ಬಡವರು, ಹಿಂದುಳಿದವರ ಮುನ್ನಡೆಸಿದವರು ಅರಸು: ಸಂಸದ ಬಿ.ವೈ.ರಾಘವೇಂದ್ರ ಬಣ್ಣನೆ

| Published : Aug 21 2024, 12:38 AM IST

ಬಡವರು, ಹಿಂದುಳಿದವರ ಮುನ್ನಡೆಸಿದವರು ಅರಸು: ಸಂಸದ ಬಿ.ವೈ.ರಾಘವೇಂದ್ರ ಬಣ್ಣನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾಜಿಕ ಪರಿವರ್ತನೆಯ ಹರಿಕಾರ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸುರವರ 109 ನೇ ಜನ್ಮ ದಿನಾಚರಣೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಅರ್ಥಪೂರ್ಣವಾಗಿ ಮಂಗಳವಾರ ಜರುಗಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ / ಶಿಕಾರಿಪುರ

ಶೋಷಿತರು, ಹಿಂದುಳಿದವರು, ತಳ ಸಮುದಾಯ, ರೈತಾಪಿ ವರ್ಗದವರ ಕೈಹಿಡಿದು ಅವರ ಪರವಾಗಿ ಕಾನೂನುಗಳನ್ನು ತರುವ ಮೂಲಕ ಅವರ ಏಳಿಗೆಗೆ ಶ್ರಮಿಸಿದವರು ಡಿ.ದೇವರಾಜ ಅರಸು ಅವರು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಜಿಲ್ಲಾಡಳಿತ, ಜಿ.ಪಂ., ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಸಾಮಾಜಿಕ ಪರಿವರ್ತನೆಯ ಹರಿಕಾರ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸುರವರ 109 ನೇ ಜನ್ಮ ದಿನಾಚರಣೆ ಹಾಗೂ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರಾಂತಿಕಾರಿ ಬದಲಾವಣೆಯಿಂದ ಹಸಿದ ಹೊಟ್ಟೆಗೆ ಅನ್ನ ನೀಡಿದವರು. ಭೂ ಸುಧಾರಣೆ ಕಾಯ್ದೆ ಜಾರಿಗೆ ತರುವ ಮೂಲಕ ಉಳುವವನೇ ಒಡೆಯನನ್ನಾಗಿ ಮಾಡಿ ದರು. ಸಾಮಾಜಿಕ ಪಿಡುಗಾಗಿದ್ದ ಮಲ ಹೊರುವ ಪದ್ಧತಿ, ಜೀತದಾಳು ಪದ್ಧತಿಗೆ ಮುಕ್ತಿ ನೀಡಿದರು. ಹಲವಾರು ಕಾರ್ಯಕ್ರಮಗಳ ಮೂಲಕ ಹಿಂದುಳಿದವರ ಬೆಳಕಾದರು. ಹಾವನೂರು ವರದಿ ಜಾರಿಗೆ ತರುವ ಮೂಲಕ ಹಿಂದುಳಿದ ವರ್ಗಗಳ ಏಳ್ಗೆಗೆ ಕಾರಣರಾದರು ಎಂದು ಬಣ್ಣಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜಪ್ಪ ದಳವಾಯಿ ಅರಸುರವರ ಕುರಿತು ವಿಶೇಷ ಉಪನ್ಯಾಸ ನೀಡಿ , ರಾಜ್ಯದ ಚರಿತ್ರೆಯಲ್ಲಿ 70ರ ದಶಕ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ದೃಷ್ಟಿಯಿಂದ ಭೀಕರವಾಗಿದ್ದು, ಇಂತಹ ವೈಪರೀತ್ಯಗಳ ಸಂದರ್ಭದಲ್ಲಿ ಅರಸುರವರು ರಾಜಕೀಯ ಪ್ರವೇಶ ಮಾಡುತ್ತಾರೆ ರಾಜ್ಯದಲ್ಲಿ ಮೊತ್ತ ಮೊದಲಿಗೆ ಪ್ರಜಾಸತ್ತಾತ್ಮಕವಾಗಿ ಮೈಸೂರು ಸಂಸ್ಥಾನ ಮತ್ತು ಕೊಲಾಪುರ್ ಸಂಸ್ಥಾನಗಳಲ್ಲಿ ಹಿಂದುಳಿದವರಿಗೆ ಮೀಸಲಾತಿಯನ್ನು ಜಾರಿಗೆ ತರುತ್ತಾರೆ ಎಂದರು.

ಮೀಸಲಾತಿ ಒಂದು ವೈಜ್ಞಾನಿಕ ಕ್ರಮವಾಗಿದ್ದು, ಮೊದಲ ಬಾರಿಗೆ ಅರಸುರವರು ರೋಸ್ಟರ್ ಪದ್ಧತಿ ಜಾರಿಗೆ ತರುತ್ತಾರೆ. ರಾಜಕೀಯವಾಗಿ ಹಲವಾರು ಶಿಷ್ಯಂದಿ ರನ್ನು ಬೆಳೆಸುತ್ತಾರೆ. ಕೆಲವರಿಗೆ ರಾಜಕೀಯ ಧೀಕ್ಷೆ ನೀಡುತ್ತಾರೆ. 20 ಅಂಶಗಳ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಾರೆ. ಅವರ ಜೀವನವೇ ಆದರ್ಶಮಯ ಎಂದು ವಿವರಿಸಿದರು.

