ಆದ್ಯ ವಚನಕಾರ ದೇವರ ದಾಸಿಮಯ್ಯ 1046ನೇ ಸಂಸ್ಮರಣೆ । ದಾಸಿಮಯ್ಯ ವಚನ ಸಂಭ್ರಮ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆವಚನಕಾರರು ಕಾಯಕವೇ ಕೈಲಾಸವೆಂದು ನಂಬಿ ಅದರಲ್ಲೇ ದೇವರನ್ನು ಕಾಣುತ್ತಿದ್ದರು. ಇಂತಹ ಮೌಲ್ಯಪ್ರತಿಪಾದನೆಯಿಂದಲೇ ವಚನಕಾರ ದೇವರ ದಾಸಿಮಯ್ಯ ಇಂದಿಗೂ ಜನಮಾನಸದಲ್ಲಿದ್ದಾರೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಅಭಿಪ್ರಾಯಪಟ್ಟರು.ಶನಿವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ತಾಲೂಕು ದೇವಾಂಗ ಸಮಾಜದಿಂದ ಪಟ್ಟಣದ ವಾರ್ಡ್ ನಂ.17 ದುರ್ಗದ ಬೀದಿ ಸಮುದಾಯ ಭವನದಲ್ಲಿ ನಡೆದ ದೇವರ ದಾಸಿಮಯ್ಯನವರ 1046ನೇ ಸಂಸ್ಮರಣೆ ಮತ್ತು ವಚನ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಜಾತಿಗಳನ್ನು ನಾವು ಸೃಷ್ಠಿಸಿಕೊಂಡಿದ್ದರೂ ಶರಣರು ಜಾತಿ ಮೀರಿ ಬದುಕಿದರು. ಶರಣರ ಅದರ್ಶಗಳನ್ನು ಕನ್ನಡ ನಾಡಿನ ನಾವೆಲ್ಲರೂ ಬಳಸಿಕೊಂಡು ಜಾತಿ ರಹಿತ ನಾಡನ್ನು ಕಟ್ಟಬೇಕಾಗಿದೆ. ದೇವರ ದಾಸಿಮಯ್ಯ ಪ್ರಥಮ ವಚನಕಾರರಾಗಿದ್ದು ಶರಣ ಸಾಹಿತ್ಯದಲ್ಲಿ ಅವರ ಕೊಡುಗೆ ಅಪಾರ. ಶರಣರ ಸಂದೇಶಗಳನ್ನು ಪ್ರತಿ ಮನೆಗೆ ತಲುಪಿಸುವ ಕಾರ್ಯವನ್ನು ಶರಣ ಸಾಹಿತ್ಯ ಪರಿಷತ್ತು ನಿರ್ವಹಿಸಲಿ ಎಂದು ಆಶಿಸಿದರು.
ತಾಲೂಕ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ದಾದಾಪೀರ್ ಟಿ. ಮಾತನಾಡಿ ಶರಣರನ್ನು ಮರೆತಿರುವ ನಾಡು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಶರಣರ ಬದುಕು, ನಡೆ ನುಡಿಗಳನ್ನು ನಾವು ಅಳವಡಿಸಿಕೊಂಡಾಗ ತಾರತಮ್ಯ ರಹಿತ ಸಮಾಜ ಕಟ್ಟಬಹುದು. ತಾಲೂಕು ಶರಣ ಸಾಹಿತ್ಯ ಪರಿಷತ್ತು ಶರಣರ ಸಂದೇಶಗಳನ್ನು ಬೀದಿ ಕಾರ್ಯಕ್ರಮಗಳ ಮೂಲಕ ತಲುಪಿಸುವ ಕಾರ್ಯ ಮಾಡಲಿದೆ ಎಂದು ಹೇಳಿದರು.ಸಂಸ್ಕೃತಿ ಚಿಂತಕ ಚಟ್ನಳ್ಳಿ ಮಹೇಶ್ ಮಾತನಾಡಿ ಬಸವಣ್ಣನವರೂ ಸೇರಿದಂತೆ ಹಲವು ಶರಣರ ಮೇಲೆ ಪ್ರಭಾವ ಬೀರಿದವರಲ್ಲಿ ದೇವರ ದಾಸಿಮಯ್ಯ ಅವರು ಪ್ರಮುಖರು, ಜಯಂತಿಗಳ ಮೂಲಕ ಮಹನೀಯರ ಬದುಕನ್ನು ಸಾರ್ವಜ ನಿಕರಿಗೆ ತಲುಪಿಸುವ ಕಾರ್ಯ ಆಗಬೇಕು. ನಮ್ಮ ನಡೆ ಮತ್ತು ನುಡಿಗಳಲ್ಲಿ ಅಂತರ ವಿರಬಾರದು. ನಮ್ಮ ನೀತಿ ಸರಳ ವಾಗಿರಬೇಕು ಎಂದು ವಚನಗಳ ಮೂಲಕ ಉದಾಹರಿಸಿದರು.
