ಸಾರಾಂಶ
ಬೆಂಗಳೂರು : ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರೇ ಸಂಸದ ಪ್ರಜ್ವಲ್ ರೇವಣ್ಣನ ಪೆನ್‌ಡ್ರೈವ್ ಅನ್ನು ಮಾರಾಟಕ್ಕೆ ಇಟ್ಟಿದ್ದರು. ಆತನನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಮಾತನಾಡಿಸಿ ತಪ್ಪು ಮಾಡಿದೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿದ್ದಾರೆ.
ಭಾನುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪೆನ್‌ಡ್ರೈವ್ ಪ್ರಕರಣದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಿಲುಕಿಸಲು ಶಿವರಾಮೇಗೌಡರ ತಂಡದೊಂದಿಗೆ ಬಂದಿದ್ದ ಡಿ.ಕೆ.ಶಿವಕುಮಾರ್ ತನಗೆ 100 ಕೋಟಿ ರು. ಮತ್ತು ಸಂಪುಟ ಸ್ಥಾನಮಾನದ ಆಫರ್ ನೀಡಿದ್ದರು ಎಂಬ ದೇವರಾಜೇಗೌಡ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದರು.
ಪೆನ್‌ಡ್ರೈವ್ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ. ದೇವರಾಜೇಗೌಡ ಎರಡು ವರ್ಷಗಳಿಂದ ಹೋರಾಟ ಮಾಡಿದ್ದಾನೆ ಎಂಬ ಕಾರಣಕ್ಕೆ ಆತನ ಜೊತೆ ನಾನು ಮಾತನಾಡಿದೆ. ನಂತರ ಡಿ.ಕೆ.ಶಿವಕುಮಾರ್ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿಸಿದೆ. ಅವರು ಬರೀ ಹಲೋ ಎಂದಿದ್ದರು ಅಷ್ಟೇ. ನೇರ ಭೇಟಿ ಮಾಡಬೇಕು ಎಂದು ಶಿವಕುಮಾರ್ ಒತ್ತಾಯ ಮಾಡಿರಲಿಲ್ಲ. ದೇವರಾಜೇಗೌಡ ಪ್ರಯತ್ನ ಮಾಡಿದರೂ ಭೇಟಿ ಆಗಿರಲಿಲ್ಲ. ಆತನೊಂದಿಗೆ ಫೋನ್‌ನಲ್ಲಿ ಮಾತನಾಡಿಸಿ ಅನಗತ್ಯವಾಗಿ ತಗ್ಲಾಕಿಕೊಂಡಿದ್ದೇನೆ ಎನಿಸುತ್ತಿದೆ ಎಂದು ಶಿವರಾಮೇಗೌಡ ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮೂಲತಃ ಕಾಂಗ್ರೆಸಿಗನಾಗಿರುವ ನಾನು ಬಿಜೆಪಿಗೆ ಈಗಾಗಲೇ ರಾಜೀನಾಮೆ ನೀಡಿದ್ದೇನೆ. ವಿಜಯೇಂದ್ರ ಅವರ ಉತ್ತರಕ್ಕೆ ಕಾಯುತ್ತಿದ್ದೇನೆ. ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದ ಬಗ್ಗೆ ತಿಳಿಸುತ್ತೇನೆ ಎಂದು ಶಿವರಾಮೇಗೌಡ ಹೇಳಿದರು.
ಮುಖ್ಯಮಂತ್ರಿಗಳ ಹೆಸರನ್ನು ಕಟ್ ಮಾಡಿ ಕೇವಲ ಡಿ.ಕೆ.ಶಿವಕುಮಾರ್ ಹೆಸರು ಇರುವ ಆಡಿಯೋವನ್ನು ದೇವರಾಜೇಗೌಡ ಲೀಕ್ ಮಾಡಿದ್ದಾನೆ. ಪೊಲೀಸ್ ಭಾಷೆಯಲ್ಲಿ ಎಸ್‌ಐಟಿಯವರು ಆತನನ್ನು ಮಾತನಾಡಿಸಿ ಕ್ರಮ ತೆಗೆದುಕೊಳ್ಳಬೇಕು. ಇನ್ನೂ ಏನೇನು ಇದೆ ಎಂಬುದನ್ನು ಪತ್ತೆ ಮಾಡಬೇಕು ಎಂದು ಆಗ್ರಹಿಸಿದರು.
