ಸಾರಾಂಶ
ಮಾಜಿ ಸಚಿವ ಎಸ್.ಎ.ರವೀಂದ್ರನಾಥ್‌ರ ಜನ್ಮದಿನಾಚರಣೆ ಸಮಾರಂಭ ಉದ್ಘಾಟಿಸಿ ಬಿಎಸ್‌ವೈ ಹೇಳಿಕೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯಾದ್ಯಂತ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರತಿನಿತ್ಯ 2-3 ತಾಲೂಕುಗಳಲ್ಲಿ ಪ್ರವಾಸ ಕೈಗೊಳ್ಳುವ ಮೂಲಕ ಪಕ್ಷ ಸಂಘಟಿಸಿ, ಬಿಜೆಪಿಯನ್ನು ಬಲಪಡಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದ ಸುಧಾ ವೀರೇಂದ್ರ ಪಾಟೀಲ ಸಮುದಾಯ ಭವನದಲ್ಲಿ ಮಂಗಳವಾರ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್‌ರ ಜನ್ಮದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶೀಘ್ರವೇ ರಾಜ್ಯಾದ್ಯಂತ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ನಿತ್ಯ 2-3 ತಾಲೂಕುಗಳಲ್ಲಿ ಪ್ರವಾಸ ಕೈಗೊಂಡು, ಪಕ್ಷ ಸಂಘಟಿಸುವೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮತ್ತೆ ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುವ ಮೂಲಕ ಅಧಿಕಾರಕ್ಕೆ ತರಲು ಶ್ರಮಿಸುವೆ. ಕಳೆದ ವಿಧಾನಸಭೆ ಚುನಾವಣೆ ಸೋಲಿನಿಂದಾಗಿ ನಮ್ಮ ಮುಖಂಡರು, ಕಾರ್ಯಕರ್ತರು ನೋವುಂಡಿದ್ದಾರೆ. ಮಾಜಿ ಸಚಿವರು, ಮಾಜಿ ಶಾಸಕರು ಅಂತಾ ಕರೆಯುವುದಕ್ಕೂ ನನಗೆ ನೋವಾಗುತ್ತದೆ. ಹಿಂದೆ ಇದ್ದಂತೆ ನೀವೆಲ್ಲರೂ ಶಾಸಕರಾಗಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಅವರು ತಿಳಿಸಿದರು.ಹಿರಿಯ ನಾಯಕರಲ್ಲೊಬ್ಬರಾದ ಎಸ್.ಎ.ರವೀಂದ್ರನಾಥರಿಂದ ಕಲಿಯುವುದು ಸಾಕಷ್ಟಿದೆ. ಚುನಾವಣೆ ಅಧಿಕಾರಕ್ಕಾಗಿ ರಾಜಕಾರಣಕ್ಕೆ ರವೀಂದ್ರನಾಥ ಬಂದವರಲ್ಲ. ಜನರ ಸೇವೆ ಮೂಲಕ ಬೆಳೆದು ಬಂದ ಮುತ್ಸದ್ದಿ ನಾಯಕ. ಇಂತಹ ಹಿರಿಯ ನಾಯಕರ ಅನುಭವ ಪಡೆದು, ಜಿಲ್ಲೆಯಲ್ಲಿ ಬಿಜೆಪಿಯನ್ನು ಸಂಘಟಿಸುವ ಮೂಲಕ ಸದೃಢಗೊಳಿಸಬೇಕು. ಹಿಂದಿನ ಚುನಾವಣೆಗಳ ಸೋಲಿನ ನೋವನ್ನು ಮರೆತು, ಮುಂದಿನ ಚುನಾವಣೆಗಳಿಗೆ ಸಜ್ಜಾಗಿ ಎಂದು ಅವರು ಕಿವಿಮಾತು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಎಸ್.ಎ.ರವೀಂದ್ರನಾಥರನ್ನು ಯಡಿಯೂರಪ್ಪ ಅಭಿನಂದಿಸಿ, ಸನ್ಮಾನಿಸಿದರು. ರತ್ನಮ್ಮ ರವೀಂದ್ರನಾಥ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಮಾಜಿ ಶಾಸಕರಾದ ಮಾಡಾಳ್ ವಿರುಪಾಕ್ಷಪ್ಪ, ಎಚ್.ಪಿ.ರಾಜೇಶ, ಎಂ.ಬಸವರಾಜ ನಾಯ್ಕ, ಪ್ರೊ.ಎನ್.ಲಿಂಗಣ್ಣ, ಅರುಣಕುಮಾರ ಪೂಜಾರ, ಅಪೂರ್ವ ಹೊಟೆಲ್ ಸಮೂಹಗಳ ಮುಖ್ಯಸ್ಥ, ಹಿರಿಯ ಹೊಟೆಲ್ ಉದ್ಯಮಿ ಅಣಬೇರು ರಾಜಣ್ಣ, ಬೆಂಗಳೂರು ಬಿಜೆಪಿ ಮುಖಂಡ ಮರಿಸ್ವಾಮಿ, ಮುಖಂಡರಾದ ಮಾಡಾಳ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ, ಬಿ.ಎಂ.ಸತೀಶ ಕೊಳೇನಹಳ್ಳಿ, ಆಲೂರು ಲಿಂಗರಾಜ, ಧನಂಜಯ ಕಡ್ಲೇಬಾಳು, ಅನಿಲಕುಮಾರ, ಐರಣಿ ಅಣ್ಣೇಶ, ಎಲ್.ಎನ್.ಕಲ್ಲೇಶ, ಕೆ.ಎಂ.ಸುರೇಶ, ಸುಧಾ ಪಾಟೀಲ್, ವೀಣಾ ಇತರರು ಇದ್ದರು.