ವಿಧಾನ ಪರಿಷತ್ ಶಾಸಕರಾದ ಬಿಲ್ಕೀಶ್ ಬಾನು ಮಾತನಾಡಿ, ನಾನು ಕೂಡ ಅರಸುರವರ ಸುಧಾರಣಾ ಕಾರ್ಯಕ್ರಮಗಳ ಫಲಾನುಭವಿ. ಅವರು ವೃತ್ತಿಯಲ್ಲಿ ಹಿಂದುಳಿದವರಿಗಾಗಿ, ಶ್ರಮಿಕರಿಗಾಗಿ, ಶೋಷಿತರಿಗಾಗಿ ಹೋರಾಟ ಮಾಡುತ್ತಿದ್ದರೇ ಹೊರತು ಅವರ ಹೋರಾಟ ಜಾತಿ ಆಧಾರಿತವಾಗಿರಲಿಲ್ಲ ಎಂದರು.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕಿ ಜ್ಯೋತಿ ಕುಮಾರಿ ಕೆ.ವಿ.ನಾರಾಯಣ ಗುರುಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಶಾಪಗ್ರಸ್ತ ನಾಡು ಎಂದೆನಿಸಿಕೊಂಡಿದ್ದ ಕೇರಳ ಇಂದು ಅತಿ ಹೆಚ್ಚು ಲಿಂಗಾನುಪಾತ, ಸಾಕ್ಷರತೆ ಇದ್ದು, ಬುದ್ಧಿವಂತರ ದೇವರನಾಡು ಎಂದು ಕರೆಸಿಕೊಳ್ಳುವಲ್ಲಿ ನಾರಾಯಣ ಗುರುಗಳ ಕೊಡುಗೆಯೂ ಇದೆ ಎಂದು ತಿಳಿಸಿದರು.

ಪ್ರತಿಭಾ ಪುರಸ್ಕಾರ: ಹಿಂದುಳಿದ ವರ್ಗಗಳ ವಸತಿ ಶಾಲೆಗಳಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಶೇ.100 ಫಲಿತಾಂಶ ಪಡೆದ ವಸತಿ ಶಾಲೆಗಳ ಮುಖ್ಯ ಶಿಕ್ಷಕರನ್ನು ಸನ್ಮಾನಿಸಿಸಲಾಯಿತು. ಪ್ರಬಂಧ, ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಇದೇ ವೇಳೆ ಸದ್ಭಾವನಾ ದಿನದ ಪ್ರತಿಜ್ಞಾ ವಿಧಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಶೋಭಾ ಕೆ ಆರ್ ಬೋಧಿಸಿದರು. ಶಾಸಕರಾದ ಎಸ್. ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಸ್ವಾಗತಿಸಿದರು. ವಿಧಾನ ಪರಿಷತ್ ಶಾಸಕರಾದ ಧನಂಜಯ ಸರ್ಜಿ, ಡಿ.ಎಸ್.ಅರುಣ್, ಕರ್ನಾಟಕ ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ರವಿಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ಆರ್ಯ ಈಡಿಗರ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಜಿಲ್ಲಾ ಹಿಂದುಳಿದ ವರ್ಗಗಳ ಜಾತಿ ಒಕ್ಕೂಟದ ಅಧ್ಯಕ್ಷ ವಿ.ರಾಜು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ವಿವಿಧ ಸಮಾಜದ ಮುಖಂಡರು, ಅಧಿಕಾರಿಗಳು, ವಿದ್ಯಾರ್ಥಿಗಳಿದ್ದರು.ಸಮಾನತೆ ಅರಿವು ಮೂಡಿಸಿದ ನಾರಾಯಣ ಗುರು: ಸಂಸದ ಬಿ.ವೈ.ರಾಘವೇಂದ್ರ

ಶಿಕಾರಿಪುರ: ಜಾತಿಯನ್ನು ಮೀರಿದ ನಾರಾಯಣ ಗುರುಗಳ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಮಂಗಳವಾರ ಪಟ್ಟಣದ ತಾ.ಪಂ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾ.ಪಂ,ಪುರಸಭೆ ಹಾಗೂ ತಾಲೂಕು ಆರ್ಯ ಈಡಿಗ ಸಮಾಜದ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಬುದ್ಧ, ಬಸವರಿಗೆ ಸಮಾನವಾದ ತತ್ವ ಚಿಂತನೆಯನ್ನು ನಾರಾಯಣ ಗುರುಗಳು ಹೊಂದಿದ್ದು, ಶಿಕ್ಷಣ ಹಾಗೂ ಅಸ್ಪೃಶ್ಯತೆ ಹೋಗಲಾಡಿಸುವ ಬಗ್ಗೆ ಕೇರಳದಲ್ಲಿ ಬಹು ದೊಡ್ಡ ಕ್ರಾಂತಿಯನ್ನು ಉಂಟು ಮಾಡಿದ ಮಹಾನ್ ಪುರುಷ ನಾರಾಯಣ ಗುರುಗಳು ಎಂದ ಅವರು, ಕೇರಳದ ಪ್ರತಿ ಮನೆ ಮನೆಗಳಲ್ಲಿ ಬ್ರಹ್ಮರ್ಷಿ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪೂಜೆ ಮಾಡುವುದು ನಮಸ್ಕರಿಸುವುದು ಇದಕ್ಕೆ ಸಾಕ್ಷಿ ಎಂದರು.