ಅತ್ಯಾಚಾರದ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವುದು ಬಿಟ್ಟು ಅದನ್ನು ಬಹಿರಂಗ ಮಾಡಿದವರು, ಹಂಚಿದವರ ಬಗ್ಗೆ ಈಗ ಚರ್ಚೆ ನಡೆಸುವುದು ಏಕೆ? ಪೆನ್‌ಡ್ರೈವ್ ನಿರ್ಮಾಪಕರು, ಹಂಚಿಕೆದಾರರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ಅದನ್ನು ಎಸ್‌ಐಟಿ ಬಯಲಿಗೆ ಎಳೆಯಬೇಕು. ಏ.29ರಂದು ಎಂ.ಜಿ ರಸ್ತೆಯಲ್ಲಿರುವ ನನ್ನ ಸ್ನೇಹಿತನ ಬಟ್ಟೆ ಅಂಗಡಿಯಲ್ಲಿ ದೇವರಾಜೇಗೌಡನನ್ನು ಭೇಟಿ ಮಾಡಿದ್ದೆ. ಸುಮಾರು 15 ಜನರು ಜೊತೆಗಿದ್ದರು. ಆತ ಅಲ್ಲಿಗೆ ಏಕೆ ಬಂದಿದ್ದ ಎನ್ನುವುದು ನಮಗೂ ಗೊತ್ತಿಲ್ಲ. ಆದರೆ, ಆತ ಸರಿ ಇಲ್ಲ. ವಂಚಕ ಎಂಬುದು ನನಗೆ ಗೊತ್ತಿತ್ತು ಎಂದು ಹೇಳಿದರು.
ಅಶ್ಲೀಲ ವಿಡಿಯೋ ಹೊರ ಬಂದಾಗಲೇ ಪೆನ್‌ಡ್ರೈವ್ ವಿಷಯ ನನಗೂ ಗೊತ್ತಾಗಿದ್ದು. ಪ್ರಕರಣದ ದಿಕ್ಕು ತಪ್ಪಿಸಲು ಕಾಣದ ಕೈಗಳು ಕೆಲಸ ಮಾಡುತ್ತಿವೆ ಎನಿಸುತ್ತಿದೆ. ನನ್ನ ವಿರುದ್ಧ ಆರೋಪ ಮಾಡಿರುವ ಆತನಿಗೆ ಲೀಗಲ್ ನೋಟಿಸ್ ನೀಡುತ್ತೇನೆ. ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದರು.ಗೌಡರ ಜೀವ ಬಲಿ ಪಡೆಯಲು ‘ಕೈ’ ಸಂಚು: ಜೆಡಿಎಸ್
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜೀವ ಬಲಿ ಪಡೆಯಲು ರಾಜ್ಯ ಕಾಂಗ್ರೆಸ್ ಸರ್ಕಾರ ಸಂಚು ರೂಪಿಸಿದೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.
ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರದ್ದು ಎನ್ನಲಾದ ಮೊಬೈಲ್ ಸಂಭಾಷಣೆಯ ತುಣುಕುಗಳು ಮಾಧ್ಯಮಗಳಲ್ಲಿ ಬಹಿರಂಗವಾದ ಬೆನ್ನಲ್ಲಿಯೇ ಜೆಡಿಎಸ್ ಪಕ್ಷವು ತನ್ನ ಎಕ್ಸ್ ಖಾತೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ನೇರ ವಾಗ್ದಾಳಿ ನಡೆಸಿದೆ.
