾಟೀಲ, ಎಂಎಲ್ಸಿ ಎಸ್.ವಿ. ಸಂಕನೂರ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಡಿಸಿ ಸಿ.ಎನ್. ಶ್ರೀಧರ, ಸಿಇಒ ಮುಕುಲ್ ಜೈನ್, ಎಸ್ಪಿ ಮಿಥುನ್, ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ಪ್ರಾಧಿಕಾರದ ಸದಸ್ಯರಾದ ಬಸವರಾಜ ಎಂ. ಕಡೇಮನಿ, ಮಲ್ಲಿಕಾರ್ಜುನ ಸಿ. ಐಲಿ, ಬಸವರಾಜ ಎನ್. ಯರನಾಳ, ಜಾನಕಿ ಎಸ್. ಮಲ್ಲಾಪೂರ, ಚಂದ್ರಶೇಖರ ತಡಸದ ಹಾಗೂ ನಗರಸಭೆ ಸದಸ್ಯರು ಉಪಸ್ಥಿತರಿದ್ದರು.