ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಪುರ
ಮಾಜಿ ಸಿಎಂ ದೇವರಾಜ ಅರಸು, ಕೇರಳದ ಶ್ರೀ ನಾರಾಯಣ ಗುರು ಹಿಂದುಳಿದ ವರ್ಗಗಳಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಸಮಾನತೆಗಾಗಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ತಿಳಿಸಿದರು.ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ದಿ. ದೇವರಾಜ ಅರಸು, ನಾರಾಯಣ ಗುರುಗಳ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದ ಭೌಗೋಳಿಕ, ರಾಜಕೀಯ, ವಿಶ್ಲೇಷಣೆಗೆ ನಿಲುಕುವ ಮೊಟ್ಟ ಮೊದಲ ವ್ಯಕ್ತಿಯೇ ದೇವರಾಜು ಅರಸು. 1902ರ ಜು.26ರಂದು ಮೊಟ್ಟ ಮೊದಲ ಬಾರಿಗೆ ಛತ್ರಪತಿ ಸಾಹು ಮಹಾರಾಜರು ಹಿಂದುಳಿದವರು ಮತ್ತು ಎಸ್ಸಿ ಎಸ್ಟಿಗಳಿಗೆ ಶೇ.50 ರಷ್ಟು ಮೀಸಲಾತಿ ಜಾರಿಗೆ ತಂದಿದ್ದರು. ನಂತರ ಅಂಬೇಡ್ಕರ್ 1950ರಲ್ಲಿ ಎಸ್ಸಿ,ಎಸ್ಟಿ ಸಮುದಾಯಕ್ಕೆ ಉದ್ಯೋಗ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಮೀಸಲಾತಿಯನ್ನು ಜಾರಿಗೆ ತಂದರು. ಹಿಂದುಳಿದ ಜಾತಿಗಳಿಗೆ ಆರ್ಟಿಕಲ್ 340 ಅಡಿಯಲ್ಲಿ ಮೀಸಲಾತಿಯನ್ನು ಕೊಟ್ಟಿದ್ದಾರೆ ಎಂದರು.ಹಿಂದುಳಿದ ವರ್ಗಗಳಿಗೆ ಸಂವಿಧಾನದಲ್ಲಿರುವ ಮೀಸಲಾತಿಯನ್ನು ಜಾರಿ ಮಾಡುವಂತೆ ಅಂಬೇಡ್ಕರ್ ಒತ್ತಡ ಹಾಕಿದಾಗ ನೆಹರು ಕಾಕಾ ಕಾಲೇಕರ್ (ಆಚಾರ್ಯ ಕಾಲೇಕರ್) ಆಯೋಗ ರಚನೆ ಮಾಡಿದರು. ಹಿಂದುಳಿದ ಜಾತಿಗಳ ಸ್ಥಿತಿಗತಿಗಳ ವರದಿಯನ್ನು ಪಡೆದರೂ ಸಹ ನೆಹರು ಅದನ್ನು ಜಾರಿ ಮಾಡಲಿಲ್ಲ. ನಂತರ ಅಧಿಕಾರಕ್ಕೆ ಬಂದ ಇಂದಿರಾಗಾಂಧಿ ಬಿಪಿ ಮಂಡಲ್ ಆಯೋಗ ರಚನೆ ಮಾಡಿದರೂ ಸಹ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಜಾರಿ ಮಾಡಲಿಲ್ಲ ಎಂದರು.
ಗ್ರೇಡ್-2 ತಹಶೀಲ್ದಾರ್ ಶಿವಕುಮಾರ್ ಮಾತನಾಡಿ, ಬ್ರಹ್ಮ ಶ್ರೀ ನಾರಾಯಣ ಗುರುಗಳು 18ನೇ ಶತಮಾನದಲ್ಲೇ ಜಾತಿ-ಧರ್ಮ, ಮೇಲು-ಕೀಳು ಎಂಬ ತಾರತಮ್ಯ ತೊಡೆದು ಹಾಕಿ, ಸಮಾನತೆಯನ್ನು ನೆಲೆಗೊಳಿಸಲು ಹೋರಾಟ ಮಾಡಿದ್ದರು. ಪ್ರಥಮ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಇಂದಿರಾಗಾಂಧಿ 20 ಅಂಶಗಳ ಕಾರ್ಯಕ್ರಮದಲ್ಲಿ ಉಳುವವನೇ ಭೂ ಒಡೆಯ ಎಂಬ ಕಾನೂನು ಜಾರಿಗೆ ತಂದರು. ಇದರಿಂದ ಭೂಮಿ ಇಲ್ಲದ ಹಿಂದುಳಿದ ಜಾತಿಗಳು ಬಡವರು ರೈತರಿಗೂ ಸಮಾಜದಲ್ಲಿ ನೆಮ್ಮದಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು ಎಂದರು.ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ತಾಪಂ ಇ ಒ ಭೈರಪ್ಪ, ನಗರಸಭೆ ಪೌರಾಯುಕ್ತ ಮಹದೇವ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಲಿಂಗೇಗೌಡ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಲೋಕೇಶ್ವರಿ, ನಿಲಯ ಮೇಲ್ವಿಚಾರಕ ರಮೇಶ್, ಮಂಜುನಾಥ್, ಸಿದ್ದಲಿಂಗಪ್ಪ, ಅರಸು ಸಮುದಾಯದ ಅಧ್ಯಕ್ಷ ದೇವರಾಜ ಅರಸು, ಕುಮಾರಸ್ವಾಮಿ, ಗಬ್ಬಾಡಿ ಕಾಡೇಗೌಡ, ಯುವಶಕ್ತಿ ವೇದಿಕೆ ಶ್ರೀನಿವಾಸ್, ಸ್ವ ಕರವೇ ಜಿಲ್ಲಾಧ್ಯಕ್ಷ ಭಾಸ್ಕರ್, ನವೀನ್ ಉಪಸ್ಥಿತರಿದ್ದರು.
;Resize=(128,128))
;Resize=(128,128))