ದೇವೇಗೌಡರ ಕುಟುಂಬವನ್ನು ಮುಗಿಸಲು ಕಾಂಗ್ರೆಸ್ ಸರ್ಕಾರ ವ್ಯವಸ್ಥಿತ ಹುನ್ನಾರ ನಡೆಸಿ ಯೋಜಿತವಾಗಿ ಟಾರ್ಗೆಟ್ ಮಾಡಿದೆ. ಹೊಂಚು ಹಾಕಿ ಸಂಚು ಮಾಡುವ ಕಾಂಗ್ರೆಸ್ ಪಕ್ಷದ ಅಸಲಿ ಮುಖ ಕಳಚಿ ಕೆಳಕ್ಕೆ ಬಿದ್ದಿದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಹೌದಲ್ಲವೇ ಕಾಂಗ್ರೆಸ್ಸಿಗರೇ? ಸತ್ಯ ನಿಮ್ಮ ಮುಂದೆಯೇ ಇದೆ. ನಿಮ್ಮ ಅಧ್ಯಕ್ಷರೇ ಪೆನ್ ಡ್ರೈವ್ ಫ್ಯಾಕ್ಟರಿಯ ಒರಿಜಿನಲ್ ಓನರ್. ಸಿಡಿ ಶಿವಕುಮಾರ್ ಗ್ಯಾಂಗ್ ನಡೆಸಿದ ಪೆನ್‌ಡ್ರೈವ್ ಹಂಚಿಕೆಯ ಹೇಯ ಕೃತ್ಯದ ಸಂಚುಗಳೇ ಅವೆಲ್ಲಾ. ದೇವರಾಜೇಗೌಡರ ಹೇಳಿಕೆಯ ನಂತರ ಹೊರಬಿದ್ದಿರುವ ಆಡಿಯೋ ಟೇಪುಗಳೇ ಮಹಾಸಂಚಿನ ಮಹಾಕಥೆಯನ್ನು ಬಿಚ್ಚಿಟ್ಟಿವೆ.
ಈಗ ಹೇಳಿ, ಯಾರು ಮೆಂಟಲ್ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದೆ.ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ರೆಡಿ ಮಾಡಿದ್ದೇ ಶಿವಕುಮಾರ್. ಮೋದಿ, ಕುಮಾರಸ್ವಾಮಿ ಅವರ ವಿರುದ್ಧ ಅಪಪ್ರಚಾರ ನಡೆಸಲು, ಇಡೀ ಸಂಚು ಅನುಷ್ಠಾನಕ್ಕೆ ನಾಲ್ವರು ಪ್ರಮುಖ ಸಚಿವರ ಸಮಿತಿ ರಚಿಸಿದ್ದೇ ಶಿವಕುಮಾರ್. ದೇವೇಗೌಡರನ್ನು ಸಾವಿನ ದವಡೆಗೆ ನೂಕುವುದು ಈ ಸ್ಲೀಪರ್ ಸೆಲ್ ಟಾರ್ಗೆಟ್. ವಕೀಲರಾದ ದೇವೇರಾಜೇಗೌಡರೇ ಸ್ವತಃ ಬಿಚ್ಚಿಟ್ಟ ಈ ಸತ್ಯಗಳು ಹಾಗೂ ಆಡಿಯೋ ಟೇಪುಗಳು ಶತಮಾನದ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷದ ಮಾನವನ್ನು ಬೀದಿ ಬೀದಿಯಲ್ಲಿ ಹರಾಜು ಹಾಕಿವೆ. ಕಂಡವರ ಮನೆಯಲ್ಲಿ ಸಾವು ಬಯಸುವ ಕಾಂಗ್ರೆಸ್ಸಿಗೆ ಧಿಕ್ಕಾರ ಎಂದು ಜೆಡಿಎಸ್ ಕಿಡಿಕಾರಿದೆ.ಕಾಂಗ್ರೆಸ್ಸಿನಿಂದ ಒಕ್ಕಲಿಗರನ್ನು ಮುಗಿಸಲು ಯೋಜನೆ: ಅಶೋಕ್
‘ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಈಗಾಗಲೇ ದಲಿತ ನಾಯಕರನ್ನು ಮುಗಿಸಿದ್ದಾರೆ. ಅದೇ ರೀತಿ ಒಕ್ಕಲಿಗರನ್ನು ಮುಗಿಸಲು ಯೋಜನೆ ರೂಪಿಸಿದ್ದಾರೆ’ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಗಂಭೀರ ಆಪಾದನೆ ಮಾಡಿದ್ದಾರೆ.
