ಸಾರಾಂಶ
ಕಲಬುರಗಿ ಪಟ್ಟಣ ಕ್ರಾಸ್‌ನಿಂದ ಸ್ಟೇಷನ್ ಗಾಣಗಾಪುರ ಮಾರ್ಗವಾಗಿ ದೇವಳ ಗಾಣಗಾಪುರಕ್ಕೆ ಸಂಚರಿಸುವ ಭಕ್ತರಿಗೆ ಮತ್ತು ಸ್ಥಳೀಯ ಗ್ರಾಮಸ್ಥರಿಗೆ ಹದಗೆಟ್ಟ ರಸ್ತೆಯಿಂದ ತೀವ್ರ ಸಂಕಷ್ಟ ಎದುರಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಪಟ್ಟಣ ಕ್ರಾಸ್‌ನಿಂದ ಸ್ಟೇಷನ್ ಗಾಣಗಾಪುರ ಮಾರ್ಗವಾಗಿ ದೇವಳ ಗಾಣಗಾಪುರಕ್ಕೆ ಸಂಚರಿಸುವ ಭಕ್ತರಿಗೆ ಮತ್ತು ಸ್ಥಳೀಯ ಗ್ರಾಮಸ್ಥರಿಗೆ ಹದಗೆಟ್ಟ ರಸ್ತೆಯಿಂದ ತೀವ್ರ ಸಂಕಷ್ಟ ಎದುರಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.ಪಟ್ಟಣ ಕ್ರಾಸ್‌ನಿಂದ ಮದ್ರಾ(ಬಿ) ದಾರಿಯಾಗಿ ಸ್ಟೇಷನ್ ಗಾಣಗಾಪುರ ಮೂಲಕ ಚೌಡಾಪುರಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 31 ಕಿಲೋಮೀಟರ್ ಉದ್ದದ ರಸ್ತೆಯು ಸಂಪೂರ್ಣ ಹಾಳಾಗಿದ್ದು ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಇದರಿಂದ ರಸ್ತೆ ಸಂಚಾರವು ಸಂಕಷ್ಟಮಯವಾಗಿದ್ದು ಗಾಣಗಾಪುರ ಭಕ್ತರಿಗೆ ಮತ್ತು ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿದೆ ಎಂದು ನೀಲೂರು ಮತ್ತು ಸ್ಟೇಷನ್ ಗಾಣಗಾಪುರ ನಿವಾಸಿಗಳಿಂದ ಆಕ್ರೋಶ ವ್ಯಕ್ತವಾಗಿದೆ.
ಮಹಾರಾಷ್ಟ್ರದಿಂದ ನಿತ್ಯ ಸಾವಿರಾರು ಭಕ್ತರು ಇತಿಹಾಸ ಪ್ರಸಿದ್ಧ ದೇವಳ ಗಾಣಗಾಪುರಕ್ಕೆ ದರ್ಶನಕ್ಕೆ ಆಗಮಿಸುತ್ತಿದ್ದು ರಸ್ತೆಯ ದುಸ್ಥಿತಿಯಿಂದಾಗಿ ಕರ್ನಾಟಕ ಸರಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ದೇವಸ್ಥಾನದ ಅಭಿವೃದ್ಧಿಯ ನೀಲ ನಕ್ಷೆ ತಯಾರಾಗುತ್ತಿರುವ ಸಂದರ್ಭದಲ್ಲಿ ಅದರ ಸುತ್ತಮುತ್ತಲ ಸಂಪರ್ಕ ರಸ್ತೆಗಳನ್ನು ಕೂಡ ಅಭಿವೃದ್ಧಿಪಡಿಸಲು ಸರಕಾರವು ಶೀಘ್ರ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸ್ಥಳೀಯ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಸೂಕ್ತ ಗಮನಹರಿಸಿ ಗ್ರಾಮಸ್ಥರ ಬೇಡಿಕೆಯನ್ನು ತಕ್ಷಣದಲ್ಲಿ ಈಡೇರಿಸಬೇಕು. ಇಲ್ಲವಾದಲ್ಲಿ ಗ್ರಾಮಸ್ಥರು ಹೋರಾಟದ ಕಣಕ್ಕೆ ಇಳಿಯುವ ಅನಿವಾರ್ಯ ಪರಿಸ್ಥಿತಿ ಎದುರಾಗಲಿದೆ. ಈ ರಸ್ತೆ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆಯ ಅನುದಾನದಲ್ಲಿ ಕೂಡಲೇ ಹಣವನ್ನು ಮೀಸಲಿರಿಸಿ ತ್ವರಿತವಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಅಷ್ಟರವರೆಗೆ ಕನಿಷ್ಠ ಗುಂಡಿ ಮುಚ್ಚುವ ಕಾರ್ಯಕ್ರಮವನ್ನಾದರೂ ಇಟ್ಟುಕೊಂಡು ಭಕ್ತರಿಗೆ ಮತ್ತು ಗ್ರಾಮಸ್ಥರಿಗೆ ರಸ್ತೆ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ.