ಸಾರಾಂಶ
70ರ ದಶಕದಲ್ಲಿ ಕರ್ನಾಟಕ ಸುವರ್ಣ ಯುಗಕ್ಕೆ ಸಾಕ್ಷಿಯಾಯಿತು. ಕರ್ನಾಟಕ ಪುನರ್ ನಿರ್ಮಾಣದಲ್ಲಿ ಅವರ ಕ್ರಾಂತಿಕಾರಕ ದಿಟ್ಟ ಆಡಳಿತ ಕ್ರಮಗಳು ಜನಮಾನಸದಲ್ಲಿ ಸುಧಾರಣೆ ತಂದವು, ಜೀತಪದ್ಧತಿ, ಬಾಲಕಾರ್ಮಿಕ ಪದ್ಧತಿ, ಮಲಹೊರುವ ಪದ್ಧತಿಗಳನ್ನು ನಿಲ್ಲಿಸಲು ಕಠಿಣ ಕ್ರಮ ಜಾರಿಗೊಳಿಸಲಾಯಿತು
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ದೇಶದಲ್ಲಿ ಪ್ರಪ್ರಥಮ ಬಾರಿಗೆ ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತಂದ ಮೊದಲ ಮುಖ್ಯ ಮಂತ್ರಿ ದೇವರಾಜ ಅರಸು ಎಂದು ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್ ತಿಳಿಸಿದರು. ಜಿಲ್ಲಾಡಳಿತ, ಜಿಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಇವರ ಸಂಯುಕ್ತಾಶ್ರಯದಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಿ. ದೇವರಾಜ ಅರಸು ರವರ 109ನೇ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.ದಿಟ್ಟ ಆಡಳಿತಗಾರ ಅರಸು
ಕಾರ್ಯಕ್ರಮದಲ್ಲಿ ಅರಸು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಉಳುವವನೇ ಭೂಮಿಯ ಒಡೆಯನೆಂದು ದೇವರಾಜ ಅರಸು ಅವರು ಭೂ ಸುಧಾರಣೆ ತಂದರು. ಈ ಕಾರ್ಯವನ್ನು ಬೇರೆ ಯಾವುದೇ ನಾಯಕರು, ಬೇರೆ ರಾಜ್ಯಗಳಲ್ಲಿ ಜಾರಿಗೆ ತಂದಿದ್ದರೆ ರಾಜಕೀಯವಾಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದರು. ಅಂತಹ ದಿಟ್ಟ ಆಡಳಿತ ಕ್ರಮ ಕೈಗೊಂಡ ಧೀಮಂತ ಮತ್ತು ಜೀವಂತ ನಾಯಕ ದೇವರಾಜ ಅರಸು ಸಾಮಾಜಿಕ ಹರಿಕಾರರಾಗಿ, ಎಲ್ಲರಿಗೂ ಸಮಾನತೆಯನ್ನು ನೀಡಲು ಶಿಕ್ಷಣ ಮತ್ತು ರಾಜಕೀಯ ಅಧಿಕಾರ ನೀಡಿದಾಗ ಮಾತ್ರ ಸಾಧ್ಯ ಎಂಬುದನ್ನು ಅರಿತ ಅರಸು ರವರು ಆ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಅನುಷ್ಠಾನ ಮಾಡಿದರು ಎಂದರು.70ರ ದಶಕ ಸುವರ್ಣ ಯುಗ