ಭಾನುವಾರ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವರಾಜೇಗೌಡ ಸ್ವತಃ ಹೇಳಿಕೆ ನೀಡಿ ಡಿ.ಕೆ.ಶಿವಕುಮಾರ್ ಅವರ ಧ್ವನಿಮುದ್ರಣ ಬಿಡುಗಡೆ ಮಾಡಿದ್ದಾರೆ. ನಿಜ ಇರುವುದಕ್ಕೆ ದಾಖಲೆ ಬಿಡುಗಡೆ ಮಾಡಿದ್ದು, ಅದಕ್ಕಾಗಿಯೇ ಅವರ ಬಂಧನವಾಗಿದೆ. ಲೋಕಸಭೆ ಚುನಾವಣೆಯ ಸಮಯದಲ್ಲಿ ಎಚ್ಚರವಾಗಿರಬೇಕೆಂದು ಹೀಗೆ ಮಾಡಿದ್ದಾರೆ. ಮಾಧ್ಯಮಗಳಲ್ಲಿ ಪ್ರಸಾರವಾಗುವುದನ್ನೂ ತಡೆಯುವ ಉದ್ದೇಶ ಶಿವಕುಮಾರ್ ಅವರಿಗಿದೆ ಎಂದರು.
ಪ್ರಜ್ವಲ್ ಪ್ರಕರಣವನ್ನು ಸಿಬಿಐಗೆ ವಹಿಸಬೇಕಿದೆ. ಆದರೆ ಸಿಬಿಐ ಬಳಿ ಹೋದರೆ ಸರ್ಕಾರದಲ್ಲಿ ಇರುವವರೇ ಕಂಬಿ ಎಣಿಸಬೇಕಾಗುತ್ತದೆ. ಇಡೀ ಗೃಹ ಇಲಾಖೆಯನ್ನು ಬೇರೆ ಯಾರೋ ಹೈಜಾಕ್ ಮಾಡಿ ನಡೆಸುತ್ತಿದ್ದಾರೆ. ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಬಂಧಿಸಿದಂತೆ ಚಾಲಕನನ್ನು ಬಂಧಿಸಿಲ್ಲ. ಪೊಲೀಸರು ಕಾಂಗ್ರೆಸ್ ನಾಯಕರು ಹೇಳಿದಂತೆ ಕೇಳುತ್ತಾರೆ ಎಂದರು.
ಪ್ರಜ್ವಲ್ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿ. ಆದರೆ ವೀಡಿಯೋ ಹಂಚಿದವರ ವಿರುದ್ಧ ಕ್ರಮ ವಹಿಸಿಲ್ಲ. ಹೀಗೆ ಕಾಂಗ್ರೆಸ್ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ. ಪ್ರಕರಣವನ್ನು ಮುಚ್ಚಿಹಾಕಲು ಎಸ್‌ಐಟಿ ಸಿದ್ಧತೆ ಮಾಡುತ್ತಿದೆ ಎಂದರು.
