ಸಾರಾಂಶ
4 ದಶಕಗಳ ಹಿಂದೆ ಅಥಣಿಯಲ್ಲಿ ದೇವದಾಸಿ ಮಕ್ಕಳ ಶಿಕ್ಷಣಕ್ಕಾಗಿ ಮತ್ತು ಪುನರ್ವಸತಿಗಾಗಿ ಶಾಲೆ ಪ್ರಾರಂಭಿಸಿ ಆ ಮಕ್ಕಳ ಸಬಲೀಕರಣ ಮತ್ತು ಸಾಮಾಜಿಕ ಗೌರವ ತರುವ ಕಾರ್ಯ ನಿರಂತರವಾಗಿ ಮಾಡುತ್ತಿದೆ.
ಧಾರವಾಡ:
ದೇವದಾಸಿ ಪದ್ಧತಿ ಸಮಾಜಕ್ಕೆ ಅಂಟಿಕೊಂಡ ದೊಡ್ಡ ಕಳಂಕ. ದೇವದಾಸಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮನ ಪರಿವರ್ತಿಸಿ ಅವರ ಮಕ್ಕಳಿಗೆ ಶಿಕ್ಷಣ ಹಾಗೂ ಸ್ವಯಂ ಉದ್ಯೋಗ ತರಬೇತಿ ನೀಡಲು ಅಥಣಿಯಲ್ಲಿ ದೇವದಾಸಿ ವಿಮೋಚನಾ ಸಂಸ್ಥೆ ಪ್ರಾರಂಭಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಬಿ. ಎಲ್. ಪಾಟೀಲ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ `ಧರೆಗೆ ದೊಡ್ಡವರು’ ಕಾರ್ಯಕ್ರಮದಲ್ಲಿ ಅಂಜುಮನ್ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, 4 ದಶಕಗಳ ಹಿಂದೆ ಅಥಣಿಯಲ್ಲಿ ದೇವದಾಸಿ ಮಕ್ಕಳ ಶಿಕ್ಷಣಕ್ಕಾಗಿ ಮತ್ತು ಪುನರ್ವಸತಿಗಾಗಿ ಶಾಲೆ ಪ್ರಾರಂಭಿಸಿ ಆ ಮಕ್ಕಳ ಸಬಲೀಕರಣ ಮತ್ತು ಸಾಮಾಜಿಕ ಗೌರವ ತರುವ ಕಾರ್ಯ ನಿರಂತರವಾಗಿ ಮಾಡುತ್ತಿದೆ. ಆ ಶಾಲೆಯಲ್ಲಿ 750 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ದಾಖಲೆ ಎಂದರು.
ಈ ಶಾಲೆಯಲ್ಲಿ 40ಕ್ಕಿಂತ ಹೆಚ್ಚು ಮಕ್ಕಳಿಗೆ ಸ್ವಯಂ ಉದ್ಯೋಗ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಕಾರ್ಯಕ್ಕೆ ಅನೇಕರು ಕೈಜೋಡಿಸಿದ್ದಾರೆ. ಅನೇಕ ಮಠಾಧೀಶರು, ರಾಜಕಾರಣಿಗಳು ಸಹ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದುಂಟು. ದೇವದಾಸಿ ಪದ್ಧತಿ ನಿವಾರಿಸಲು ಯುವಕರು ಬೀದಿ ನಾಟಕ ಆಯೋಜಿಸಿ ಸಮಾಜ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕು ಎಂದು ಕರೆ ನೀಡಿದರು.ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ, ಬಿ.ಎಲ್. ಪಾಟೀಲರ ಬದುಕು ಮತ್ತು ಬರಹ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಶಂಭಯ್ಯ ಹಿರೇಮಠ ನೇತೃತ್ವದಲ್ಲಿ ಹರ್ಲಾಪುರದ ಸಿವೈಸಿಡಿ ಕಲಾ ತಂಡವು ವಿದ್ಯಾರ್ಥಿಗಳಲ್ಲಿ ನಾಡು-ನುಡಿಯ ಬಗ್ಗೆ ಅಭಿಮಾನ ಮೂಡಿಸುವ ಗೀತೆಗಳನ್ನು ಪ್ರಸ್ತುತಪಡಿಸಿದರು. ಶಂಕರ ಕುಂಬಿ, ಸತೀಶ ತುರಮರಿ, ಪ್ರೊ. ಇಸ್ಮಾಯಿಲ್ ಕೋಟೆಕಲ್ಲ ಇದ್ದರು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.