ಕನ್ನಡ ಸಾಹಿತಿ ಪರಿಷತ್ ಜಿಲ್ಲಾಧ್ಯಕ್ಷ ಡಾ. ಕೋಡಿರಂಗಪ್ಪ ಮಾತನಾಡಿ, ಅರಸು ರವರಿಂದ 70ರ ದಶಕದಲ್ಲಿ ಕರ್ನಾಟಕ ಸುವರ್ಣ ಯುಗಕ್ಕೆ ಸಾಕ್ಷಿಯಾಯಿತು. ಕರ್ನಾಟಕ ಪುನರ್ ನಿರ್ಮಾಣದಲ್ಲಿ ಅವರ ಕ್ರಾಂತಿಕಾರಕ ದಿಟ್ಟ ಆಡಳಿತ ಕ್ರಮಗಳು ಜನಮಾನಸದಲ್ಲಿ ಸುಧಾರಣೆ ತಂದವು, ಜೀತಪದ್ಧತಿ, ಬಾಲಕಾರ್ಮಿಕ ಪದ್ಧತಿ, ಮಲಹೊರುವ ಪದ್ಧತಿಗಳನ್ನು ನಿಲ್ಲಿಸಲು ಕಟ್ಟುನಿಟ್ಟಿನ ಕ್ರಮ ಜಾರಿಗೆ ತಂದರು. ಭೂಸುಧಾರಣೆ ಕಾಯ್ದೆ ಜಾರಿಗೆ ತಂದು ಉಳುವವನಿಗೆ ಭೂಮಿ ಕೊಟ್ಟರಲ್ಲದೆ, ಕೊಟ್ಟ ಭೂಮಿ ರಕ್ಷಣೆಗೆ ಭೂ ನ್ಯಾಯ ಮಂಡಳಿ ಸ್ಥಾಪಿಸಿದರು ಎಂದು ವಿವರಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮುನಿರತ್ನಮ್ಮ ಮಾತನಾಡಿ, ಸಮಾಜದಲ್ಲಿ ಹಲವಾರು ಪಿಡುಗುಗಳನ್ನು ತೊಡೆದು ಹಾಕುವ ಜೊತೆಗೆ ಭೂ ಸುಧಾರಣೆ ಕಾಯ್ದೆ ಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದ ಜೀವಂತ ನಾಯಕ ದೇವರಾಜ ಅರಸು ರವರು ಅವರ ಆಡಳಿತ ಸುಧಾರಣೆಯಿಂದ ನಾನು ಈ ಸ್ಥಾನದಲ್ಲಿ ಇದ್ದೇನೆ. ಅವರ ಕೊಡುಗೆ ಯಿಂದ ಜಿಲ್ಲೆಯಲ್ಲಿ 58 ವಿದ್ಯಾರ್ಥಿ ನಿಲಯಗಳು ನಡೆಯುತ್ತಿದ್ದು 6123 ಮಕ್ಕಳಿಗೆ ಉಚಿತ ಊಟ,ವಸತಿ ಮತ್ತು ಶಿಕ್ಷಣ ದೊರಕುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಅತಿ ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.ಅದ್ಧೂರಿ ಮೆರವಣಿಗೆ:ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಚಿಕ್ಕಬಳ್ಳಾಪುರ ನಗರದ ಜೈ ಭೀಮ್ ಹಾಸ್ಟೆಲ್ ನಿಂದ ಪ್ರಾರಂಭ ವಾದ ದೇವರಾಜ ಅರಸು ರವರ ಪಲ್ಲಕ್ಕಿ ಮೆರವಣಿಗೆ, ಬೃಹತ್ ಭಾವಚಿತ್ರ ಪ್ರದರ್ಶನ, ಕುಂಭ ಮೇಳ, ಕಲಾತಂಡಗಳೊಂದಿಗೆ ಅದ್ದೂರಿ ಮೆರವಣಿಗೆಯು ನಗರದ ಮುಖ್ಯ ಬೀದಿಗಳಲ್ಲಿ ಮೂಲಕ ಅಂಬೇಡ್ಕರ್ ಭವನದವರೆಗೆ ಸಾಗಿತು.ಈ ಸಂದರ್ಭದಲ್ಲಿ ತಹಸೀಲ್ದಾರ್ ರವಿ, ಪೌರಾಯುಕ್ತ ಉಮಾ ಶಂಕರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮುನೇಗೌಡ, ಉಪ್ಪಾರ ಸಂಘದ ವೆಂಕಟೇಶ್, ಯಾದವ ಸಂಘದ ಅಧ್ಯಕ್ಷ ಆರ್. ವೆಂಕಟೇಶ್, ಎನ್ ಶ್ರೀನಿವಾಸ್, ರಾಜೇಶ್ವರಿ, ಸೈಯದ್ ಇಸ್ಮೈಲ್, ಸಮುದಾಯದ ಪದಾಧಿಕಾರಿಗಳು ಹಾಗೂ ಮುಖಂಡರು, ಹಾಸ್ಟೆಲ್ ಮತ್ತು ವಸತಿ ಶಾಲೆಗಳ ವಾರ್ಡನ್ ಗಳು, ವಿದ್ಯಾರ್ಥಿಗಳು ಇದ್ದರು.