ಪೆನ್‌ಡ್ರೈವ್: ಎಚ್‌ಡಿಕೆ ಸಿಲುಕಿಸಲು ಸೂಚಿಸಿದ್ದರೇ ಶಿವರಾಮೇಗೌಡ?ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಭಾನುವಾರ ಮತ್ತೊಂದು ತಿರುವು ಪಡೆದಿದೆ. ‘ತಮ್ಮ ಪುತ್ರನ ಏಳಿಗೆಗಾಗಿ ಎಚ್.ಡಿ.ಕುಮಾರಸ್ವಾಮಿಯೇ ಪ್ರಜ್ವಲ್‌ರ ಅಶ್ಲೀಲ ವಿಡಿಯೋ ಬಿಡುಗಡೆ ಮಾಡಿದ್ದಾರೆ’ ಎಂದು ಆರೋಪಿಸಿ ಹೇಳಿಕೆ ನೀಡುವಂತೆ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡರಿಗೆ ಮಾಜಿ ಸಂಸದ ಶಿವರಾಮೇಗೌಡ ಸೂಚನೆ ನೀಡಿದ್ದಾರೆ ಎನ್ನಲಾದ ಸಂಭಾಷಣೆಯ ಆಡಿಯೋ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದೆ.
ವೈರಲ್ ಆಡಿಯೋ ಸಂಭಾಷಣೆಯಲ್ಲೇನಿದೆ?ಶಿವರಾಮೇಗೌಡ: ಕುಮಾರಸ್ವಾಮಿನೇ ಬಿಟ್ಟಿರಬೇಕು ಅಂತಲೇ ಹೇಳಿ. ಕುಮಾರಸ್ವಾಮಿಗೆ ಅವರ ಮಗ ಮುಂದಕ್ಕೆ ಬರಬೇಕು ಅಂತಾ ಆಸೆ ಇದೆ.. ಇವ ಮುಂದಕ್ಕೆ ಬಂದುಬಿಟ್ಟನಲ್ಲಾ ಅಂತಾ.. ಅದಕ್ಕೋಸ್ಕರ ಮಾಡಿದ್ದಾರೆ ಅಂತಾ ಹೇಳಿ..
ದೇವರಾಜೇಗೌಡ: ಹೂಂ...ಶಿವರಾಮೇಗೌಡ: ದೇವೇಗೌಡ ಮತ್ತು ದೇವೇಗೌಡರ ಮಕ್ಕಳು.. ಏನ್ ಕಡಿಮೆ ಅಂತಾ ತಿಳ್ಕೋಬೇಡಾ.. ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ವಲ್ಲಾ ದೇವೇಗೌಡ... ಕೇಳಣ್ಣ.. ಕೇಳಣ್ಣ ಇಲ್ಲಿ ಒಂದು ನಿಮಿಷ ಕೇಳಣ್ಣ ಇಲ್ಲಿ... ಇನ್ನೇನ್ ವಿಡಿಯೋಗಳಿದೆ.... ಡಿ.ಕೆ ಮಾತಾಡಿದ್ರು ಬೆಳಗ್ಗೆ.. ನೀವ್ ಏನೇನಿದೆ ನಮಗೆ ಕೊಡಿ. ನೀವ್ ತಲೇನೇ ಕೆಡಿಸಿಕೋಬೇಡಿ. ಅವ್ರನ್ನ ಬಲಿ ಹಾಕೋಕೆ ಗೌರ್ಮೆಂಟ್ ತೀರ್ಮಾನ ಮಾಡಿದೆ.
ದೇವರಾಜೇಗೌಡ: ಹಾಂ.. ಹಾಂ.. ಹಾಂ..ಶಿವರಾಮೇಗೌಡ: ಅರ್ಥವಾಯ್ತಾ...?
ದೇವರಾಜೇಗೌಡ: ಸರಿ ಸರಿ ಸರಿ ಅಣ್ಣ...ಶಿವರಾಮೇಗೌಡ: ಏನ್.. ಈಗ ನೀನೇನ್ ಪೆನ್‌ಡ್ರೈವ್ ಹಾಸನದಲ್ಲಿ ಹಂಚಿಲ್ಲ.. ಹಂಚಿದ್ರೂ ತಪ್ಪೇನಿದೇ ಹೇಳಿ?