ಜಾನಪದ ವಿದ್ವಾಂಸ ಬಸವರಾಜ ನೆಲ್ಲಿಸರ ಮಾತನಾಡಿ ಭಾಷಣ ಮತ್ತು ಉಪನ್ಯಾಸಗಳಿಂದ ಜನರಿಗೆ ಸಂದೇಶ ತಲುಪಿಸುವ ಕೆಲಸ ಆಗುವುದಿಲ್ಲ. ಶರಣರ ವಚನಗಳನ್ನು ಮತ್ತು ಅವರ ಬದುಕಿನ ಸಂದೇಶಗಳನ್ನು ಪಠ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಿದರೆ ನೈಜ ಸಂದೇಶ ಉಳಿಯಲಿದೆ ಎಂದರು.
ತಾಲೂಕು ದೇವಾಂಗ ಸಮಾಜ ಅಧ್ಯಕ್ಷ ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಕಲಾವಿದರಾದ ಉಮಾ ಪ್ರಕಾಶ್, ರೋಹಿಣಿ ನರಸಿಂಹಮೂರ್ತಿ, ಲತಾ ಕೃಷ್ಣಮೂರ್ತಿ ದೇವರ ದಾಸಿಮಯ್ಯ ವಚನಗಳನ್ನು ಹಾಡಿದರು.
ಪ್ರತಿಭಾ ಪುರಸ್ಕಾರ ಏರ್ಪಡಿಸಲಾಗಿತ್ತು. ಪುರಸಭೆ ಮಾಜಿ ಅಧ್ಯಕ್ಷೆ ಪಾರ್ವತಮ್ಮ, ಮಾಜಿ ಸದಸ್ಯ ಟಿ.ಆರ್.ಶ್ರೀಧರ್, ಟಿ.ವಿ.ಶ್ರೀನಿವಾಸ್, ದುರ್ಗದ ಬೀದಿ ದೇವಾಂಗ ಬಳಗದ ಅಧ್ಯಕ್ಷ ಗೋವಿಂದಪ್ಪ, ವಿಜಯಕುಮಾರಿ, ಶರಣ ಸಾಹಿತ್ಯ ಪರಿಷತ್ತು ಮುಖಂಡರಾದ ಟಿ.ಎಸ್.ಮೋಹನ್ ಕುಮಾರ್, ಚೇತನ ಗೌಡ, ಪದ್ಮ ಮತ್ತಿತರರು ಭಾಗವಹಿಸಿದ್ದರು.--11ಕೆಟಿಆರ್.ಕೆ.21ಃ ತರೀಕೆರೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ತಾಲೂಕು ದೇವಾಂಗ ಸಮಾಜದಿಂದ ನಡೆದ ಕಾರ್ಯಕ್ರಮವನ್ನುಶಾಸಕ ಜಿ.ಎಚ್.ಶ್ರೀನಿವಾಸ್ ಉದ್ಘಾಟಿಸಿದರು. ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ದಾದಾಪೀರ್ ಟಿ, ತಾಲೂಕು ದೇವಾಂಗ ಸಮಾಜ ಅಧ್ಯಕ್ಷ ವೆಂಕಟೇಶ್ ಮತ್ತಿತರರು ಇದ್ದರು.