ಸಾರಾಂಶ
ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆ ಮತ್ತು ನಿಲುವು ಖಂಡಿಸಿ, ಸಂವಿಧಾನ ಸಂರಕ್ಷಣಾ ಸಮಿತಿ ಕರೆ ನೀಡಿದ್ದ ದೇವದುರ್ಗ ಬಂದ್ ಮಂಗಳವಾರ ಸಂಪೂರ್ಣ ಯಶಸ್ವಿಯಾಯಿತು.
ಕನ್ನಡಪ್ರಭ ವಾರ್ತೆ ದೇವದುರ್ಗ
ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಪ್ರಜಾ ಪ್ರಭುತ್ವ ದೇಶದ ಪವಿತ್ರ ಗ್ರಂಥವಾಗಿರುವ ಸಂವಿಧಾನದ ಕುರಿತು ಹಗುರವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತಶಾ ಹೇಳಿಕೆ ಮತ್ತು ನಿಲುವು ಖಂಡಿಸಿ,ಸಂವಿಧಾನ ಸಂರಕ್ಷಣಾ ಸಮಿತಿ ಕರೆ ನೀಡಿದ್ದ ದೇವದುರ್ಗ ಬಂದ್ ಮಂಗಳವಾರ ಸಂಪೂರ್ಣ ಯಶಸ್ವಿಯಾಯಿತು.ಬಂದ್ ಕರೆನೀಡಿದ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಬಸ್ ನಿಲ್ದಾಣದಲ್ಲಿ ಸೌಲಭ್ಯವಿಲ್ಲದೇ ಪ್ರಯಾಣಿಕರು ಪರದಾಡುವಂತಾಯಿತು. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಜಾಲಹಳ್ಳಿ,ಸಿರವಾರ ಕ್ರಾಸ್ ಬಳಿ ಹಾಗೂ ಶಹಪೂರ ತಾಲೂಕಿನ ಕೋಳೂರ ಬಳಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿದ್ದರು. ಸರ್ಕಾರಿ ಕಚೇರಿಗಳು ಜನರಿಲ್ಲದೇ ಬಿಕೋ ಎನ್ನುವಂತಿದ್ದವು. ಪಟ್ಟಣದಲ್ಲಿ ಎಲ್ಲಾ ಅಂಗಡಿ-ಮುಂಗಟ್ಟುಗಳು ಬಂದ್ ಮಾಡಲ್ಪಟ್ಟಿದ್ದು,ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು.ಪಟ್ಟಣದ ಜಾಲಹಳ್ಳಿ ವೃತ್ತಿದಿಂದ ಮಿನಿವಿಧಾನಸೌಧ, ಬಸವೇಶ್ವರ ವೃತ್ತ, ಮಹತ್ಮಾ ಗಾಂಧಿ ವೃತ್ತ ರಸ್ತೆ ಮಾರ್ಗದಲ್ಲಿ ಬೃಹತ್ ರ್‍ಯಾಲಿ ನಡೆಸಿ, ಗೃಹ ಸಚಿವ ಅಮಿತ್ ಶಾ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನಾಕಾರರು ಭಾರಿ ಬಹಿರಂಗ ಸಭೆ ನಡೆಸಿದರು.ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ್ ಇಟಗಿ ಹಾಗೂ ವಿವಿಧ ಸಂಘಟನೆಗಳ ಮುಖಂಡರಾದ ಎಂ.ಆರ್.ಭೇರಿ, ಹನುಮಂತ ಮನ್ನಾಪೂರಿ, ನರಸಣ್ಣ ನಾಯಕ, ಹನುಮಂತ್ರಾಯ ಆಕಳಕುಂಪಿ, ಮಲ್ಲಯ್ಯ ಕಟ್ಟೀಮನಿ, ರಂಗಮ್ಮ ಕೆ. ಇರಬಗೇರಾ, ರಮೇಶ ರಾಠೋಡ, ಎನ್.ಲಿಂಗಪ್ಪ ಅವರು ಕೋಮು ವಿಚಾರಗಳನ್ನೇ ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿರುವ ಬಿಜೆಪಿ ಮುಖಂಡರ ವಿಚಾರಗಳು, ಹೇಳಿಕೆಗಳು ಪ್ರಜಾಪ್ರಭುತ್ವ ದೇಶಕ್ಕೆ ಮಾರಕವಾಗಿವೆ. ಇದು ಅತಿರೇಕವಾಗುತ್ತಿದೆ. ಸಂವಿಧಾನದ ತಿದ್ದುಪಡಿ, ತಿರುಚುವುದು, ಅವಹೇಳನ ಮಾಡುವುದು ಈ ನಡೆಯಿಂದ ಅಥವಾ ವಿಚಾರಗಳಿಂದ ಕೂಡಲೇ ಬಿಜೆಪಿಗರು ಹೊರಬೇಕು. ಇದೇ ರೀತಿ ಮುಂದುವರೆದರೆ ದೇಶದಲ್ಲಿ ಅಶಾಂತಿಗೆ ಬಿಜೆಪಿಯೇ ನೇರ ಹೊಣೆ ಹೊರಬೇಕಾಗುತ್ತದೆ ಎಂದರು.ಸರ್ವ ಸಮುದಾಯಗಳ, ಸರ್ವ ಧರ್ಮೀಯರ ಹಾಗೂ ದೇಶದ ಪ್ರತಿ ಪ್ರಜೆಗೆ ಸಮಾನತೆ, ಸಮಬಾಳು, ಸಾಮಾಜಿಕ ನ್ಯಾಯ ನೀಡುವ ಸಂಕಲ್ಪ ಇಟ್ಟುಕೊಂಡು, ಹಲವಾರು ದೇಶಗಳ ಸಂವಿಧಾನಗಳ ಅಧ್ಯಯನ, ಅನೇಕ ವಿದ್ವಾಂಸರ ಅಭಿಪ್ರಾಯಗಳನ್ನು ಸಂಗ್ರಹಿಸಿ ಡಾ.ಬಿ.ಆರ್.ಅಂಬೇಡ್ಕರ್‌ರವರು ರಚಿಸಿರುವ ಭಾರತದ ಸಂವಿಧಾನ ಇಡೀ ವಿಶ್ವವೇ ಪ್ರೀತಿಯಿಂದ ಅಪ್ಪಿಕೊಂಡಿದೆ. ಪವಿತ್ರ ಗ್ರಂಥ ಎಂಬ ಖ್ಯಾತಿಗೆ ಒಳಗಾಗಿದೆ. ಆದರೆ ಜವಾಬ್ದಾರಿ ಹುದ್ದೆಯಲ್ಲಿದ್ದುಕೊಂಡು ಅಭದ್ರತೆ ಮತ್ತು ಅಶಾಂತಿ ಮೂಡಿಸುವ ಉದ್ದೇಶದಿಂದ ಹಗುರವಾಗಿ ಮಾತನಾಡಿದರೆ. ದೇಶದಲ್ಲಿ ರಕ್ತಕ್ರಾಂತಿಯಾದೀತು ಎಂದು ಎಚ್ಚರಿಸಿದರು.ಬಂದ್ ಹೋರಾಟದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ರಂಗಪ್ಪ ಗೋಸುಲ್, ಸಂಘಟನೆಗಳ ಮುಖಂಡರಾದ ವಿಶ್ವನಾಥ ಬಲ್ಲಿದವ, ಮೋಹನ ಬಲ್ಲಿದವ, ಮಹಾಂತೇಶ ಭವಾನಿ, ರಂಗಪ್ಪ ಕೋತಿಗುಡ್ಡ, ಲಿಂಗಪ್ಪ ಬೆಲ್ಲದವರ್, ರಾಜಪ್ಪ ಗಬ್ಬೂರು, ಕ್ರಾಂತಿಕುಮಾರ, ಬೊಮ್ಮನಾಳ, ಗೂಳಪ್ಪ ಹೆಮನೂರ, ಪುರಸಭೆ ಅಧ್ಯಕ್ಷೆ ಮಲ್ಲಪ್ಪ ಶಾಂತಪ್ಪ ಹೆಂಬೆರಾಳ, ಸದಸ್ಯರಾದ ಶರಣಗೌಡ ಬಕ್ರಿ, ಮಾನಪ್ಪ ಮೇಸ್ತ್ರಿ, ಮುಖಂಡರಾದ ಶರಣಗೌಡ ಕಮತಗಿ, ಫಜುದುಲ್ಲಾ ಸಾಜೀದ್, ಗುಲಾಮ್ಮ ಹಬೂಬ, ಅಬ್ದುಲ್ ಅಜೀಜ್, ಮೌನೇಶ ಗಾಣದಾಳ, ಯಲ್ಲನಗೌಡ ಹಾಗೂ ಇತರರು ಇದ್ದರು.---07ಕೆಪಿಡಿವಿಡಿ01: ದೇವದುರ್ಗ ಸಂವಿಧಾನ ಸಂರಕ್ಷಣಾ ಸಮಿತಿ ಬಂದ್ ಹೋರಾಟಕ್ಕೆ ಕರೆ ನೀಡಿದ್ದರಿಂದ ಸಾರಿಗೆ ಸೇವೆ ಸ್ಥಗಿತಗೊಂಡಿದ್ದರಿಂದ ಪಟ್ಟಣದ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು.07ಕೆಪಿಡಿವಿಡಿ02: ದೇವದುರ್ಗ ಸಂವಿಧಾನ ಸಂರಕ್ಷಣಾ ಸಮಿತಿ ಕರೆ ನೀಡಿದ್ದ ಬಂದ್ ಹೋರಾಟ ಹಿನ್ನೆಲೆಯಲ್ಲಿ ಬೃಹತ್ ಪ್ರತಿಭಟನಾ ರ್‍ಯಾಲಿಯನ್ನು ನಡೆಸಲಾಯಿತು.