ದೇವರಾಜೇಗೌಡ: ಅಲ್ಲಾ...ಶಿವರಾಮೇಗೌಡ: ಏನು.. ಅದೇನು ನೀವ್ ಲಾಯರ್ ಅಲ್ವೇನ್ರಿ... ಅದೇನು ಅಂತಾ.. ಅದೇನೂ ಆಗಲ್ಲ..
ದೇವರಾಜೇಗೌಡ: ಅಣ್ಣಾ ಇದು ಪನಿಷ್‌ಮೆಂಟ್.. ಕಾನೂನು ಪ್ರಕಾರ ಪನಿಷ್‌ಮೆಂಟ್ ಅಲ್ವಾ ಅಣ್ಣಾ.. ಹೆಣ್ಣುಮಕ್ಕಳ ಮಾನ-ಮರ್ಯಾದೆ ಅಣ್ಣಾ.. ಅವರ ಶೀಲದ ಬಗ್ಗೆ ನಾವು ಯೋಚನೆ ಮಾಡಬೇಕಲ್ವಾ..?ಶಿವರಾಮೇಗೌಡ: ಈಗ ಅದರ ಬಗ್ಗೆ ನೀವ್ಯಾಕೆ ಯೋಚನೆ ಮಾಡ್ತೀರಾ.. ಅಮಿತ್ ಶಾ ಚೆನ್ನಾಗ್ ಹೇಳವನಲ್ಲಾ.. ಹೆಣ್ಣುಮಕ್ಕಳಿಗೆ ಸುರಕ್ಷಿತ ತಾಣವಲ್ಲ ಕರ್ನಾಟಕ...
ಸಾವಿರಾರು ಪೆನ್‌ಡ್ರೈವ್‌ಗಳನ್ನು ಸಾರ್ವಜನಿಕವಾಗಿ ಹಂಚಿರುವುದರ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಿವರಾಮೇಗೌಡ ಹಾಗೂ ನಾಲ್ಕೈದು ಸಚಿವರ ಪಾತ್ರವಿದೆ ಎಂದು ಎರಡು ದಿನಗಳ ಹಿಂದೆ ಎಸ್‌ಐಟಿ ವಶದಲ್ಲಿರುವಾಗಲೇ ದೇವರಾಜೇಗೌಡ ನೀಡಿರುವ ಹೇಳಿಕೆಗೆ ವೈರಲ್ ಆಡಿಯೋ ಪುಷ್ಟಿ ನೀಡಿದೆ.
ನಿಮ್ಮಲ್ಲಿರುವ ಎಲ್ಲಾ ವಿಡಿಯೋಗಳನ್ನು ನಮಗೆ ಕೊಡಿ. ಸರ್ಕಾರ ಅವರನ್ನು ಬಲಿ ಹಾಕಲು ತೀರ್ಮಾನಿಸಿದೆ ಎಂದು ಹೇಳುವ ಶಿವರಾಮೇಗೌಡ, ಪೆನ್‌ಡ್ರೈವ್ ಹಂಚಿದ್ರೂ ತಪ್ಪೇನಿದೆ ಎನ್ನುತ್ತಾರೆ. ಅಲ್ಲದೇ, ಹೆಣ್ಣುಮಕ್ಕಳ ಶೀಲದ ಬಗ್ಗೆ ಈಗ ಏಕೆ ಯೋಚನೆ ಮಾಡುತ್ತಿರಾ ಎಂದು ಕೇಳಿದ್ದಾರೆ.
ಈ ಎಲ್ಲಾ ಘಟನೆಗಳನ್ನು ನೋಡಿ ದೇವೇಗೌಡ ಆತ್ಮಹತ್ಯೆ ಮಾಡಿಕೊಂಡಿಲ್ಲವೆಂದು ಮಾಜಿ ಪ್ರಧಾನಿಯವರ ಬಗ್ಗೆ ಶಿವರಾಮೇಗೌಡ ಹಗುರವಾಗಿ ಮಾತನಾಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.