ಸಾಮಾಜಿಕ ಸಮೀಕರಣ ಬದಲಾಯಿಸಿದ ದೇವರಾಜು ಅರಸು: ಶಿಕ್ಷಕ ಆರ್.ಡಿ. ರವೀಂದ್ರ

| Published : Aug 23 2024, 01:07 AM IST

ಸಾಮಾಜಿಕ ಸಮೀಕರಣ ಬದಲಾಯಿಸಿದ ದೇವರಾಜು ಅರಸು: ಶಿಕ್ಷಕ ಆರ್.ಡಿ. ರವೀಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪ, ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ಜನಿಸಿದ ಡಿ.ದೇವರಾಜ ಅರಸ್‌ ಕರ್ನಾಟಕದ ರಾಜಕಾರಣದಲ್ಲಿ ಸಾಮಾಜಿಕ ಸಮೀಕರಣ ಬದಲಾಯಿಸಿದ ವ್ಯಕ್ತಿ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದು ಭಾಷಾ ಶಿಕ್ಷಕ ಆರ್.ಡಿ. ರವೀಂದ್ರ ಹೇಳಿದರು.

ಬಾಳಗಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ೧೦೯ನೇ ಜನ್ಮ ಜಯಂತಿ

ಕನ್ನಡಪ್ರಭ ವಾರ್ತೆ, ಕೊಪ್ಪ

ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ಜನಿಸಿದ ಡಿ.ದೇವರಾಜ ಅರಸ್‌ ಕರ್ನಾಟಕದ ರಾಜಕಾರಣದಲ್ಲಿ ಸಾಮಾಜಿಕ ಸಮೀಕರಣ ಬದಲಾಯಿಸಿದ ವ್ಯಕ್ತಿ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದು ಭಾಷಾ ಶಿಕ್ಷಕ ಆರ್.ಡಿ. ರವೀಂದ್ರ ಹೇಳಿದರು.ಬಾಳಗಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಮಂಗಳವಾರ ನಡೆದ ದಿ. ಡಿ. ದೇವರಾಜ ಅರಸುರವರ ೧೦೯ನೇ ಜನ್ಮ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿ, ಡಿ. ದೇವರಾಜು ಅರಸುರವರು ೧೯೭೨ರಿಂದ ಮುಖ್ಯಮಂತ್ರಿಗಳಾಗಿ ೫ ವರ್ಷಗಳ ಪೂರ್ಣ ಆಡಳಿತ ಮಾಡಿದರು. ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚನೆ ಮಾಡಿದರು. ಮೈಸೂರು ರಾಜ್ಯವಾಗಿದ್ದ ಕರ್ನಾಟಕಕ್ಕೆ ೧೯೭೩ರ ನ.೦೧ರಂದು ಕರ್ನಾಟಕ ಎಂದು ಮರುನಾಮಕರಣ ಮಾಡಿದರು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ರಚಿಸಿದ ಅರಸರು ಜೀತಪದ್ಧತಿ ನಿಷೇಧಿಸಿದರು.

ಭಾಗ್ಯ ಜ್ಯೋತಿ ಯೋಜನೆ ಮೂಲಕ ಬಡವರ ಮನೆಗಳಲ್ಲಿ ಬೆಳಕು ಕಾಣುವಂತೆ ಮಾಡಿದರು. ಋಣಭಾರ ಪರಿಹಾರ ಕಾಯಿದೆ ಜಾರಿ, ವಿಶೇಷ ಚೇತನರಿಗೆ ಮಾಸಾಶನ ಜಾರಿಗೆ ತಂದರು. ಭೂ ಅಭಿವೃದ್ಧಿ ಬ್ಯಾಂಕ್ ಮೂಲಕ ಕೃಷಿಕರಿಗೆ ನೆರವಾದರು. ಕನ್ನಡವನ್ನು ಅಧಿಕೃತ ಆಡಳಿತ ಭಾಷೆಯನ್ನಾಗಿಸಿ ಭಾಷೆಗೆ ಗೌರವ ಸಲ್ಲಿಸಿದರು. ಕರ್ನಾಟಕ ರಾಜ್ಯ ಬಸ್ ಸಾರಿಗೆ ವ್ಯವಸ್ಥೆ ರಾಷ್ಟ್ರೀಕರಣಗೊಳಿಸಿದರು. ಉಳುವವನೇ ಒಡೆಯ, ಭೂಸುಧಾರಣೆ ಕಾಯಿದೆ ಜಾರಿಗೆ ತಂದು ಗೇಣಿ ಪದ್ಧತಿಯಲ್ಲಿ ದುಡಿಯುತ್ತಿದ್ದವರಿಗೆ ಭೂಮಿ ಹಂಚಿ ಭೂ ಒಡೆಯರನ್ನಾಗಿಸಿದ ಕೀರ್ತಿ ಅರಸುರವರಿಗೆ ಸಲ್ಲುತ್ತದೆ ಎಂದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ, ತಹಸೀಲ್ದಾರ್ ಲಿಖಿತ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಸಿಆರ್ ಪಿ ಯಶೋಧ ಆರ್.ಒ, ಕೆಡಿಪಿ ಸದಸ್ಯರಾದ ಚಿಂತನ್ ಬೆಳಗೊಳ, ಮಹಮ್ಮದ್ ಸಾಧಿಕ್, ಪಪಂ ಸದಸ್ಯ ರಶೀದ್, ತಾಲೂಕು ಹಿಂದುಳಿದ ಕಲ್ಯಾಣ ಅಧಿಕಾರಿ ಚಂದ್ರಶೇಖರ್, ವಾರ್ಡನ್ ಎಂ. ನೂರ್‌ಜಹಾನ್, ಸಿಬ್ಬಂದಿ ಗೀತಾಮಣಿ, ಸೋಮಶೇಖರ್, ಶ್ಯಾಮಲಾ, ರವೀಂದ್ರ, ಸಮಾಜ ಕಲ್ಯಾಣ ಇಲಾಖೆ ಬಿ.ಪಿ. ಧರ್ಮೇಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶೇಖರಪ್ಪ, ಸಾತ್ವಿಕ್, ಶುಭಾಷಿಣಿ ಮುಂತಾದವರಿದ್ದರು.