ದೇವರಾಜ ಅರಸು ದೇಶ ಕಂಡ ಉತ್ತಮ ಆಡಳಿತಗಾರ: ಶಾಸಕ ದರ್ಶನ್ ಪುಟ್ಟಣ್ಣಯ

| Published : Aug 21 2024, 12:43 AM IST

ದೇವರಾಜ ಅರಸು ದೇಶ ಕಂಡ ಉತ್ತಮ ಆಡಳಿತಗಾರ: ಶಾಸಕ ದರ್ಶನ್ ಪುಟ್ಟಣ್ಣಯ
Share this Article
  • FB
  • TW
  • Linkdin
  • Email

ಸಾರಾಂಶ

ದೇವರಾಜ ಅರಸು ದೇಶಕಂಡ ಧೀಮಂತ ರಾಜಕಾರಣಿ. ಸಿಎಂ ಆಗಿ ಉಳುವವನೆ ಭೂಮಿ ಒಡೆಯ ಕಾಯ್ದೆಗೆ ತಿದ್ದುಪಡಿ ತಂದು ಲಕ್ಷಾಂತರ ರೈತರಿಗೆ ಅನುಕೂಲ ಮಾಡಿಕೊಟ್ಟರು. ವೃದ್ಧರ ಕಷ್ಟವನ್ನು ಕಣ್ಣಾರೆ ಕಂಡು ಮೊದಲ ಬಾರಿಗೆ ವೃದ್ಧಾಪ್ಯ ವೇತನ ಆರಂಭಿಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಡಿ.ದೇವರಾಜ ಅರಸು ದೇಶಕಂಡ ಉತ್ತಮ ಆಡಳಿತಗಾರ, ಸಾಮಾಜಿಕ ಸುಧಾರಣೆ ಮೂಲಕ ತಳ ಸಮುದಾಯದ ಏಳಿಗೆಗೆ ಶ್ರಮಿಸಿದ ಹಿಂದುಳಿದ ವರ್ಗಗಳ ನಾಯಕ ಎಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಹೇಳಿದರು.

ಪಟ್ಟಣದ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯದ ಆವರಣದಲಿ ತಾಲೂಕು ಆಡಳಿತ, ತಾಪಂ, ಹಿಂದುಳಿದ ವರ್ಗಗಳ ಇಲಾಖೆಯಿಂದ ನಡೆದ ಡಿ.ದೇವರಾಜ ಅರಸು ಜಯಂತಿಯಲ್ಲಿ ಮಾತನಾಡಿದರು.

ಡಿ.ದೇವರಾಜು ಅರಸು ಮುಖ್ಯಮಂತ್ರಿಗಳಾಗಿದ್ದ ವೇಳೆ ಹಲವು ಜನಪರ ಯೋಜನೆ ತಂದು, ಕಾಯ್ದೆಗಳಿಗೆ ಸುಧಾರಣೆ ತಂದರು. ಸಾಮಾಜಿಕ ಸುಧಾರಣೆ ಬಗ್ಗೆ ಸಾಕಷ್ಟು ಕಳಕಳಿ ಹೊಂದಿದ್ದರು. 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ಪೂರೈಸಿದ ಮೊದಲ ಮುಖ್ಯಮಂತ್ರಿಯಾಗಿದ್ದರು ಎಂದರು.

ತಹಸೀಲ್ದಾರ್ ಸಂತೋಷ್ ಮಾತನಾಡಿ, ದೇವರಾಜ ಅರಸು ದೇಶಕಂಡ ಧೀಮಂತ ರಾಜಕಾರಣಿ. ಸಿಎಂ ಆಗಿ ಉಳುವವನೆ ಭೂಮಿ ಒಡೆಯ ಕಾಯ್ದೆಗೆ ತಿದ್ದುಪಡಿ ತಂದು ಲಕ್ಷಾಂತರ ರೈತರಿಗೆ ಅನುಕೂಲ ಮಾಡಿಕೊಟ್ಟರು. ವೃದ್ಧರ ಕಷ್ಟವನ್ನು ಕಣ್ಣಾರೆ ಕಂಡು ಮೊದಲ ಬಾರಿಗೆ ವೃದ್ಧಾಪ್ಯ ವೇತನ ಆರಂಭಿಸಿದರು. ಜೀತ ಪದ್ಧತಿ ವಿಮುಕ್ತಿ, ಕನಿಷ್ಠ ಕೂಲಿ ಯೋಜನೆ, ಋಣ ಪರಿಹಾರ ಕಾಯ್ದೆ, ಬಡವರಿಗೆ ಮನೆಗಳ ನಿರ್ಮಾಣ, ಸಹಕಾರ ಸಂಘಗಳ ಸ್ಥಾಪನೆ ಸೇರಿದಂತೆ ಹಲವು ಯೋಜನೆ ತಂದುಕೊಟ್ಟು ಸಾಮಾಜಿಕ ನ್ಯಾಯದ ಹರಿಕಾರರಾದರು ಎಂದು ಸ್ಮರಿಸಿದರು.

ಇದೇ ವೇಳೆ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಾದ ಕೆ.ಎಲ್.ಚೇತನ್, ಮೋಹನ್, ಚಂದನ, ಭೂಮಿಕಾ ಅವರನ್ನು ಸನ್ಮಾನಿಸಲಾಯಿತು. ಇಲಾಖೆಯಿಂದ ಶಾಸಕ ದರ್ಶನ್‌ಪುಟ್ಟಣ್ಣಯ್ಯ ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಜೆಡಿಎಸ್‌ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ಬಿಜೆಪಿ ತಾಲೂಕು ಅಧ್ಯಕ್ಷ ಧನಂಜಯ, ರೈತಸಂಘದ ಅಧ್ಯಕ್ಷ ನಾಗರಾಜ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸತೀಶ್, ಪುರಸಭೆ ಮುಖ್ಯಾಧಿಕಾರಿ ಸತೀಶ್‌ಕುಮಾರ್, ಸಮಾಜ ಕಲ್ಯಾಣ ಇಲಾಖೆ ಮ್ಯಾನೇಜರ್ ಕೋಮಲ, ನಿಲಯಪಾಲಕರಾದ ಸಿ.ನಂದಕುಮಾರ್, ಚಂದ್ರಕಲಾ, ಕುಮಾರ್, ನಾಗರತ್ನ, ತೇಜಾವತಿ, ಪುರಸಭಾ ಸದಸ್ಯರಾದ ಅಶೋಕ್, ಜಯಲಕ್ಷ್ಮಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ನಾಗಶೆಟ್ಟಿ, ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ್, ಪಶುಸಂಗೋಪನ ಇಲಾಖೆ ಅಧಿಕಾರಿ ಪ್ರಕಾಶ್, ಸಿಬ್ಬಂದಿ ಅಶೋಕ್, ದಿನೇಶ್, ಕಾಂಗ್ರೆಸ್ ಮುಖಂಡ ಸಿ.ಆರ್.ರಮೇಶ್, ದಸಂಸ ಮುಖಂಡ ಅಂಕಯ್ಯ ಸೇರಿದಂತೆ ಹಲವರು ಇದ್ದರು.