ಸಾರಾಂಶ
ದೇವದಾಸಿಯರ ಸಮೀಕ್ಷೆ ಸಂದರ್ಭ ಸರ್ಕಾರ ವಯೋಮಿತಿ ನಿಗದಿಪಡಿಸಬಾರದು ಎಂದು ದೇವದಾಸಿಯರ ಕುರಿತ ಸಾಕ್ಷ್ಯಚಿತ್ರ ‘ಗಾಡ್ಸ್ ವೈಫ್ಸ್, ಮೆನ್ಸ್ ಸ್ಲೇವ್ಸ್’ ಸಾಕ್ಷ್ಯಚಿತ್ರದ ನಿರ್ದೇಶಕಿ, ಉಪ್ಪಿನಂಗಡಿ ಇಳಂತಿಲ ಪೂರ್ಣಿಮಾ ರವಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿದೇವದಾಸಿಯರ ಸಮೀಕ್ಷೆ ಸಂದರ್ಭ ಸರ್ಕಾರ ವಯೋಮಿತಿ ನಿಗದಿಪಡಿಸದೆ, ಎಲ್ಲ ಸಂತ್ರಸ್ತರಿಗೂ ನ್ಯಾಯ ಒದಗಿಸಬೇಕು ಎಂದು ದೇವದಾಸಿಯರ ಕುರಿತ ಸಾಕ್ಷ್ಯಚಿತ್ರ ‘ಗಾಡ್ಸ್ ವೈಫ್ಸ್, ಮೆನ್ಸ್ ಸ್ಲೇವ್ಸ್’ ಸಾಕ್ಷ್ಯಚಿತ್ರದ ನಿರ್ದೇಶಕಿ, ಉಪ್ಪಿನಂಗಡಿ ಇಳಂತಿಲ ಪೂರ್ಣಿಮಾ ರವಿ ಸರ್ಕಾರವನ್ನು ಆಗ್ರಹಿಸಿದ್ದಾರೆ.2024-25ನೇ ಸಾಲಿನ ಆಯವ್ಯಯ ಭಾಷಣ ಪ್ರಕಾರ ಇದೀಗ ಮಾಜಿ ದೇವದಾಸಿ ಮಹಿಳೆಯರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಕುರಿತಂತ ನಿಖರ ಮಾಹಿತಿ ಸಂಗ್ರಹಿಸಿ, ಪುನರ್ವಸತಿ ಕಲ್ಪಿಸಲು ಮರು ಸಮೀಕ್ಷೆ ನಡೆಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರದಂದ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದರ ಜೊತೆಗೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ಜೂ.23 ರಂದು ಹೊರಡಿಸಿದ ನಿರ್ದೇಶನದ ಪ್ರಕಾರ, ಅಕ್ಟೋಬರ್ ಅಂತ್ಯದ ಒಳಗೆ ಈ ಸಮೀಕ್ಷೆ ಮುಗಿಯಲಿದೆ.
ಈ ಹಿಂದೆ 1982 , 1993-94 ಮತ್ತು 2007-08 ರಲ್ಲಿ ನಡೆಸಲಾಗಿದ್ದ ದೇವದಾಸಿಯರ ಸಮೀಕ್ಷೆ ಅಪೂರ್ಣವಾಗಲು ಕಾರಣವಾದ ಅಂಶವೆಂದರೆ, ಅದರಲ್ಲಿ ವಯೋಮಿತಿ ನಿಗದಿ ಮಾಡಿದ್ದು. ಇದರಿಂದಾಗಿ ಸಣ್ಣ ವಯಸ್ಸಿನ ದೇವದಾಸಿಯರು ಸಮೀಕ್ಷೆಯಿಂದ ಹೊರಗುಳಿಯುವಂತಾಗಿ, ಅವರು ಸಮಸ್ಯೆ ಎದುರಿಸುವಂತಾಗಿತ್ತು ಎಂದು ಪೂರ್ಣಿಮಾ ಬೊಟ್ಟು ಮಾಡಿದ್ದಾರೆ. ಇದೀಗ ಮತ್ತೆ, ರಾಜ್ಯ ಸರ್ಕಾರ ಇದೆ ತಪ್ಪು ಮಾಡುತ್ತಿದೆ. ಈ ಬಾರಿ ಕೂಡ 41 ವಯೋಮಿತಿ ಮೀರಿದ ದೇವದಾಸಿಯರ ಸಮೀಕ್ಷೆಗೆ ನಿರ್ಧರಿಸಲಾಗಿದೆ. ವಾಸ್ತವಾಗಿ, ಅತಿ ಚಿಕ್ಕ ಪ್ರಾಯದಲ್ಲಿ ದೇವದಾಸಿಯರಾದ ಹೆಣ್ಣು ಮಕ್ಕಳಿಗೆ ಇನ್ನು ಕೂಡ 40 ವರ್ಷ ತುಂಬಿರಲಿಲ್ಲ. ಇದರ ಜೊತೆಗೆ, ಕದ್ದು ಮುಚ್ಚಿ ಇಂದು ಕೂಡಾ ಚಿಕ್ಕ ಮಕ್ಕಳಿಗೆ ಮುತ್ತು ಕಟ್ಟಲಾಗುತ್ತಿದೆ ಅನ್ನುವ ದೂರುಗಳಿವೆ. ಈ ಹಿನ್ನಲೆಯಲ್ಲಿ ಈ ಬಾರಿಯ ಸಮೀಕ್ಷೆಯಲ್ಲಿ ಕೂಡಾ ವಯೋಮಿತಿ ನಿಗದಿಪಡಿಸಿದರೆ, ಅದು ದೇವದಾಸಿ ಪದ್ದತಿಯ ಸಂತ್ರಸ್ತರಿಗೆ ಅನ್ಯಾಯವೆಸಗಲಿದೆ ಆದ್ದರಿಂದ ಸರ್ಕಾರ ವಯೋಮಿತಿ ನಿರ್ಬಂಧ ಸಡಿಸಲಿಸಬೇಕು ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.