ಬ್ರಹ್ಮರ್ಷಿ ನಾರಾಯಣ ಗುರುಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಡಾ.ನೀಲೇಶ್ ಎಸ್.ಎಂ, ಕೆಲವು ವರ್ಗದ ಜನರನ್ನು ತಾತ್ಸಾರ ಮತ್ತು ಕೀಳರಿಮೆಯಿಂದ ನೋಡುತ್ತಿದ್ದ ಕಾಲದಲ್ಲಿ ಅತ್ಯಂತ ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಸಮಾನತೆ ಎಂದರೆ ಏನು ಎಂಬುದರ ಅರಿವು ಮೂಡಿಸಿದ ಮಹಾನ್ ಚೇತನ ಶ್ರೀ ನಾರಾಯಣ ಗುರುಗಳು ಎಂದರು.ಇಂದು ಕೆಳ ವರ್ಗದ ಜನರು ಉತ್ಪಾದಿಸುವಂತಹ ವಿವಿಧ ರೀತಿಯ ಎಲ್ಲ ಉತ್ಪನ್ನಗಳನ್ನು ಎಲ್ಲಾ ವರ್ಗದವರು ಅನುಭವಿಸುತ್ತಾರೆ. ಆದರೆ ಜಾತಿ ವಿಚಾರ ಅಂತ ಬಂದಾಗ ಆಂತರಿಕವಾಗಿ ದೂರ ಇರುತ್ತಾರೆ. ಇಂತಹ ಮೌಢ್ಯ ತೊಲಗಬೇಕಾದರೆ ಪ್ರತಿಯೊಬ್ಬರಿಗೂ ಶಿಕ್ಷಣದ ಅರಿವು ಅಗತ್ಯ ಎಂದ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಆಶಯದಂತೆ ಶಿಕ್ಷಣದಿಂದಲೇ ಮಾತ್ರ ಅಸ್ಪೃಶ್ಯತೆ ಅಳಿಸಲು ಸಾಧ್ಯ ಎಂದು ತಿಳಿಸಿದರು.

ತಹಸೀಲ್ದಾರ್ ಮಲ್ಲೇಶಪ್ಪ ಬಿ.ಪೂಜಾರ್ ಮಾತನಾಡಿ, ಮಹಾನ್ ಸಾಧಕರನ್ನು ಕೇವಲ ಆಚರಣೆಗೆ ಸೀಮಿತ ಮಾಡಬಾರದು ಅವರ ಮಾರ್ಗದರ್ಶನ ಹಾಗೂ ತತ್ವಗಳಲ್ಲಿ ಅಲ್ಪವಾದರೂ ಅನುಸರಿಸಿದರೆ ಆಚರಣೆಗಳಿಗೆ ಅರ್ಥವಿರುತ್ತದೆ ಎಂದರು.ತಾಲೂಕು ಆರ್ಯ ಈಡಿಗ ಸಮಾಜ ಅಧ್ಯಕ್ಷ ಪ್ರಕಾಶ್ ಮಡುಬ ಸಿದ್ದಾಪುರ ಮಾತನಾಡಿ, ಸಮಾಜದ ಸಂಘಟನೆಗೆ ಬಲ ದೊರೆತಿದ್ದು, ದೊಡ್ಡ ಸಂಖ್ಯೆಯಲ್ಲಿ ನಾರಾಯಣ ಗುರುಗಳ ಜಯಂತಿಗೆ ಆಗಮಿಸಿರುವುದು ಸಂತಸ ತಂದಿದೆ. ತಾಲೂಕಿನಲ್ಲಿ ಸಂಘಟನೆಗಾಗಿ ನಿವೇಶನ ಅಗತ್ಯವಿದ್ದು ಕಲ್ಪಿಸಿಕೊಡುವಂತೆ ಸಂಸದರಿಗೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಂಸದರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ತಾ.ಪಂ ಪ್ರಭಾರಿ ಇಒ ಕಿರಣ್ ಕುಮಾರ್ ಹರ್ತಿ, ತಾ.ಆರ್ಯ ಈಡಿಗ ಸಮಾಜದ ಕಾರ್ಯದರ್ಶಿ ದೇವರಾಜ್,ನಗರ ಅಧ್ಯಕ್ಷ ಚಾಮರಾಜ,ಇ ಎಚ್‌ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.